ಈ.ಡಿ. ದಾಖಲಿಸಿದ ಪ್ರಕರಣ ರದ್ದು ಕೋರಿ ಡಿಕೆಶಿ ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Update: 2019-08-22 16:32 GMT

ಬೆಂಗಳೂರು, ಆ.22: ಹೊಸದಿಲ್ಲಿಯ ಫ್ಲಾಟ್‌ಗಳ ಮೇಲಿನ ಐಟಿ ದಾಳಿ ವಿಚಾರದಲ್ಲಿ ಆದಾಯ ತೆರಿಗೆ ಇಲಾಖೆ ಹಾಗೂ ಈ.ಡಿ. ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದು ಕೋರಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿ, ತೀರ್ಪುನ್ನು ಕಾಯ್ದಿರಿಸಿತು.

ಕಳೆದ ವಿಚಾರಣೆ ವೇಳೆ ಮಾಜಿ ಸಚಿವ ಡಿಕೆಶಿ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡನೆ ಮಾಡಿ ಎರಡು ಸೆಕ್ಷನ್‌ಗಳಡಿ ಡಿಕೆಶಿ ವಿರುದ್ಧ ಐಟಿ ಕೇಸ್ ದಾಖಲಿಸಲಾಗಿದೆ. ಒಂದು 276 ಇ, 277 ಐಟಿ ಸೆಕ್ಷನ್ ಇದು ಈ.ಡಿ. ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಈ.ಡಿ. 276 ಇ, 277, 120 ಬಿ ಒಳಸಂಚು ಅಡಿ ತನಿಖೆ ಮಾಡುತ್ತಿದೆ. 120 ಬಿ ಬಿಟ್ಟು ಉಳಿದ ಕೇಸ್ ಈ.ಡಿ. ವ್ಯಾಪ್ತಿಗೆ ಬರುವುದಿಲ್ಲ, 120 ಬಿ ಕೂಡ ಸ್ವತಂತ್ರ ಅಪರಾಧ ಆಗುವುದಿಲ್ಲ. ಕ್ರಿಮಿನಲ್ ಪ್ರಕರಣ ದಾಖಲಿಸುವ ಹಂತವಿನ್ನೂ ತಲುಪಿಲ್ಲ, ಜಾರಿ ನಿರ್ದೇಶನಾಲಯ ಇಸಿಐಆರ್ ದಾಖಲಿಸಿದ್ದು ಸರಿಯಲ್ಲ. ಈ.ಡಿ.ಗೆ ಕೇಸ್ ದಾಖಲಿಸಿ ತನಿಖೆ ನಡೆಸುವ ಅಧಿಕಾರವೇ ಇಲ್ಲ. ಹೀಗಾಗಿ ಈ.ಡಿ. ದಾಖಲಿಸಿರುವ ದೂರನ್ನ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಗುರುವಾರ ಸರಕಾರದ ಪರ ವಾದಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು, ಕ್ರಿಮಿನಲ್ ಒಳಸಂಚು ಆರೋಪದ ಮೇಲೆ ಈ.ಡಿ. ತನಿಖೆ ಮಾಡುತ್ತಿದೆ. ಈ ಸೆಕ್ಷನ್ ಅಡಿಯಲ್ಲಿ ತನಿಖೆ ನಡೆಸಲು ಈ.ಡಿ.ಗೆ ಅವಕಾಶವಿದೆ. ಈ ಪ್ರಕರಣದಲ್ಲಿ ಆರೋಪಿಗಳಾದ ಡಿಕೆಶಿ ಕ್ರಿಮಿನಲ್ ಒಳಸಂಚು ನಡೆಸಿರುವುದಕ್ಕೆ ಅಗತ್ಯ ಸಾಕ್ಷಗಳಿವೆ ಎಂದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಆ.28 ಕ್ಕೆ ತೀರ್ಪು ಕಾಯ್ದಿರಿಸಿತು. 

ಯಾಕೆ ಅರ್ಜಿ ಸಲ್ಲಿಸಿದ್ದು: ಡಿಕೆಶಿ ಹಾಗೂ ಆಪ್ತರ ಮನೆ ಕಚೇರಿ ಮೇಲೆ ಐಟಿ ದಾಳಿ ಮಾಡಿದ ನಂತರ ಈ.ಡಿ.ಗೆ ಡಿಕೆಶಿ ಮತ್ತು ಆಪ್ತರು ಹವಾಲ ದಂಧೆ ನಡೆಸುತ್ತಿದ್ದಾರೆ ಎಂದು ಐಟಿ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಈ.ಡಿ. ಪ್ರಕರಣ ದಾಖಲಿಸಿ ಡಿಕೆಶಿ ಹಾಗೂ ಆಪ್ತರಿಗೆ ಸಮನ್ಸ್ ನೀಡಿದ್ದರಿಂದ ಪ್ರಕರಣಕ್ಕೆ ತಡೆ ಹಾಕಲು ಡಿಕೆಶಿ ಹಾಗೂ ಆಪ್ತರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News