ಶಾಲಾ ಮಕ್ಕಳ ಅನುಕೂಲಕ್ಕಾಗಿ ಪಾದಚಾರಿ ಮೇಲ್ಸೇತುವೆ: ಮೇಯರ್ ಗಂಗಾಂಬಿಕೆ

Update: 2019-08-22 17:20 GMT

ಬೆಂಗಳೂರು, ಆ.22: ಸಾರ್ವಜನಿಕರು ಹಾಗೂ ಶಾಲಾ ಮಕ್ಕಳ ಅನುಕೂಲಕ್ಕಾಗಿ ಸುಲ್ತಾನ್ ರಸ್ತೆಯಲ್ಲಿ ಪಾದಚಾರಿ ಮೇಲ್ಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ತಿಳಿಸಿದರು.

ಗುರುವಾರ ಚಾಮರಾಜಪೇಟೆಯ ಸಂತ ತೆರೇಸ ಬಾಲಕಿಯರ ಪ್ರೌಢಶಾಲೆ ಮುಂಭಾಗ ಹಾಗೂ ಮಹಾಲಕ್ಷ್ಮೀ ಲೇಔಟ್‌ನ ಮೆಟ್ರೋ ನಿಲ್ದಾಣದ ಹತ್ತಿರ ಪಾದಚಾರಿ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಚಾಮರಾಜಪೇಟೆಯ ಮಾರ್ಗದಲ್ಲಿ ಪ್ರತಿನಿತ್ಯವೂ ವಾಹನ ಸಂಚಾರ ಹೆಚ್ಚಿರುತ್ತದೆ. ಸಾರ್ವಜನಿಕರು ಹಾಗೂ ನಾಲ್ಕು ಶಾಲೆಗಳ ಮಕ್ಕಳು ರಸ್ತೆ ದಾಟಲು ಸಮಸ್ಯೆ ಉಂಟಾಗುತ್ತಿದ್ದ ಪರಿಣಾಮ ಸೆಂಟ್ ತೆರೇಸಾ ವಿದ್ಯಾಸಂಸ್ಥೆಯವರು ಸುಲ್ತಾನ್ ರಸ್ತೆಯಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದರು. ಆ ಮನವಿ ಮೇರೆಗೆ ಸ್ಕೈವಾಕ್ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಇನ್ನು, ಮಹಾಲಕ್ಷ್ಮೀ ಲೇಔಟ್‌ನಲ್ಲಿ ಎರಡು ವರ್ಷಗಳಿಂದ ಪಾದಚಾರಿ ಮೇಲ್ಸೇತುವೆ ಕಾಮಗಾರಿ ನಿರ್ಮಾಣ ಮಾಡಬೇಕೆಂಬ ಬೇಡಿಕೆಯಿತ್ತು. ಸಾರ್ವಜನಿಕರಿಗೆ ಅನುಕೂಲವಾಗಬೇಕೆಂಬ ದೃಷ್ಟಿಯಿಂದ ವಿಜ್ಡ್‌ಮ್ ಔಟ್ ಲುಕ್ಸ್ ಅಡ್ವೆಟೈಸಿಂಗ್ ಕಂಪನಿಯ ಮೂಲಕ ಪಿಪಿಪಿ ಮಾದರಿಯಲ್ಲಿ ಪಾದಚಾರಿ ಮೇಲ್ಸೇತುವೆ ಕಾಮಗಾರಿ ನಿರ್ಮಿಸಲಾಗುತ್ತಿದೆ. ಅವರು ನೆಲಬಾಡಿಗೆ, ಜಾಹೀರಾತು ತೆರಿಗೆ ಸೇರಿದಂತೆ ವಾರ್ಷಿಕ 7 ಲಕ್ಷ ರೂ. ಪಾಲಿಕೆಗೆ ಪಾವತಿಸಲಿದ್ದಾರೆ. ಒಂಭತ್ತು ತಿಂಗಳೊಳಗಾಗಿ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪಾಲಿಕೆ ರಸ್ತೆ ವಿಭಾಗದ ಮುಖ್ಯ ಎಂಜಿನಿಯರ್ ಸೋಮಶೇಖರ್ ಮಾತನಾಡಿ, ಚಾಮರಾಜಪೇಟೆಯ ಪಾದಚಾರಿ ಮೇಲ್ಸೇತುವೆ ಕಾಮಗಾರಿಯನ್ನು ಪಾಲಿಕೆಯಿಂದಲೇ ನಿರ್ಮಿಸಲಾಗುತ್ತಿದ್ದು, ಒಟ್ಟು 3.50 ಕೋಟಿ ರೂ. ವೆಚ್ಚದಲ್ಲಿ ಸಂಜಯ್ ಮಾರ್ಕೆಟಿಂಗ್ ಪ್ರೈ. ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಎರಡೂ ಬದಿಯಲ್ಲಿಯಲ್ಲಿ ಲಿಫ್ಟ್ ಅಳವಡಿಸಲಾಗುತ್ತದೆ. ಆರು ತಿಂಗಳೊಳಗಾಗಿ ಮೇಲ್ಸೇತುವೆ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News