ಮೂಳೆ ಕ್ಯಾನ್ಸರ್‌ನ ಈ ಆರಂಭಿಕ ಲಕ್ಷಣಗಳು ನಿಮಗೆ ಗೊತ್ತಿರಲಿ

Update: 2019-08-22 11:24 GMT

ಮೂಳೆಯಲ್ಲಿ ಗಡ್ಡೆ ರೂಪುಗೊಳ್ಳತೊಡಗಿದಾಗ ಮೂಳೆ ಕ್ಯಾನ್ಸರ್ ಆರಂಭವಾಗುತ್ತದೆ. ಕ್ಯಾನ್ಸರ್ ಸಾಮಾನ್ಯವಾಗಿ ಕೈ ಅಥವಾ ಕಾಲಿನ ಅತ್ಯಂತ ಉದ್ದದ ಮೂಳೆಗೆ ದಾಳಿಯಿಡುತ್ತದೆ. ಅದು ವೃದ್ಧಿಗೊಳ್ಳುತ್ತಿದ್ದಂತೆ ಮೂಳೆಯ ಸಹಜ ಜೀವಕೋಶಗಳನ್ನು ನಾಶಗೊಳಿಸುತ್ತದೆ ಮತ್ತು ದೇಹದ ಇತರ ಭಾಗಗಳಿಗೆ ಹರಡುತ್ತದೆ. ಮೂಳೆ ಕ್ಯಾನ್ಸರ್ ಹೆಚ್ಚಾಗಿ ಮಕ್ಕಳು ಮತ್ತು ಯುವಜನರನ್ನು ಬಾಧಿಸುತ್ತದೆ.

► ಮೂಳೆ ಕ್ಯಾನ್ಸರ್‌ನ ಸಾಮಾನ್ಯ ವಿಧಗಳು

ಆಸ್ಟಿಯೋಸರ್ಕೋಮಾ: ಇದು ಅತ್ಯಂತ ಸಾಮಾನ್ಯ ರೂಪದ ಮೂಳೆ ಕ್ಯಾನ್ಸರ್ ಆಗಿದ್ದು,ಹೆಚ್ಚಾಗಿ 10ರಿಂದ 30 ವರ್ಷ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ. ಹೆಚ್ಚಾಗಿ ಕೈಗಳು,ಪಾದಗಳು ಮತ್ತು ಅಸ್ಥಿಕುಹರ ಮೂಳೆ ಕ್ಯಾನ್ಸರ್‌ಗೆ ಗುರಿಯಾಗುತ್ತವೆ.

ಇವಿಂಗ್ಸ್ ಸರ್ಕೋಮಾ: ಇದು ಕೂಡ ಹೆಚ್ಚಾಗಿ ಮಕ್ಕಳು ಮತ್ತು ಯುವಜನರಲ್ಲಿ ಕಾಣಿಸಿಕೊಳ್ಳುತ್ತದೆ. ಕೈಗಳು,ಕಾಲುಗಳು, ಎದೆ, ಅಸ್ಥಿ ಕುಹರ ಮತ್ತು ತೊಡೆಸಂಧಿಯಲ್ಲಿ ಇದು ಆರಂಭವಾಗುತ್ತದೆ.

ಕೊಂಡ್ರೊ ಸರ್ಕೋಮಾ: 40 ವರ್ಷಕ್ಕಿಂತ ಹೆಚ್ಚಿನ ಪ್ರಾಯದವರು ಈ ವಿಧದ ಮೂಳೆಕ್ಯಾನ್ಸರ್‌ಗೆ ಗುರಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ಸಾಮಾನ್ಯವಾಗಿ ಕೈಗಳು,ಪಾದಗಳು ಮತ್ತು ಅಸ್ಥಿಕುಹರದಲ್ಲಿ ಕಾಣಿಸಿಕೊಳ್ಳುತ್ತದೆ.

ಲ್ಯುಕೆಮಿಯಾದಂತಹ ಕ್ಯಾನ್ಸರ್ ಮೂಳೆಗಳ ಅಂಗಾಂಶವಾದ ಅಸ್ಥಿಮಜ್ಜೆಯಲ್ಲಿ ಆರಂಭಗೊಳ್ಳುತ್ತದೆ. ಆದರೆ ಸಾಮಾನ್ಯವಾಗಿ ಇದನ್ನು ಮೂಳೆ ಕ್ಯಾನ್ಸರ್ ಎಂದು ಪರಿಗಣಿಸಲಾಗುವುದಿಲ್ಲ.

► ಮೂಳೆ ಕ್ಯಾನ್ಸರ್ ಯಾವಾಗ ಉಂಟಾಗುತ್ತದೆ?

