ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳಲು ಪ್ರೊ.ಪ್ರಜ್ವಲ್ ಶಾಸ್ತ್ರಿ ಕರೆ

Update: 2019-08-22 17:54 GMT

ಬೆಂಗಳೂರು, ಆ.22: ವಿಜ್ಞಾನ ನಮ್ಮ ಜೀವನದ ಅಂಗವಾಗಿದ್ದು, ಎಲ್ಲರೂ ವಿಜ್ಞಾನಿಗಳಾಗಬೇಕೆಂದಿಲ್ಲ. ಆದರೆ ವೈಜ್ಞಾನಿಕ ಮನೋವೃತ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಭಾರತೀಯ ಭೌತ ವಿಜ್ಞಾನ ಸಂಸ್ಥೆಯ ಮಾಜಿ ಪ್ರಾಧ್ಯಾಪಕ ಪ್ರೊ.ಪ್ರಜ್ವಲ್ ಶಾಸ್ತ್ರಿ ಹೇಳಿದರು. 

ಗುರುವಾರ ನಗರದ ನಿಸರ್ಗ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ಕರ್ನಾಟಕ ವೈಜ್ಞಾನಿಕ ಮನೋವೃತ್ತಿ ವೇದಿಕೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವೈಜ್ಞಾನಿಕ ಮನೋವೃತ್ತಿಯ ಕೊರತೆಯಿಂದ ನಾವಿಂದು ನಿರೀಕ್ಷಿಸಿದಷ್ಟು ಪ್ರಗತಿಯನ್ನು ಸಾಧಿಸಲಾಗಿಲ್ಲ. ಹಲವು ರೀತಿಯ ತಾರತಮ್ಯವನ್ನು ಎದುರಿಸುತ್ತಿದ್ದೇವೆ. ಆದುದರಿಂದಾಗಿ ಇಂದಿನ ಮಕ್ಕಳಲ್ಲಿ, ಯುವ ಸಮುದಾಯವು ವೈಜ್ಞಾನಿಕತೆಯ ಕಡೆಗೆ ಬರಬೇಕಿದೆ ಎಂದು ಅವರು ಸಲಹೆ ನೀಡಿದರು.
ಸೂರ್ಯ ಗ್ರಹಣವು ಒಂದು ಸಾಮಾನ್ಯ ನೈಸರ್ಗಿಕ ಕ್ರಿಯೆಯಾಗಿದ್ದು, ಅದರ ಸಂಬಂಧ ಯಾರೂ ಭಯ ಪಡುವಂತಹ ಅಗತ್ಯವಿಲ್ಲ. ಗ್ರಹಣವನ್ನು ಎಲ್ಲರೂ ವೀಕ್ಷಿಸಬಹುದಾಗಿದೆ. ಈ ಕುರಿತು ಕೆಲವರು ಹುಟ್ಟಿಸಿರುವಂತಹ ಮೂಢನಂಬಿಕೆಯನ್ನು ದೂರ ಮಾಡಬೇಕು ಎಂದು ಅವರು ಕರೆ ನೀಡಿದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಕಾರ್ಯದರ್ಶಿ ಈ.ಬಸವರಾಜು ಮಾತನಾಡಿ, ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ. ವೈಜ್ಞಾನಿಕವಾಗಿ ಮಾತನಾಡಿದ ಸಾಹಿತಿಗಳನ್ನು, ಲೇಖಕರನ್ನು ಧಾರ್ಮಿಕ ಮೂಲಭೂತವಾದಿಗಳು ಹತ್ಯೆ ಮಾಡುವ ಮೂಲಕ ದಮನಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಹಿರಿಯ ಚಿಂತಕ ಡಾ.ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ.ಕಲಬುರ್ಗಿ ಸೇರಿದಂತೆ ಅನೇಕರನ್ನು ಹತ್ಯೆ ಮಾಡುವ ಮೂಲಕ ವೈಜ್ಞಾನಿಕ ಚಿಂತನೆಗಳನ್ನು ಕೊಲ್ಲಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ನೆನಪಿನ ಸಂದರ್ಭದಲ್ಲಿ ಎಲ್ಲರೂ ವೈಜ್ಞಾನಿಕತೆಯ ಕುರಿತು ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಮೌಢ್ಯದ ಹೆಸರಿನಲ್ಲಿ ಹಾಲು, ಮೊಟ್ಟೆ, ಲಿಂಬೆ ಹಣ್ಣು, ತೆಂಗಿನ ಕಾಯಿಗಳನ್ನು ಹಾಳು ಮಾಡುವ ಬದಲು ಅವುಗಳನ್ನು ಆಹಾರವಾಗಿ ಉಪಯೋಗಿಸುವ ಬಗ್ಗೆ ಎಲ್ಲರೂ ಆಲೋಚಿಸಬೇಕು ಎಂದು ಅವರು ನುಡಿದರು.

ವಿಸರ್ಗ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಉದಯ ರತ್ನ ಕುಮಾರ್, ಜಯಮಾಲ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ನಾಗಸಂದ್ರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೈಜ್ಞಾನಿಕ ಮನೋವೃತ್ತಿ ದಿನವನ್ನು ಆಚರಣೆ ಮಾಡಲಾಯಿತು. ಹಾಗೂ ಬಾಗಲಗುಂಟೆಯ ಆಚಾರ್ಯ ಗುರುಕುಲ ವಿದ್ಯಾ ಕೇಂದ್ರ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News