ನೆರೆ ಪರಿಹಾರಕ್ಕೆ ಕೇಂದ್ರ ಒಂದು ರೂಪಾಯಿಯೂ ಬಿಡುಗಡೆ ಮಾಡಿಲ್ಲ: ಎಚ್.ಡಿ.ದೇವೇಗೌಡ

Update: 2019-08-21 14:48 GMT

ಬೆಂಗಳೂರು, ಆ.21: ರಾಜ್ಯದಲ್ಲಿ ನೆರೆ ಹಾವಳಿಯಿಂದ ಸಂತ್ರಸ್ತರಾಗಿರುವವರಿಗೆ ಪರಿಹಾರ ನೀಡಲು ಕೇಂದ್ರ ಸರಕಾರದಿಂದ ಒಂದು ರೂಪಾಯಿಯನ್ನು ಬಿಡುಗಡೆ ಮಾಡಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದಲ್ಲಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರದ ಆಡಳಿತಾವಧಿಯಲ್ಲಿ 100 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿತ್ತು. ಆಗ ಮೂರು ಸಾವಿರ ಕೋಟಿ ರೂ.ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು ಎಂದರು.

ಆಗ ಬರಗಾಲದ ಕುರಿತು ಮಾಡಿದ್ದ ಮನವಿಗೆ ಈಗ 1,029 ಕೋಟಿ ರೂ.ಕೊಟ್ಟಿದ್ದಾರೆ. ರಾಜ್ಯದಲ್ಲಿ ಈಗ ಉಂಟಾಗಿರುವ ನೆರೆ ಹಾವಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಯಾವ ಪರಿಹಾರವನ್ನು ಬಿಡುಗಡೆ ಮಾಡಿಲ್ಲ ಎಂದು ಅವರು ಆರೋಪಿಸಿದರು.

ಕೇಂದ್ರ ಸರಕಾರವು ನರೇಗಾ ಯೋಜನೆಯಡಿ ರಾಜ್ಯಕ್ಕೆ 1,700 ಕೋಟಿ ರೂ. ಬಾಕಿ ಕೊಡಬೇಕು. ಅದನ್ನು ಈವರೆಗೆ ಬಿಡುಗಡೆ ಮಾಡಿಲ್ಲ. ಕುಮಾರಸ್ವಾಮಿ ಸರಕಾರವು ಕೂಲಿ ಕಾರ್ಮಿಕರಿಗೆ ಆಗುತ್ತಿರುವ ತೊಂದರೆಯನ್ನು ಗಮನಿಸಿ, ರಾಜ್ಯ ಸರಕಾರದಿಂದಲೇ ಕೇಂದ್ರದ ಪಾಲನ್ನು ಭರಿಸಿತ್ತು ಎಂದು ದೇವೇಗೌಡ ಹೇಳಿದರು.

ನನಗೆ ಹೋರಾಟ ಮಾಡುವುದು ಗೊತ್ತಿದೆ. ಯಾರಿಗೂ ಹೆದರಬೇಕಿಲ್ಲ. ಅಟಲ್ ಬಿಹಾರಿ ವಾಜಪೇಯಿ ಸರಕಾರದ ಅವಧಿಯಲ್ಲಿ ರಾಜ್ಯದಲ್ಲಿ ಬರ ಮತ್ತು ನೆರೆ ಪರಿಸ್ಥಿತಿ ಉಂಟಾಗಿದ್ದಾಗ 2,500 ಜನರನ್ನು ಹೊಸದಿಲ್ಲಿಗೆ ಕರೆದುಕೊಂಡು ಹೋಗಿದ್ದೆ ಎಂದು ಅವರು ಸ್ಮರಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News