ಪೋಲಾವರಂ ಯೋಜನೆಯ ಮರುಟೆಂಡರ್‌ಗೆ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದ ತಡೆ

Update: 2019-08-22 14:02 GMT

 ಹೈದರಾಬಾದ್,ಆ.22: ಪೋಲಾವರಂ ಜಲ ವಿದ್ಯುತ್ ಯೋಜನೆ ಕಾಮಗಾರಿಯ ಮರು ಟೆಂಡರ್ ಪ್ರಕ್ರಿಯೆಗೆ ಆಂಧ್ರಪ್ರದೇಶ ಉಚ್ಚ ನ್ಯಾಯಾಲಯವು ಗುರುವಾರ ತಡೆಯಾಜ್ಞೆಯನ್ನು ನೀಡಿದ್ದು,ಇದು ವೈ.ಎಸ್.ಜಗನ್‌ಮೋಹನ ರೆಡ್ಡಿ ಸರಕಾರಕ್ಕೆ ಹಿನ್ನಡೆಯನ್ನುಂಟು ಮಾಡಿದೆ.

ಟಿಡಿಪಿ ಆಡಳಿತದಲ್ಲಿ ಯೋಜನೆಯ ಟೆಂಡರ್ ಗೆದ್ದಿದ್ದ ನವಯುಗ ಇಂಜಿನಿಯರಿಂಗ್ ಕಂಪನಿ ಲಿ.(ಎನ್‌ಇಸಿಎಲ್) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ. ವೈಎಸ್‌ಆರ್ ಕಾಂಗ್ರೆಸ್ ಸರಕಾರವು ಈ ಟೆಂಡರ್‌ನ್ನು ರದ್ದುಗೊಳಿಸಿ ಹೊಸದಾಗಿ ಟೆಂಡರ್‌ಗಳನ್ನು ಕರೆದಿತ್ತು.

ಆರಂಭದಲ್ಲಿ ಮಾಜಿ ಟಿಡಿಪಿ ಸಂಸದ ರಾಯಪಾಟಿ ಸಾಂಬಶಿವ ರಾವ್ ಒಡೆತನದ ಟ್ರಾನ್‌ಸ್ಟ್ರಾಯ್ ಇಂಡಿಯಾ ಲಿ. ಪೋಲಾವರಂ ಯೋಜನೆಯ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಅದರ ನಿಧಾನ ಕಾಮಗಾರಿಯಿಂದ ಅಸಮಾಧಾನಗೊಂಡಿದ್ದ ಆಗಿನ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಕಂಪನಿಯನ್ನು ಬದಲಿಸಲು ಕೇಂದ್ರದ ಅನುಮತಿ ಕೋರಿದ್ದರು.

ಹೊಸದಾಗಿ ಟೆಂಡರ್‌ಗಳನ್ನು ಆಹ್ವಾನಿಸಿದಾಗ ಬಿಡ್ಡರ್‌ಗಳು ಅಂದಾಜು 1,483 ಕೋ.ರೂ.ಗಳ ಮೊತ್ತವನ್ನು ನಮೂದಿಸಿದ್ದು,ಇದು ಟ್ರಾನ್‌ಸ್ಟ್ರಾಯ್ ಒಪ್ಪಿಕೊಂಡಿದ್ದ ಮೊತ್ತಕ್ಕಿಂತ 500 ಕೋ.ರೂ.ಗಳಷ್ಟು ಅಧಿಕವಾಗಿತ್ತು. ಆದರೆ ಎನ್‌ಇಸಿಎಲ್ ಹಳೆಯ ದರದಲ್ಲೇ ಕಾಮಗಾರಿಯನ್ನು ನಿರ್ವಹಿಸುವ ಕೊಡುಗೆಯನ್ನು ಮುಂದಿಟ್ಟಿತ್ತು. ಕಳೆದ ವರ್ಷದ ಜ.30ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಎನ್‌ಇಸಿಎಲ್‌ಗೆ ಯೋಜನೆಯ ಹಸ್ತಾಂತರಕ್ಕೆ ಒಪ್ಪಿಗೆ ನೀಡಿದ್ದರು ಮತ್ತು ಕಂಪನಿಯು ನಿಗದಿತ ವೇಳಾಪಟ್ಟಿಯಂತೆ ಕಾಮಗಾರಿಗಳನ್ನು ನಿರ್ವಹಿಸುತ್ತಿದೆ.

ಹಿಂದಿನ ಟಿಡಿಪಿ ಸರಕಾರದ ಅವಧಿಯಲ್ಲಿ ನೀಡಲಾಗಿದ್ದ ಟೆಂಡರ್‌ಗಳಲ್ಲಿ ಅವ್ಯವಹಾರಗಳು ನಡೆದಿವೆಯೇ ಎನ್ನುವುದನ್ನು ಪತ್ತೆ ಹಚ್ಚಲು ಜಗನ್ ರೆಡ್ಡಿ ಅವರು ಈ ಗುತ್ತಿಗೆಗಳ ಮರುಪರಿಶೀಲನೆಗೆ ಆದೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News