ಹಾಲಾಡಿ ಶ್ರೀನಿವಾಸ್ ಶೆಟ್ಟಿಗೆ ಸಚಿವ ಸ್ಥಾನಕ್ಕೆ ಪಟ್ಟು: ಬಂಟರ ಸಂಘದಿಂದ ಮೌನ ಪ್ರತಿಭಟನೆ

Update: 2019-08-23 13:40 GMT

ಬೆಂಗಳೂರು, ಆ.23: ಕುಂದಾಪುರದ ವಾಜಪೇಯಿ ಎಂದೇ ಹೆಸರು ಗಳಿಸಿರುವ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರು ಬಂಟರ ಸಂಘದ ಸದಸ್ಯರು ಮೌನ ಪ್ರತಿಭಟನೆ ನಡೆಸಿದರು.

ಶುಕ್ರವಾರ ನಗರದ ಫ್ರೀಡಂಪಾರ್ಕ್‌ನಲ್ಲಿ ಜಮಾಯಿಸಿದ ಸದಸ್ಯರು, ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಹಿರಿತನವನ್ನು ದೃಷ್ಟಿಯಲ್ಲಿಟ್ಟುಕೊಂಡು, ಅವರಿಗೆ ಸೂಕ್ತ ಸ್ಥಾನ ಮಾನ ನೀಡಲು ಬಿಜೆಪಿ ಮುಂದಾಗಬೇಕು ಎಂದು ಮನವಿ ಮಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಕರಾವಳಿ ಭಾಗದ ಬಿಜೆಪಿ ಶಾಸಕರನ್ನು ಕಡೆಗಣನೆ ಮಾಡಲಾಗಿದೆ. ಉಡುಪಿಯ ಐದು ವಿಧಾನ ಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಆದರೆ, ಕರಾವಳಿಯ 13 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಶಾಸಕರಿಗೆ ಮಂತ್ರಿ ಪದವಿ ನೀಡದೇ ಇರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಾಲಾಡಿಯವರು 21 ವರ್ಷಗಳ ಕಾಲ ಜನಪ್ರತಿನಿಧಿಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ತನ್ನ ರಾಜಕೀಯ ಬದುಕಿನಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೆ ಯಾವುದೇ ಹಗರಣದಲ್ಲೂ ಸಿಲುಕದೆ ಜನಸೇವೆ ಮಾಡಿದ್ದಾರೆ. ಅವರ ಹಿರಿತನದ ಜೊತೆಗೆ ಸುಳ್ಯ ಶಾಸಕ ಅಂಗಾರ ಅವರಿಗೂ ಮಂತ್ರಿ ಪದವಿ ನೀಡಬೇಕು ಎಂದು ಒತ್ತಾಯ ಮಾಡಿದರು.

ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ, ಸಾಂಸ್ಕೃತಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಬಂಟ ಸಮುದಾಯ ಸೇವೆ ಸಲ್ಲಿಸುತ್ತಾ ಬಂದಿದೆ. ಆದರೂ, ಈ ಸಮುದಾಯವನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ಮೌನ ಪ್ರತಿಭಟನೆಯಲ್ಲಿ ಬಂಟರ ಸಂಘದ ಅಧ್ಯಕ್ಷ ಆರ್.ಉಪೇಂದ್ರಶೆಟ್ಟಿ, ಮಧುಕರ ಶೆಟ್ಟಿ, ಬಾರ್ಕೂರ್ ದೀಪಕ್ ಶೆಟ್ಟಿ, ಮಂದಾರ್ತಿ ಉಮೇಶ್ ಶೆಟ್ಟಿ, ಕೋರ್ಗಿ ಬೋಜರಾಜ್ ಶೆಟ್ಟಿ, ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News