ಜಾರಿ ನಿರ್ದೇಶನಾಲಯದ ಪ್ರಕರಣ: ಚಿದಂಬರಂಗೆ ತಾತ್ಕಾಲಿಕ ರಕ್ಷಣೆ

Update: 2019-08-23 16:40 GMT

ಹೊಸದಿಲ್ಲಿ, ಆ.23: ಐಎನ್‌ಎಕ್ಸ್ ಮಾಧ್ಯಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರನ್ನು ಸೋಮವಾರದ ವರೆಗೆ ಬಂಧಿಸದಿರುವಂತೆ ಸರ್ವೋಚ್ಚ ನ್ಯಾಯಾಲಯ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದೆ. ಈ ಪ್ರಕರಣದಲ್ಲಿ ದೋಷಾರೋಪ ಸಲ್ಲಿಕೆಯಾಗದಿರುವ ಮತ್ತು ಸಾಕ್ಷಿಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲದಿರುವ ಕಾರಣ ಎಲ್ಲ ಸಾಕ್ಷಿಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಒಪ್ಪಿಸಲು ಅನುಮತಿ ನೀಡುವಂತೆ ಈಡಿ ಶ್ರೇಷ್ಟ ನ್ಯಾಯಾಲಯಕ್ಕೆ ಮನವಿ ಮಾಡಿದೆ. ಚಿದಂಬರಮ್ ಅವರೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಹಣ ವಂಚನೆ ನಡೆಸುತ್ತಿದ್ದಾರೆ ಮತ್ತು ಚಿದಂಬರಮ್ ಅವರ ಮಾಲಕತ್ವದ ಬೇನಾಮಿ ಹೆಸರಲ್ಲಿರುವ ವಿದೇಶಿ ಆಸ್ತಿಗಳು ಮತ್ತು ಡಿಜಿಟಲ್ ದಾಖಲೆಗಳು ಇವೆ ಎಂದು ಆರೋಪಿಸಿರುವ ಜಾರಿ ನಿರ್ದೇಶನಾಲಯ ಮಾಜಿ ವಿತ್ತ ಸಚಿವರನ್ನು ತನ್ನ ಕಸ್ಟಡಿಗೆ ಪಡೆಯಲು ಬಯಸಿತ್ತು. ಸದ್ಯ ಚಿದಂಬರಮ್ ಸಿಬಿಐ ಬಂಧನದಲ್ಲಿರುವ ಕಾರಣ ಸೋಮವಾರ ಅವರನ್ನು ತನ್ನ ವಶಕ್ಕೆ ಒಪ್ಪಿಸುವಂತೆ ಈಡಿ ವಿಚಾರಣಾ ನ್ಯಾಯಾಧೀಶರಿಗೆ ಮನವಿ ಮಾಡಲಿದೆ ಎಂದು ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ತಿಳಿಸಿದ್ದಾರೆ.

ಅಸಾಧಾರಣ ಹಣ ವಂಚನೆ ಪ್ರಕರಣ: ಕೇಂದ್ರ

ತನಿಖಾ ಸಂಸ್ಥೆಗಳಿಂದ ಬಂಧನದ ವಿರುದ್ಧ ಪಿ.ಚಿದಂಬರಂ ಸಲ್ಲಿಸಿರುವ ಮೇಲ್ಮನವಿಯನ್ನು ವಿರೋಧಿಸಿರುವ ಕೇಂದ್ರ ಸರಕಾರ, ಸರ್ವೋಚ್ಚ ನ್ಯಾಯಾಲಯ ಚಿದಂಬರಂ ಅವರಿಗೆ ಬಂಧನದಿಂದ ರಕ್ಷಣೆ ನೀಡಿದರೆ ಇಂತಹ ಅಸಾಧಾರಣ ಹಣ ವಂಚನೆ ಪ್ರಕರಣದ ತನಿಖೆಗೆ ಹಿನ್ನಡೆಯುಂಟು ಮಾಡಲಿದೆ ಎಂದು ತಿಳಿಸಿದೆ. ಚಿದಂಬರಂ ಅವರು ನಕಲಿ ಕಂಪೆನಿಗಳ ಮೂಲಕ ಮಾಡಲಾಗಿರುವ ಹಣದ ವ್ಯವಹಾರಗಳನ್ನು ಬಯಲುಗೊಳಿಸಬೇಕಿದೆ. ಇದೊಂದು ಅಗಾಧ ಪ್ರಮಾಣದ ಅಸಾಧಾರಣ ಹಣ ವಂಚನೆ ಪ್ರಕರಣ ಎಂದು ನಾನು ಈ ಮೂಲಕ ತಿಳಿಸುತ್ತೇನೆ ಎಂದು ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ತಿಳಿಸಿದ್ದಾರೆ.

ತನಿಖೆ ಮುಂದೂಡಲು ಉಚ್ಚ ನ್ಯಾಯಾಲಯ ನಕಾರ:

ಐಎನ್‌ಎಕ್ಸ್ ಮಾಧ್ಯಮ ಭಾಗಿಯಾಗಿರುವ ಇನ್ನೊಂದು ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿಯುಳಿದಿರುವ ಕಾರಣ ಸದ್ಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ನಡೆಯುತ್ತಿರುವ ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣವನ್ನು ಮುಂದೂಡುವಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಮಾಡಿರುವ ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಶುಕ್ರವಾರ ತಳ್ಳಿಹಾಕಿದೆ. ಪದೇಪದೆ ಪ್ರಕರಣವನ್ನು ಮುಂದೂಡುವಂತೆ ಕೋರುತ್ತಿರುವ ತನಿಖಾ ಸಂಸ್ಥೆಗಳ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ನ್ಯಾಯಾಧೀಶ ಒ.ಪಿ ಸೈನಿ, ಇದು ನನಗೆ ಮುಜುಗರವುಂಟು ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಸದ್ಯ ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ಆದೇಶವನ್ನು ಸೆಪ್ಟೆಂಬರ್ 3ಕ್ಕೆ ನಿಗದಿಪಡಿಸಿದ ನ್ಯಾಯಾಲಯ ಅಲ್ಲಿಯವರೆಗೆ ಕಾಂಗ್ರೆಸ್ ನಾಯಕನಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News