ಯುಎಸ್ ಓಪನ್: ಅಗ್ರ ಶ್ರೇಯಾಂಕ ಗಿಟ್ಟಿಸಿಕೊಂಡ ಜೊಕೊವಿಕ್, ಒಸಾಕಾ

Update: 2019-08-22 18:37 GMT

ಹೊಸದಿಲ್ಲಿ, ಆ.22: ವಿಶ್ವ ನಂ.1 ಆಟಗಾರ ಹಾಗೂ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಹಾಗೂ ನವೊಮಿ ಒಸಾಕಾ ಮುಂಬರುವ ಅಮೆರಿಕನ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ.

ಮುಂದಿನ ವಾರ ಆರಂಭವಾಗಲಿರುವ ಪ್ರತಿಷ್ಠಿತ ಯುಎಸ್ ಓಪನ್‌ನಲ್ಲಿ ಜೊಕೊವಿಕ್ 17ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಸ್ಪೇನ್‌ನ ಸ್ಟಾರ್ ಆಟಗಾರ ರಫೆಲ್ ನಡಾಲ್ ಎರಡನೇ ಶ್ರೇಯಾಂಕದೊಂದಿಗೆ ಕಣಕ್ಕಿಳಿಯಲಿದ್ದಾರೆ.

 21ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ವಿಶ್ವದ ಮಾಜಿ ನಂ.1 ಆಟಗಾರ ರೋಜರ್ ಫೆಡರರ್ ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಪಡೆದಿದ್ದಾರೆ.

ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್‌ನ ಡ್ರಾ ಪ್ರಕ್ರಿಯೆ ಗುರುವಾರ ನಡೆಯಲಿದೆ. ಮಹಿಳೆಯರ ವಿಭಾಗದಲ್ಲಿ ಒಸಾಕಾ ನಂ.1 ಆಟಗಾರ್ತಿಯಾಗಿದ್ದು, 2018ರ ರನ್ನರ್ಸ್ ಅಪ್ ಸೆರೆನಾ ವಿಲಿಯಮ್ಸ್ 8ನೇ ಶ್ರೇಯಾಂಕದಲ್ಲಿದ್ದಾರೆ.

 ಜಪಾನ್‌ನ ಯುವ ಆಟಗಾರ್ತಿ ಒಸಾಕಾ ಕಳೆದ ವರ್ಷ ವಿವಾದ ಸ್ವರೂಪ ಪಡೆದಿದ್ದ ಯುಎಸ್ ಓಪನ್‌ನ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ರನ್ನು ಸೋಲಿಸಿ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದರು. ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಎರಡನೇ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.

ಆಸ್ಟ್ರೇಲಿಯದ ಫ್ರೆಂಚ್ ಓಪನ್ ಚಾಂಪಿಯನ್ ಅಶ್ಲೆಘ್ ಬಾರ್ಟಿ 2ನೇ ಶ್ರೇಯಾಂಕವನ್ನು ಗಿಟ್ಟಿಸಿಕೊಂಡರೆ, ರೊಮಾನಿಯದ ವಿಂಬಲ್ಡನ್ ಓಪನ್ ಚಾಂಪಿಯನ್ ಸಿಮೊನಾ ಹಾಲೆಪ್ 4ನೇ ಶ್ರೇಯಾಂಕದಲ್ಲಿದ್ದಾರೆ.

ಮಾಜಿ ನಂ.1 ಆಟಗಾರ್ತಿ, ಝೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೋವಾ ಮಹಿಳೆಯರ ಡ್ರಾನಲ್ಲಿ ಮೂರನೇ ಶ್ರೇಯಾಂಕ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News