ವಿಂಡೀಸ್ ವಿರುದ್ಧದ ಟೆಸ್ಟ್: ಕುಸಿದ ಭಾರತಕ್ಕೆ ರಹಾನೆ ಆಸರೆ

Update: 2019-08-23 03:47 GMT

ಆಂಟಿಗುವಾ, ಆ.23: ವೆಸ್ಟ್‌ ಇಂಡೀಸ್‌ನ ಶಿಸ್ತಿನ ದಾಳಿಗೆ ಕುಸಿದ ಭಾರತಕ್ಕೆ ಅಜಿಂಕ್ಯಾ ರಹಾನೆಯವರ ಅರ್ಧಶತಕ ಆಸರೆಯಾಗಿದೆ. ಮಳೆಯಿಂದ ಬಾಧಿತವಾದ ಮೊದಲ ಟೆಸ್ಟ್‌ ಕ್ರಿಕೆಟ್ ನ ಮೊದಲನೇ ದಿನದ ಅಂತ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿದೆ.

ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಗುರುವಾರ ಆರಂಭವಾದ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಆರಂಭಿಕ ಬೌಲರ್‌ಗಳಾದ ಕೆಮರ್ ರೂಚ್ ಹಾಗೂ ಶನನ್ ಗ್ಯಾಬ್ರಿಯಲ್ ಪ್ರವಾಸಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಒಂದು ಹಂತದಲ್ಲಿ ಭಾರತ 25 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಅಜಿಂಕ್ಯಾ ರಹಾನೆಯವರ 81 ರನ್‌ಗಳ ನೆರವಿನೊಂದಿಗೆ ಪ್ರವಾಸಿಗರು ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ಸಾಧ್ಯವಾಯಿತು.

ಆರಂಭಿಕ ಆಟಗಾರ ಕೆ.ಎಲ್.ರಾಹುಲ್ (44) ಅವರಿಂದ ಉತ್ತಮ ಬೆಂಬಲ ಪಡೆದ ರಹಾನೆ, ನಾಲ್ಕನೇ ವಿಕೆಟ್‌ಗೆ 68 ರನ್ ಕಲೆ ಹಾಕಿದರು. ಜತೆಗೆ ಐದನೇ ವಿಕೆಟ್‌ಗೆ ಹನುಮ ವಿಹಾರಿ (32) ಜತೆ 82 ರನ್ ಕಲೆ ಹಾಕಿ ಚೇತರಿಕೆಗೆ ಕಾರಣರಾದರು. ನಾಲ್ಕು ಗಂಟೆಗಳ ಕಾಲ ಕ್ರೀಸ್‌ನಲ್ಲಿದ್ದು, 163 ಎಸೆತ ಎದುರಿಸಿದ ರಹಾನೆ ದಿನದ ಕೊನೆಯವರಾಗಿ ಔಟ್ ಆದರು.

ವೇಗಿಗಳಿಗೆ ನೆರವಾಗುತ್ತಿದ್ದ ಪಿಚ್‌ನಲ್ಲಿ ರೋಚ್ ಹಾಗೂ ಗ್ಯಾಬ್ರಿಯಲ್, ಭಾರತದ ಅಗ್ರ ಕ್ರಮಾಂಕವನ್ನು ಇನ್ನಿಲ್ಲದಂತೆ ಕಾಡಿದರು. ಆದರೆ ಕೆ.ಎಲ್.ರಾಹುಲ್ ಹಾಗೂ ರಹಾನೆ ಸಮಯೋಚಿತ ಆಟವಾಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News