ಡೆಂಗ್ ರೋಗಿಗಳ ಪ್ಲೇಟ್‌ಲೆಟ್ ವೆಚ್ಚ ಭರಿಸಲು ಬಿಬಿಎಂಪಿ ಚಿಂತನೆ

Update: 2019-08-21 17:18 GMT

ಬೆಂಗಳೂರು, ಆ.21: ನಗರದಲ್ಲಿ ದಿನದಿಂದ ದಿನಕ್ಕೆ ಡೆಂಗ್ ಪೀಡಿತರ ಸಂಖ್ಯೆ ಅಧಿಕವಾಗುತ್ತಿದೆ. ಹೀಗಾಗಿ, ಬಿಬಿಎಂಪಿಯಿಂದ 2017 ರ ಮಾದರಿಯಲ್ಲಿ ಪ್ಲೇಟ್‌ಲೆಟ್ ವೆಚ್ಚ ಭರಿಸಲು ನಿರ್ಧರಿಸಲಾಗಿದೆ.

ರಾಜಧಾನಿಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆಯೇ, ಹೆಚ್ಚಿನ ಸಂಖ್ಯೆಯಲ್ಲಿ ಪ್ಲೇಟ್‌ಲೆಟ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರದ ಕಾರಣ ಪೂರೈಕೆ ಕಷ್ಟವಾಗುತ್ತಿದೆ. ಇನ್ನೂ ಬಡವರು, ಮಧ್ಯಮ ವರ್ಗದವರು ಖಾಸಗಿ ಆಸ್ಪತ್ರೆಗಳಿಂದ ಸಾವಿರಾರು ರೂ.ಗಳ ಭರಿಸಿ, ಖರೀದಿಸಲು ಸಾಧ್ಯವಾಗದೇ ಸಂಕಷ್ಟಪಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಯರ್ ನಿಧಿಯ, ಆಸ್ಪತ್ರೆಗಳ ಔಷಧ ಖರೀದಿ ವೆಚ್ಚದಲ್ಲಿ ರೋಗಿಗಳ ಪ್ಲೇಟ್‌ಲೆಟ್ ಖರೀದಿ ವೆಚ್ಚ ಭರಿಸಲು ಮುಂದಾಗಿದೆ. ರೋಗಿಗಳು ಅಥವಾ ಅವರ ಸಂಬಂಧಿಗಳು ಬಿಬಿಎಂಪಿ ವಲಯ ಆರೋಗ್ಯಾಧಿಕಾರಿಗೆ ತಾವು ಖರೀದಿಸಿದ ಪ್ಲೇಟ್‌ಲೆಟ್‌ನ ಬಿಲ್‌ನೊಂದಿಗೆ ಅರ್ಜಿ ಸಲ್ಲಿಸಿ ವೆಚ್ಚ ಮಾಡಿದ ಹಣವನ್ನು ಮರಳಿ ಪಡೆಯಬಹುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಇದೇ ರೀತಿಯಾಗಿ ಡೆಂಗ್ ವ್ಯಾಪಕವಾಗಿ ಹರಡಿತ್ತು. ಆ ಸಂದರ್ಭದಲ್ಲಿಯೂ ಸರಕಾರಿ ಆಸ್ಪತ್ರೆಗಳು ಪ್ಲೇಟ್‌ಲೆಟ್‌ಗಳನ್ನು ಪೂರೈಸಲು ಸಾಧ್ಯವಾಗಿರಲಿಲ್ಲ. ಆಗ ರೋಗಿಗಳು ಖಾಸಗಿಯವರಿಂದಲೇ ಖರೀದಿ ಮಾಡುತ್ತಿದ್ದರು. ಹೀಗಾಗಿ, ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಗರದ ವ್ಯಾಪ್ತಿಯಲ್ಲಿ ರೋಗಿಗಳು ಪ್ಲೇಟ್‌ಲೆಟ್‌ಗಾಗಿ ಮಾಡಿರುವ ವೆಚ್ಚವನ್ನು ಬಿಬಿಎಂಪಿಯಿಂದಲೇ ಭರಿಸಲು ತೀರ್ಮಾನಿಸಿ ಮಾನವೀಯತೆ ಮೆರೆದಿದ್ದರು.

