ಮುಖ್ಯಮಂತ್ರಿ ಸ್ಪಂದನ: ಹಾಸ್ಟೆಲ್ ಹೊರಗುತ್ತಿಗೆ ನೌಕರರ ಧರಣಿ ವಾಪಸ್

Update: 2019-08-22 15:53 GMT

ಬೆಂಗಳೂರು, ಆ.22: ಮುಖ್ಯಮಂತ್ರಿ ಬಿ.ಎಸ್.ಯೂಡಿಯೂರಪ್ಪ ಪೂರಕವಾಗಿ ಸ್ಪಂದಿಸಿರುವ ಹಿನ್ನೆಲೆಯಲ್ಲಿ ಹಾಸ್ಟೆಲ್ ಹೊರ ಗುತ್ತಿಗೆ ನೌಕರರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿದ್ದ ಧರಣಿಯನ್ನು ಹಿಂಪಡೆಯಲಾಗಿದೆ.

ಹೊರ ಗುತ್ತಿಗೆ ನೌಕರರನ್ನು ಕೈಬಿಡುವ ಪ್ರಕ್ರಿಯೆ ನಿಲ್ಲಿಸಬೇಕು. ಹಾಗೂ ಉದ್ಯೋಗ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಹಾಸ್ಟೆಲ್ಗಳ ಡಿ ವರ್ಗದ ಹೊರಗುತ್ತಿಗೆ ನೌಕರರು ನೆನ್ನೆಯಿಂದ(ಬುಧವಾರ) ಧರಣಿ ಪ್ರಾರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಘದ ಮುಖಂಡರನ್ನು ತಮ್ಮ ಕಚೇರಿಗೆ ಕರೆಸಿಕೊಂಡು, ಒಂದು ತಿಂಗಳಲ್ಲಿ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ರಾಜ್ಯ ಸರಕಾರದ ಸಚಿವ ಸಂಪುಟದ ವಿಸ್ತರಣೆ ಈಗಷ್ಟೆ ಆಗಿದೆ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆಗೆ ಸಚಿವರ ನೇಮಕವಾದ ನಂತರ ಈ ಬಗ್ಗೆ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಅಷ್ಟರವರೆಗೆ ಹಾಸ್ಟೆಲ್‌ನ ಹೊರ ಗುತ್ತಿಗೆದಾರರು ಹಾಸ್ಟೆಲ್‌ಗಳಲ್ಲಿಯೇ ಕಾರ್ಯನಿರ್ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸತ್ತೇನೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಹಾಸ್ಟೆಲ್‌ನ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ನಿತ್ಯಾನಂದಸ್ವಾಮಿ ತಿಳಿಸಿದ್ದಾರೆ.

ಹಾಸ್ಟೆಲ್‌ನ ಹೊರಗುತ್ತಿಗೆ ನೌಕರರಿಗೆ ತಾತ್ಕಾಲಿಕವಾಗಿ ಮಾತ್ರ ಜಯ ಸಿಕ್ಕಿದೆ. ನಮ್ಮನ್ನು ನಿವೃತ್ತಿವರೆಗೆ ಸೇವಾ ಭದ್ರತೆ ನೀಡಿದರೆ ಮಾತ್ರ ನ್ಯಾಯ ಸಿಗುವುದು. ಈ ನಿಟ್ಟಿನಲ್ಲಿ ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಬಳಿ ಮನವಿ ಮಾಡಿದ್ದೇವೆ. ಅವರು ಭರವಸೆ ನೀಡಿದ್ದಾರೆ. ಹೀಗಾಗಿ ಧರಣಿಯನ್ನು ವಾಪಸ್ ಪಡೆಯುತ್ತಿದ್ದೇವೆಂದು ಅವರು ಹೇಳಿದರು.

ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಅಡಿಯಲ್ಲಿ ಬರುವ ವಿದ್ಯಾರ್ಥಿ ನಿಲಯಗಳಲ್ಲಿ ನೇರ ನೇಮಕಾತಿ ಮೂಲಕ ಸುಮಾರು 4 ಸಾವಿರ ಡಿ ವರ್ಗದ ನೌಕರರನ್ನು ನೇಮಕ ಮಾಡಲಾಗಿದೆ. ಇದರಿಂದ ಹೊರಗುತ್ತಿಗೆ ನೌಕರರು ಬೀದಿ ಪಾಲಾಗಿದ್ದೇವೆ. ಅಷ್ಟೇ ಅಲ್ಲದೆ, ನಮ್ಮ ವಯಸ್ಸು ಮೀರಿದ್ದು, ಬೇರೆ ಯಾವ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ. ಹೀಗಾಗಿ ಹೊಸದಾಗಿ ನೇಮಕಗೊಳ್ಳುವ ಖಾಯಂ ನೌಕರರನ್ನು ಹೊಸ ಹಾಸ್ಟೆಲ್ಗಳಿಗೆ ಮಾತ್ರ ನಿಯೋಜಿಸಿ. ಹಾಲಿ ಹೊರಗುತ್ತಿಗೆ ನೌಕರರಿಗೆ ನಿವೃತ್ತಿವರೆಗೆ ಸೇವಾ ಭದ್ರತೆ ನೀಡಬೇಕು.

-ನಿತ್ಯಾನಂದ ಸ್ವಾಮಿ, ಅಧ್ಯಕ್ಷ, ಹಾಸ್ಟೆಲ್‌ನ ಹೊರ ಗುತ್ತಿಗೆ ನೌಕರರ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News