ಮೂಳೆಗಳ ವಿರೂಪ ಮತ್ತು ಉರಿಯೂತ ಲಕ್ಷಣಗಳಿಂದ ಗುರುತಿಸಲಾಗುವ ಪ್ಯಾಗೆಟ್ಸ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳು ಈ ಪೈಕಿ ಯಾವುದೇ ಕ್ಯಾನ್ಸರ್‌ಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದಲ್ಲದೆ ಕ್ಯಾನ್ಸರ್‌ಗೆ ಚಿಕಿತ್ಸೆ,ವಿಕಿರಣಕ್ಕೆ ಹೆಚ್ಚು ಒಡ್ಡಿಕೊಳ್ಳುವಿಕೆ,ಕೆಲವು ಕ್ಯಾನ್ಸರ್ ಔಷಧಿಗಳ ಸೇವನೆ ಇವುಗಳಿಂದಲೂ ಮೂಳೆ ಕ್ಯಾನ್ಸರ್ ಉಂಟಾಗುತ್ತದೆ. ಮಕ್ಕಳು ಮತ್ತು ಯುವಜನರಲ್ಲಿ ಮೂಳೆಗಳು ಬೆಳವಣಿಗೆಯಾಗುತ್ತಿರುವುದರಿಂದ ಅವರು ಮೂಳೆ ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯ ಹೆಚ್ಚಾಗಿರುತ್ತದೆ.

► ಮೂಳೆ ಕ್ಯಾನ್ಸರ್‌ನ ಲಕ್ಷಣಗಳು

ನೋವು: ಇದು ಮೊದಲ ಸಂಕೇತವಾಗಿದೆ. ನಿಧಾನವಾಗಿ ಆರಂಭಗೊಳ್ಳುವ ನೋವು ಕಾಲಕ್ರಮೇಣ ತೀವ್ರಗೊಳ್ಳುತ್ತದೆ ಮತ್ತು ಯಾವುದೇ ಚಿಕಿತ್ಸೆಗೂ ಬಗ್ಗುವುದಿಲ್ಲ. ಆದರೆ ಇಂತಹ ನೋವಿಗೆ ಕ್ಯಾನ್ಸರ್ ಅಲ್ಲದೆ ಸಂಧಿವಾತದಂತಹ ಇತರ ಕಾಯಿಲೆಗಳೂ ಕಾರಣವಾಗುತ್ತವೆ. ಹೀಗಾಗಿ ಇಂತಹ ನೋವಿನಿಂದ ನರಳುತ್ತಿದ್ದರೆ ಅದರ ಸ್ವರೂಪವನ್ನು ತಿಳಿದುಕೊಳ್ಳಲು ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ.

ಮೂಳೆ ಮುರಿತ: ಕ್ಯಾನ್ಸರ್ ಗಡ್ಡೆಯು ಮೂಳೆಗಳನ್ನು ದುರ್ಬಲವಾಗಿಸುತ್ತದೆ,ಪರಿಣಾಮವಾಗಿ ಅದು ಸುಲಭವಾಗಿ ಮುರಿತಕ್ಕೊಳಗಾಗುತ್ತದೆ. ಯಾವುದೇ ಮೂಳೆಯ ಮೇಲೆ ಉಂಡೆ ಕಟ್ಟಿದಂತಹ ಬೆಳವಣಿಗೆ,ದಣಿವು,ಬಳಲಿಕೆ,ಮೂಳೆಯ ಭಾಗದಲ್ಲಿ ಊತ ಅಥವಾ ಕೆಂಪಗಾಗುವಿಕೆ,ಯಾವುದೇ ಕಾರಣವಿಲ್ಲದೆ ತೂಕ ಇಳಿಕೆ ಇವೆಲ್ಲ ಮೂಳೆ ಕ್ಯಾನ್ಸರ್‌ನ್ನು ಸೂಚಿಸಬಹುದು.

 ಹಿಂದೆಲ್ಲ ಮೂಳೆ ಕ್ಯಾನ್ಸರ್‌ಗೆ ಚಿಕಿತ್ಸೆಯಿರಲಿಲ್ಲ,ಹೀಗಾಗಿ ರೋಗಿಗಳು ಕೈಕಾಲುಗಳನ್ನು ಕಳೆದುಕೊಳ್ಳುವ ಅಪಾಯಕ್ಕೆ ಗುರಿಯಾಗುತ್ತಿದ್ದರು. ಆದರೆ ವೈದ್ಯಕೀಯ ಕ್ಷೇತ್ರವು ಮುಂದುವರಿದ ಪರಿಣಾಮ ಇಂದು ಮೂಳೆ ಕ್ಯಾನ್ಸರ್‌ನ್ನು ಸಕಾಲದಲ್ಲಿ ಪತ್ತೆ ಹಚ್ಚಿದರೆ ರೋಗಿಯನ್ನು ಸಂಪೂರ್ಣವಾಗಿ ಗುಣಮುಖ ಮಾಡಲು ಸಾಧ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News