ಆರ್‌ಟಿಇ ತಿದ್ದುಪಡಿ ಹಿಂಪಡೆಯಲು ಸಿಎಂಗೆ ಮನವಿ

Update: 2019-08-22 16:45 GMT

ಬೆಂಗಳೂರು, ಆ. 22: ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಕಲಂ 12(1)ಗೆ ಹಿಂದಿನ ಸರಕಾರ ತಂದಿರುವ ತಿದ್ದುಪಡಿಯನ್ನು ಕೂಡಲೇ ಹಿಂಪಡೆದು ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕೆಂದು ಆರ್‌ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್.ಯೋಗಾನಂದ ನೇತೃತ್ವದ ನಿಯೋಗ 2012ರಿಂದ 2018-19ರ ವರೆಗೆ ರಾಜ್ಯದ ಆರ್ಥಿಕವಾಗಿ ಹಿಂದುಳಿದ 6.50 ಲಕ್ಷ ಮಂದಿ ಬಡ ವಿದ್ಯಾರ್ಥಿಗಳು ಆರ್‌ಟಿಇ ಕಾಯ್ದೆಯಡಿ ದಾಖಲಾಗಿದ್ದಾರೆ. ಆದರೆ, ಹಿಂದಿನ ಕುಮಾರಸ್ವಾಮಿ ನೇತೃತ್ವದ ಸರಕಾರ ಖಾಸಗಿ ಶಾಲೆಗಳ ಲಾಬಿಗೆ ಮಣಿದು ಆರ್‌ಟಿಇ ಕಾಯ್ದೆ ನಿಯಮ 4ಕ್ಕೆ ತಿದ್ದುಪಡಿ ತರುವ ಮೂಲಕ ಸುಮಾರು 1.50 ಲಕ್ಷ ಮಂದಿ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದಿಂದ ವಂಚಿಸಲಾಗಿದೆ. ಈ ಸಂಬಂಧ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದು, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಹೀಗಾಗಿ ರಾಜ್ಯ ಸರಕಾರ ಆರ್‌ಟಿಇ ತಿದ್ದುಪಡಿ ಹಿಂಪಡೆದು ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿದೆ. ಈ ವೇಳೆ ಪದಾಧಿಕಾರಿಗಳಾದ ಚಂದ್ರಕಾಂತ್, ಬವಸರಾಜ ಬರಶೆಟ್ಟಿ, ಮಲ್ಲಿಕಾರ್ಜುನ ಲೋನಿ, ಅಣಬೊರು ಶಿವಮೂರ್ತಿ, ಪರಮೇಶ್ವರಪ್ಪ, ಲೋಕೇಶ್ ಜಯರಾಂ, ನಾಡಗೌಡ, ಗುರುನಾಥ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News