ಮೀಟು ಪ್ರಕರಣ: ಶ್ರುತಿ ಹರಿಹರನ್ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದತಿಗೆ ಕೋರ್ಟ್ ನಕಾರ

Update: 2019-08-22 17:50 GMT

ಬೆಂಗಳೂರು, ಆ.22: ಬಹುಭಾಷಾ ನಟ ಅರ್ಜುನ್ ಸರ್ಜಾ ಮೀಟು ಪ್ರಕರಣದಲ್ಲಿ ತಮ್ಮ ವಿರುದ್ದ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದು ಪಡಿಸುವಂತೆ ಕೋರಿ ನಟಿ ಶ್ರುತಿ ಹರಿಹರನ್ ಸಲ್ಲಿಸಿದ್ದ ಅರ್ಜಿಯನ್ನು ಸಿಟಿ ಸಿವಿಲ್ ಕೋರ್ಟ್ ವಜಾ ಮಾಡಿದೆ.

ಇದರಿಂದ, ಸದ್ಯಕ್ಕೆ ಮಾನನಷ್ಟ ಪ್ರಕರಣದಲ್ಲಿ ನಟಿ ಶ್ರುತಿ ಹರಿಹರನ್‌ಗೆ ಹಿನ್ನಡೆಯಾಗಿದೆ. ವಿಚಾರಣೆ ವೇಳೆ ಅರ್ಜುನ್ ಪರ ವಕೀಲ ಶ್ಯಾಮ್ ಸುಂದರ್ ವಾದಿಸಿ, ಶ್ರುತಿ ವಿನಾಕಾರಣ ಆರೋಪ ಮಾಡಿ ನಟ ಅರ್ಜುನ್ ಸರ್ಜಾ ಘನತೆಗೆ ಧಕ್ಕೆ ತಂದಿದ್ದಾರೆ. ಹೀಗಾಗಿ ಸರ್ಜಾ ಅವರಿಗೆ ಬಹಳ ಮನಸ್ಸಿಗೆ ನೋವಾಗಿದೆ. ಹೀಗಾಗಿ, ಶ್ರುತಿ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕೆಂದು ಪೀಠಕ್ಕೆ ತಿಳಿಸಿದರು. ನ್ಯಾಯಪೀಠವು ವಕೀಲರ ವಾದ ಆಲಿಸಿ, ಅರ್ಜಿಯನ್ನು ವಜಾಗೊಳಿಸಿತು.

ಪ್ರಕರಣವೇನು: ಶ್ರುತಿ ಅವರು, ಅರ್ಜುನ್ ಸರ್ಜಾ ವಿರುದ್ದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಿಸ್ಮಯ ಚಲನಚಿತ್ರ ಚಿತ್ರೀಕರಣ ವೇಳೆ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News