ಆರೋಗ್ಯಾಧಿಕಾರಿಗಳ ದಿಢೀರ್ ದಾಳಿ: ಪಿಒಪಿ ಗಣೇಶ ಮೂರ್ತಿಗಳು ಮುಟ್ಟುಗೋಲು

Update: 2019-08-21 17:07 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.21: ಬಿಬಿಎಂಪಿ ದಕ್ಷಿಣ ವಲಯದ ಆರೋಗ್ಯಾಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿ ಪಿಒಪಿ ಗಣೇಶ ಮೂರ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡರು.

ಬುಧವಾರ ಲಾಲ್ಬಾಗ್ ಪಶ್ಚಿಮ ದ್ವಾರದ ಹತ್ತಿರ, ಆರ್‌ವಿ ರಸ್ತೆಯ ಮಾವಳ್ಳಿ ಬಳಿ ಬೆಳಗ್ಗೆ ಪಿಒಪಿ ಗಣೇಶ ಮೂರ್ತಿಗಳ ತಯಾರಕರು ಮತ್ತು ಮಾರಾಟ ಮಳಿಗೆಗಳ ಮೇಲೆ ತಪಾಸಣೆ ಆರೋಗ್ಯಾಧಿಕಾರಿ ಮನೋರಂಜನ್ ಹೆಗಡೆ ದಾಳಿ ನಡೆಸಿದರು.

ಪಿಒಪಿ ವಿಗ್ರಹಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ವಿನಾಯಕ ಕಂಪನಿಯ ಮಳಿಗೆಯಲ್ಲಿ ನೂರಾರು ಪಿಒಪಿ ಮೂರ್ತಿಗಳು ತಯಾರಿಸಿ ದಾಸ್ತಾನು ಮಾಡಲಾಗಿತ್ತು, ಈ ಹಿಂದೆಯೆ ನೋಟಿಸ್ ನೀಡಿ ತಯಾರಿಕೆ, ದಾಸ್ತಾನು ಮತ್ತು ಮಾರಾಟ ಮಾಡಬಾರದು ಎಂದು ಎಚ್ಚರಿಕೆ ನೀಡಿದರೂ ದಾಸ್ತಾನು ಮಾಡಿರುವುದನ್ನು ಗಮನಿಸಿ ಮುಟ್ಟುಗೋಲು ಹಾಕಿಕೊಳ್ಳುವ ಕಾರ್ಯಾಚರಣೆ ನಡೆಸಲಾಯಿತು.

ಕಾರ್ಯಾಚರಣೆಯಲ್ಲಿ 8 ಟಿಪ್ಪರ್ ಲಾರಿ, ಒಂದು ಕ್ರೇನ್, 30 ಸಿಬ್ಬಂದಿ, 15 ಅಧಿಕಾರಿ ವರ್ಗ, ಸಂಚಾರಿ ಪೋಲಿಸ್ ಹಾಗೂ ಪೋಲಿಸ್ ಸಿಬ್ಬಂದಿ, ಅಧಿಕಾರಿಗಳ ಸಹಾಯದಿಂದ ಮುಟ್ಟುಗೋಲು ಹಾಕಲು ಪ್ರಯತ್ನಿಸಿದಾಗ ಮಾರಾಟ ಮಳಿಗೆ ಮಾಲಕರಿಂದ ಪ್ರತಿರೋಧ ವ್ಯಕ್ತವಾಯಿತು. ಆಗ ಮಾರಾಟ ಮಾಡುವುದಿಲ್ಲವೆಂದು ವಾಗ್ದಾನ ಮಾಡಿದ್ದೀರಿ, ಆದರೆ ಮತ್ತೆ ಪುನರಾವರ್ತನೆ ಮಾಡುತ್ತಿದ್ದೀರಿ. ಇದು ಕಾನೂನು ಬಾಹಿರ ಹಾಗೂ ಪರಿಸರದ ಮೇಲೆ ತುಂಬಾ ಪರಿಣಾಮ ಬೀರುತ್ತದೆ, ಇದನ್ನು ನಿಷೇಧಿಸಲಾಗಿದೆ, ಪದೇ ಪದೇ ತಯಾರಿಸಿ ಮಾರಾಟ ಮಾಡುವುದು ನಿಷಿದ್ಧ. ಅದ್ದರಿಂದ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ ವಿರೋಧ ಮಾಡದೇ ಸಹಕರಿಸಿ ಎಂದು ಆರೋಗ್ಯಾಧಿಕಾರಿ ಎಚ್ಚರಿಕೆ ನೀಡಿದರು.

ತದನಂತರ, ತಯಾರಕ ಮತ್ತು ಮಾರಾಟಗಾರರು ಎರಡು ದಿನಗಳ ಕಾಲಾವಕಾಶ ನೀಡಿದರೆ ನಾವೇ ಬೇರೆಡೆ ಸಾಗಣೆ ಮಾಡಿಕೊಳ್ಳುವುದಾಗಿ ಪಟ್ಟು ಹಿಡಿದರು, ಆಗ ಅಧಿಕಾರಿ ಮತ್ತು ಮಾರಾಟಗಾರರ ನಡುವೆ ಮಾತಿನ ಚಕಮಕಿ ನಡುವೆ ಪೋಲಿಸ್ ಸಹಾಯದೊಂದಿಗೆ ಪಿಒಪಿ ಮೂರ್ತಿಗಳನ್ನು ಮುಟ್ಟುಗೋಲು ಪ್ರಕ್ರಿಯೆ ಪ್ರಾರಂಭಿಸಿದರು.

ಬೃಹತ್ ಗಾತ್ರದ ಪಿಒಪಿ ಮೂರ್ತಿಗಳನ್ನು ಪಾಲಿಕೆಯ ಚಿಕ್ಕನಾಗಮಂಗಲ ಘಟಕಕ್ಕೆ ರವಾನಿಸಲಾಯಿತು, ಇನ್ನುಳಿದ ಮೂರ್ತಿಗಳನ್ನು ಬಹುಬೇಗ ಬೇರೆಡೆಗೆ ಸ್ಥಳಾಂತರ ಗೊಳಿಸಲು ಹಾಗೂ ಕಡ್ಡಾಯವಾಗಿ ಮಾರಾಟ ಮಾಡದಂತೆ ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News