ಏಕರೂಪ ದರಕ್ಕೆ ಮನವಿ: ನಗರದಲ್ಲಿ ಪ್ಲೇಟ್‌ಲೆಟ್ ಬೇಡಿಕೆ ಹೆಚ್ಚಿರುವ ಕಾರಣ ಖಾಸಗಿ ರಕ್ತನಿಧಿ ಕೇಂದ್ರಗಳಲ್ಲಿ ಪ್ಲೇಟ್‌ಲೆಟ್ ಅನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಒಂದು ಯುನಿಟ್‌ಗೆ ಒಂದು ಸಾವಿರವರೆಗೂ ಪಡೆಯುತ್ತಿದ್ದು, ಏಕ ದರ ಪಾಲಿಸುತ್ತಿಲ್ಲ. ಅಲ್ಲದೆ, ಒಮ್ಮೊಮ್ಮೆ 40 ಸಾವಿರಕ್ಕೂ ಅಧಿಕ ಪ್ಲೇಟ್‌ಲೆಟ್ ಲಭ್ಯವಾಗುವ ಸಿಂಗಲ್ ಡೋನರ್ ಪ್ಲೇಟ್‌ಲೆಟ್ಸ್ ಒಂದು ಯುನಿಟ್‌ಗೆ 10 ರಿಂದ 12 ಸಾವಿರ ರೂ.ಗಿಂತಲೂ ಹೆಚ್ಚು ದರ ಪಡೆಯುತ್ತಿದ್ದಾರೆ. ಹೀಗಾಗಿ, ಇದಕ್ಕೆ ಕಡಿವಾಣ ಹಾಕಿ ಏಕರೂಪ ದರ ನಿಯಮ ಜಾರಿ ಮಾಡುವಂತೆ ಮನವಿ ಮಾಡಿದ್ದಾರೆ.

ಅರ್ಜಿ ಸಲ್ಲಿಸುವುದು ಹೇಗೆ?: ಪ್ಲೇಟ್‌ಲೆಟ್ ಖರೀದಿ ಮಾಡಿರುವವರು ತಮ್ಮ ವಾರ್ಡ್‌ನ ಆರೋಗ್ಯ ನಿರೀಕ್ಷಕರ ಮೂಲಕ ವಲಯ ಆರೋಗ್ಯಾಧಿಕಾರಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಜತೆ ಖರೀದಿ ಮಾಡಿದ ಬಿಲ್ ಹಾಗೂ ರೋಗಿಯ ವೈದ್ಯಕೀಯ ದಾಖಲೆಗಳ ಒಂದು ಪ್ರತಿ ಹಾಗೂ ಬಿಬಿಎಂಪಿ ವ್ಯಾಪ್ತಿ ನಿವಾಸಿ ಎಂಬುದನ್ನು ದೃಢ ಪಡೆಸಲು ಗುರುತಿನ ಚೀಟಿ ಇರಬೇಕು.

ನಗರದ ಯಾವುದೇ ಆಸ್ಪತ್ರೆ ಅಥವಾ ಖಾಸಗಿ ರಕ್ತನಿಧಿ ಕೇಂದ್ರಗಳಲ್ಲಿ ಪ್ರಸ್ತಕ ವರ್ಷ ಪ್ಲೇಟ್‌ಲೆಟ್ ಖರೀದಿ ಮಾಡಿದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿಯು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಬಳಿ ಪರಿಶೀಲನೆಯಾಗಿ ಸದ್ಯ ಚಾಲ್ತಿ ಇರುವ ಮೆಡಿಕಲ್ ಬೋರ್ಡಿನಿಂದ ಅನುಮೋದನೆ ಪಡೆದು ಬಳಿಕ ರೋಗಿಯ ಖಾತೆಗೆ ಹಣ ಭರಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News