ಸಿದ್ದರಾಮಯ್ಯರಿಂದ ಪ್ರಮಾಣಪತ್ರ ಪಡೆಯುವ ಅಗತ್ಯ ನನಗಿಲ್ಲ: ದೇವೇಗೌಡ ವಾಗ್ದಾಳಿ

Update: 2019-08-23 12:40 GMT

ಬೆಂಗಳೂರು, ಆ.23: ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿದ್ದ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾಂಗ್ರೆಸ್ ನಾಯಕರೇ ಕಾರಣ. ಕುಮಾರಸ್ವಾಮಿ ಬಗ್ಗೆ ಸಿದ್ದರಾಮಯ್ಯ ಮೊದಲಿನಿಂದಲೂ ಅಸಮಾಧಾನ ಹೊಂದಿದ್ದರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆರೋಪಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನಡವಳಿಕೆಯನ್ನು ನಾವೆಲ್ಲ ನೋಡಿದ್ದೇವೆ. ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲ್ಲ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ, ಹೇಗೆ ತಾನೇ ಕುಮಾರಸ್ವಾಮಿ ನಾಯಕತ್ವವನ್ನು ಒಪ್ಪಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.

ಮೈತ್ರಿ ಸರಕಾರ ರಚನೆ ವೇಳೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಬಂದಿದ್ದಾಗ ಸಿದ್ದರಾಮಯ್ಯ ಸುಮ್ಮನಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಪ್ರಸ್ತಾಪ ಮಾಡಿದಾಗಲೂ ಒಂದೇ ಒಂದು ಮಾತನ್ನು ಸಿದ್ದರಾಮಯ್ಯ ಆಡಲಿಲ್ಲ. ನಾನು ರಾಜಕೀಯದಲ್ಲಿ ಎಳೆ ಮಗುವಲ್ಲ, ನಾನು ನೇರವಾಗಿ ಮಾತನಾಡುತ್ತೇನೆ ಎಂದು ಅವರು ಹೇಳಿದರು.

ನಿನಗೆ ರೈತರ ಸಾಲ ಮನ್ನಾ ಮಾಡುವ ಯೋಗ್ಯತೆ ಎಲ್ಲಿದೆ ಎಂದು ಕುಮಾರಸ್ವಾಮಿಯನ್ನು ಹೀಯಾಳಿಸಿದ್ದರು. 37 ಜನ ಶಾಸಕರಿದ್ದ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಒಪ್ಪುತ್ತಾರೆಯೇ? ನಾನು ನನ್ನ ಜೀವನದಲ್ಲಿ ಜಾತ್ಯತೀತ ಸಿದ್ಧಾಂತದ ಮೇಲೆ ರಾಜಕಾರಣ ಮಾಡಿದ್ದೇನೆ. ಸಿದ್ದರಾಮಯ್ಯರಿಂದ ನಾನು ಪ್ರಮಾಣಪತ್ರ ಪಡೆಯುವ ಅಗತ್ಯವಿಲ್ಲ ಎಂದು ದೇವೇಗೌಡ ಹೇಳಿದರು.

ಕುಮಾರಸ್ವಾಮಿಗೆ ಕಾಂಗ್ರೆಸ್‌ನವರು ನೀಡಿದ ಕಾಟ ಎಷ್ಟೆಂದು ನನಗೆ ಗೊತ್ತು. ಕಾಂಗ್ರೆಸ್ ಕೊಡುತ್ತಿದ್ದ ನೋವು ಸಹಿಸಿಕೊಂಡು ಊಟ ಮಾಡುತ್ತಿದ್ದೆ. ಸಿದ್ದರಾಮಯ್ಯ ಮೊದಲಿನಿಂದಲೂ ಕುಮಾರಸ್ವಾಮಿ ಬಗ್ಗೆ ಅಸಮಾಧಾನ ಹೊಂದಿದ್ದರು. ಬಹಳಷ್ಟು ವಿಷಯಗಳು ಮಾತಾಡಬಹುದು. ಆದರೆ, ಈ ಬಗ್ಗೆ ಹೆಚ್ಚು ಚರ್ಚೆ ಮಾಡುವುದಿಲ್ಲ ಎಂದು ಅವರು ತಿಳಿಸಿದರು.

ಕಾಂಗ್ರೆಸ್‌ನವರ ಹಿಂಸೆ ತಾಳಲಾರದೇ ಕಣ್ಣೀರು ಹಾಕಿ, ರಾಜೀನಾಮೆ ಕೊಡುವುದಾಗಿ ಕುಮಾರಸ್ವಾಮಿ ನನ್ನ ಬಳಿ ಬಂದಿದ್ದರು. ಆದರೆ, ಪ್ರಾದೇಶಿಕ ಪಕ್ಷವಾಗಿ ನಾವಾಗಿ ಹೊರ ಬಂದರೆ ದೇಶಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಆದುದರಿಂದ, ಸಹಿಸಿಕೊಂಡು ಹೋಗುವಂತೆ ಸಲಹೆ ನೀಡಿದ್ದೆ. ಕಾಂಗ್ರೆಸ್ ಹಿಂಸೆ ಹಾಗೂ ಮಾಧ್ಯಮಗಳಿಂದಾಗಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ ಎಂದು ಅವರು ಕಿಡಿಗಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News