ಪರಪ್ಪನ ಅಗ್ರಹಾರದ ಖೈದಿಗಳಿಂದ ನೆರೆ ಪರಿಹಾರ ನಿಧಿಗೆ ದೇಣಿಗೆ

Update: 2019-08-22 16:36 GMT

ಬೆಂಗಳೂರು, ಆ.22: ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲಿರುವ ಹಿನ್ನೆಲೆಯಲ್ಲಿ ನಗರದ ಪರಪ್ಪನ ಅಗ್ರಹಾರದಲ್ಲಿರುವ ಖೈದಿಗಳು ಮಾಂಸಾಹಾರ ತ್ಯಜಿಸಿ 10 ಲಕ್ಷ ರೂ.ಗಳನ್ನು ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದಾರೆ.

ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ರಾಜ್ಯದ ಮೂಲೆಮೂಲೆಯಿಂದ ಜನರು ನೆರವಿನ ಹಸ್ತ ಚಾಚುತ್ತಿದ್ದಾರೆ. ಈಗ ಜೈಲಿನಲ್ಲಿರುವ ಕೈದಿಗಳೂ ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ್ದಾರೆ. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳು, ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ಎದುರಾಗಿದ್ದ ಕುರಿತು ವರದಿ ಓದಿದ್ದೇವೆ. ಪ್ರವಾಹದಿಂದಾಗಿ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿರುವುದು ತಿಳಿದು ನಮಗೆ ನೋವಾಗಿದೆ. ಈ ಹಿನ್ನೆಲೆಯಲ್ಲಿ ತಾವು ನಾಲ್ಕು ವಾರ ಮಾಂಸದ ಊಟವನ್ನು ಸೇವಿಸುವುದಿಲ್ಲ. ಮಾಂಸಾಹಾರಕ್ಕಾಗಿ ಖರ್ಚಾಗುವ ಸುಮಾರು 10 ಲಕ್ಷ ರೂ. ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕೋರಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರತಿ ಶುಕ್ರವಾರ ಮಾಂಸಾಹಾರ ನೀಡಲಾಗುತ್ತದೆ. ಆದರೆ, ಮಾಂಸಾಹಾರ ನೀಡುವ ಟೆಂಡರ್ ಪಡೆದ ವ್ಯಕ್ತಿ ಗಾಂಜಾ ಸಾಗಾಟ ಪ್ರಕರಣದಲ್ಲಿ ಬಂಧಿತನಾಗಿದ್ದರಿಂದ 3 ತಿಂಗಳ ಕಾಲ ಕೈದಿಗಳಿಗೆ ಮಾಂಸಾಹಾರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಲ್ಲಿ ಕೈದಿಗಳು ಮಾಂಸಾಹಾರ ನೀಡಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News