ಬ್ಯಾಟರಾಯನಪುರಕ್ಕೆ ಮೀಸಲಾದ 400 ಕೋಟಿ ರೂ.ಅನುದಾನ ಬಿಡುಗಡೆ ಆಗ್ರಹಿಸಿ ಧರಣಿ

Update: 2019-08-21 16:12 GMT

ಬೆಂಗಳೂರು, ಆ.21: ಬ್ಯಾಟರಾಯನಪುರ ಕ್ಷೇತ್ರಕ್ಕೆ ತಡೆಹಿಡಿದಿರುವ 400 ಕೋಟಿ ರೂ.ಅನುದಾನವನ್ನು ಈ ಕೂಡಲೆ ಬಿಡುಗಡೆ ಮಾಡಬೇಕು ಹಾಗೂ ಇಲ್ಲಿನ ಬೆಳ್ಳಳ್ಳಿ ಮತ್ತು ಮಿಟಗಾನಹಳ್ಳಿ ಕ್ವಾರಿಯಲ್ಲಿ ಅವೈಜ್ಞಾನಿಕವಾಗಿ ಕಸ ಹಾಕುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಬ್ಯಾಟರಾಯನಪುರ ಕ್ಷೇತ್ರ ಕಾಂಗ್ರೆಸ್ ಮುಖಂಡರು ಹಾಗೂ ಸ್ಥಳೀಯರು ಬೆಳ್ಳಹಳ್ಳಿ ಸರ್ಕಲ್ ನಲ್ಲಿ ಧರಣಿ ನಡೆಸಿದರು.

ರಾಜ್ಯದಲ್ಲಿ ಆಡಳಿತದಲ್ಲಿರುವ ಬಿ.ಎಸ್.ಯಡಿಯೂರಪ್ಪನೇತೃತ್ವದ ಬಿಜೆಪಿ ಸರಕಾರ ಬ್ಯಾಟರಾಯನಪುರ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ ಸುಮಾರು 400ಕೋಟಿ ಅನುದಾನವನ್ನು ತಡೆಹಿಡಿದಿದ್ದಾರೆ. ಆ ಮೂಲಕ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬ್ಯಾಟರಾಯನಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಗೋಪಾಲ್ ಗೌಡ ಮಾತನಾಡಿ, ಬಿಜೆಪಿ ಸರಕಾರ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ ಅನುದಾನ ತಡೆಹಿಡಿದಿರುವುದರಿಂದ ಬಿಬಿಎಂಪಿ 5, 6 ಹಾಗೂ 11ನೇ ವಾರ್ಡ್‌ನಲ್ಲಿ ರಸ್ತೆ ಚರಂಡಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕೆಲಸಗಳು ಬಾಕಿ ಇವೆ. ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದು, ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ವಾರ್ಡ್ ನಂ.11ರ ಪಾಲಿಕೆ ಸದಸ್ಯ ಪಾರ್ಥಿಬರಾಜನ್, ಕಾಂಗ್ರೆಸ್ ಹಿರಿಯ ಮುಖಂಡರಾದ ದಾನೇಗೌಡ, ಮಂಜುನಾಥಗೌಡ, ಅಶೋಕನ್, ವಿ.ಹರಿ, ಯುವ ಕಾಂಗ್ರೆಸ್ ಮುಖಂಡರಾದ ಚೌಡೇಗೌಡ, ಎನ್.ಕೆ.ಮಹೇಶ್ ಕುಮಾರ್, ಶಿವಕುಮಾರ್, ತಾ.ಪಂ.ಸದಸ್ಯ ನಾಗರಾಜ್ ಸೇರಿದಂತೆ ಸ್ಥಳಿಯ ನಾಗರಿಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News