ರಾಜಧಾನಿಯಲ್ಲಿ ಮತ್ತೊಮ್ಮೆ ಎದುರಾಗಲಿದೆ ಕಸದ ಸಮಸ್ಯೆ !

Update: 2019-08-22 16:44 GMT

ಬೆಂಗಳೂರು, ಆ.22: ರಾಜಧಾನಿಯಲ್ಲಿ ಮತ್ತೊಮ್ಮೆ ಕಸದ ಸಮಸ್ಯೆ ತಲೆದೋರುವ ಲಕ್ಷಣಗಳು ಕಾಣಿಸಿಕೊಂಡಿದ್ದು, ಬೆಳ್ಳಹಳ್ಳಿ ಕಲ್ಲು ಕ್ವಾರಿಯಲ್ಲಿ ತ್ಯಾಜ್ಯ ವಿಲೇವಾರಿ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ತ್ಯಾಜ್ಯ ಸಾಗಣೆ ಸಮಸ್ಯೆ ತಲೆದೋರುವ ಸಾಧ್ಯತೆಯಿದೆ.

ಕೆಲದಿನಗಳಿಂದ ತಣ್ಣಗಾಗಿದ್ದ ತ್ಯಾಜ್ಯ ವಿರೋಧಿ ಪ್ರತಿಭಟನೆ ಇದೀಗ ಮರುಜೀವ ಪಡೆದುಕೊಂಡಿದೆ. ಮಿಶ್ರತ್ಯಾಜ್ಯ ವಿಲೇವಾರಿ ಸ್ಥಗಿತ ಮಾಡಬೇಕು ಎಂದು ಸ್ಥಳೀಯರು ಒತ್ತಾಯ ಮಾಡುತ್ತಿದ್ದಾರೆ. ಆದರೆ, ಮಿಶ್ರ ತ್ಯಾಜ್ಯ ವಿಲೇವಾರಿಗೆ ಸ್ಥಳಾವಕಾಶವಿಲ್ಲದೆ ಪರದಾಡುತ್ತಿರುವ ಬಿಬಿಎಂಪಿಗೆ ಮತ್ತೊಂದು ತಲೆನೋವು ಎದುರಾಗಲಿದೆ.

2 ಸಾವಿರ ಟನ್ ತ್ಯಾಜ್ಯ: ನಗರದಲ್ಲಿ ನಿತ್ಯ 4 ಸಾವಿರ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದರಲ್ಲಿ 2 ಸಾವಿರ ಟನ್‌ಗೂ ಹೆಚ್ಚು ಮಿಶ್ರ ತ್ಯಾಜ್ಯವನ್ನು ಬೆಳ್ಳಳ್ಳಿ ಕಲ್ಲು ಕ್ವಾರಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಒಂದು ದಿನ ಅಲ್ಲಿಗೆ ತ್ಯಾಜ್ಯ ವಿಲೇವಾರಿ ಸ್ಥಗಿತಗೊಂಡರೆ ನಗರದಾದ್ಯಂತ ಕಸದ ಸಮಸ್ಯೆ ಉದ್ಭವವಾಗುತ್ತದೆ.

ಪ್ರತಿನಿತ್ಯ ಕ್ವಾರಿಗೆ 300 ಲಾರಿಗಳ ಮೂಲಕ ತ್ಯಾಜ್ಯ ತೆಗೆದುಕೊಂಡು ಹೋಗಲಾಗುತ್ತದೆ. ಆದರೆ, ಅಲ್ಲಿನ ಸ್ಥಳೀಯರು ಇದೀಗ ಪ್ರತಿಭಟನೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಲಾರಿಗಳು ನಿಂತು ಹೋಗುವ ಸಾಧ್ಯತೆಯಿದೆ. ಅಲ್ಲದೆ, ಕ್ವಾರಿಗೆ ಹೋಗುವ ಮಾರ್ಗಗಳನ್ನು ನಿರ್ಬಂಧಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗಾದರೆ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಮತ್ತೆ ಎದುರಾಗಲಿದೆ.

ಹಣ ಬಿಡುಗಡೆಗೆ ಆಗ್ರಹ: ಬೆಳ್ಳಳ್ಳಿ ಕ್ವಾರಿ ಪ್ರದೇಶದ ಸುತ್ತಲಿನ ಗ್ರಾಮಗಳಲ್ಲಿ ರಸ್ತೆ, ನೀರು ಸೇರಿ ಇನ್ನಿತರ ಮೂಲಸೌಕರ್ಯ ಒದಗಿಸುವುದಾಗಿ ಬಿಬಿಎಂಪಿ ತಿಳಿಸಿತ್ತು. ಅದಕ್ಕಾಗಿ ಬಜೆಟ್‌ನಲ್ಲೂ ಹಣ ಮೀಸಲಿಡಲಾಗಿತ್ತು. ಆದರೆ, ರಾಜ್ಯ ಸರಕಾರ ಬಜೆಟ್ ತಡೆಹಿಡಿದಿರುವ ಕಾರಣ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ, ಗ್ರಾಮಸ್ಥರು ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

ಪರ್ಯಾಯ ಹುಡುಕಿಲ್ಲ: ಬೆಳ್ಳಹಳ್ಳಿ ಕಲ್ಲು ಕ್ವಾರಿ ಜಾಗವೂ ಭರ್ತಿಯಾಗುತ್ತಿದೆ. ಆ ಕುರಿತು ಬಿಬಿಎಂಪಿ ಅಧಿಕಾರಿಗಳಿಗೆ ಈ ಹಿಂದೆಯೆ ಮಾಹಿತಿ ಇದ್ದರೂ ಪರ್ಯಾಯ ಜಾಗ ಹುಡುಕಲು ಮುಂದಾಗಿರಲಿಲ್ಲ. ಬೆಳ್ಳಹಳ್ಳಿ ನಂತರ ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದ ನಿರ್ವಹಣೆಗೆ ಗುತ್ತಿಗೆದಾರರನ್ನು ನೇಮಿಸಿಲ್ಲ. ಹೀಗಾಗಿ ಬೆಳ್ಳಹಳ್ಳಿ ನಂತರ ಮುಂದೇನು ಎಂಬ ಪ್ರಶ್ನೆ ಬಿಬಿಎಂಪಿಗೆ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News