ಎಚ್‌ಡಿಕೆ ಕಣ್ಣೀರು ಹಾಕುವ ಪರಿಸ್ಥಿತಿ ಉದ್ಭವವಾಗಿರಲಿಲ್ಲ: ದಿನೇಶ್ ಗುಂಡೂರಾವ್

Update: 2019-08-23 13:45 GMT

ಬೆಂಗಳೂರು, ಆ.23: ಮೈತ್ರಿ ಸರಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ವ ಪ್ರಯತ್ನ ಮಾಡಿದ್ದಾರೆ. ಕುಮಾರಸ್ವಾಮಿಗೆ ನಾವು ಸಂಪೂರ್ಣ ಬೆಂಬಲ ಕೊಟ್ಟಿದ್ದೆವು. 14 ತಿಂಗಳ ಆಡಳಿತಾವಧಿಯಲ್ಲಿ ಅವರು ಕಣ್ಣೀರು ಹಾಕೋ ಪರಿಸ್ಥಿತಿ ಉದ್ಭವವಾಗಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದವು. ಆದರೆ, ಮುಖ್ಯಮಂತ್ರಿ ಕಣ್ಣೀರು ಹಾಕುವಂತಹ ಪರಿಸ್ಥಿತಿ ಎಲ್ಲಿಯೂ ಇರಲಿಲ್ಲ ಎಂದರು.

ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಈ ಸಂದರ್ಭದಲ್ಲಿ ಹೇಳುವ ಅಗತ್ಯವಿರಲಿಲ್ಲ. ಅವರ ಆರೋಪಗಳು ಸತ್ಯಕ್ಕೆ ದೂರವಾದದ್ದು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎರಡು ಪಕ್ಷದವರು ಒಟ್ಟಾಗಿ ಚರ್ಚೆ ಮಾಡಿ, ಚುನಾವಣೆ ಪ್ರಚಾರ ಮಾಡಿದ್ದೇವೆ. ಒಬ್ಬರಿಗೊಬ್ಬರು ಸಹಕಾರ ನೀಡಿ ಚುನಾವಣೆ ಎದುರಿಸಿದ್ದೇವೆ ಎಂದು ಅವರು ಹೇಳಿದರು.

ರಾಜ ಅಥವಾ ರಾಜಕಾರಣಿ ಅಳುತ್ತಾ ಕೂತರೆ, ಯಾವ ರೀತಿಯಲ್ಲಿ ಆಡಳಿತ ನಡೆಸಲು ಸಾಧ್ಯ. ಅಸಹಾಯಕತೆ ಯಾವ ನಾಯಕರಿಗೂ ಇರಬಾರದು. ಇದೊಂದು ನಾಟಕೀಯ ಬೆಳವಣಿಗೆಯಷ್ಟೇ. ಮೈತ್ರಿ ಸರಕಾರ ಪತನಕ್ಕೆ ಸಿದ್ದರಾಮಯ್ಯರನ್ನು ಹೊಣೆ ಮಾಡಿರುವುದರಿಂದ ಅವರು ಅದಕ್ಕೆ ಪ್ರತಿಕ್ರಿಯಿಸುವಂತಾಗಿದೆ. ದೇವೇಗೌಡರು ಸುಮ್ಮನೆ ಇದ್ದಿದ್ದರೆ, ಸಿದ್ದರಾಮಯ್ಯ ಕೂಡ ಸುಮ್ಮನಿರುತ್ತಿದ್ದರು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ನಾವು 80 ಜನ ಶಾಸಕರು ಇದ್ದರೂ ಹೈಕಮಾಂಡ್ ಸೂಚನೆ ಪ್ರಕಾರ ಜೆಡಿಎಸ್‌ಗೆ ಬೆಂಬಲ ಕೊಟ್ಟೆವು. ಅಸಮಾಧಾನ ನಮ್ಮ ನಾಯಕರಲ್ಲೂ ಇತ್ತು ಅವರ ನಾಯಕರಲ್ಲೂ ಇತ್ತು. ನಮ್ಮ ಉದ್ದೇಶ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಾಗಿತ್ತು. ಎರಡು ಪಕ್ಷಗಳಿಗೂ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗಲಿಲ್ಲ. ಬಿಜೆಪಿಯವರು ಆಪರೇಷನ್ ಕಮಲ ಮಾಡುವ ಮೂಲಕ ನಮ್ಮ ಶಾಸಕರನ್ನು ಸೆಳೆದರು ಎಂದು ಅವರು ಆರೋಪಿಸಿದರು. ಸರಕಾರ ಉಳಿಸಿಕೊಳ್ಳಲು ನಾವು ಕೊನೆಗಳಿಗೆವರೆಗೂ ಜೆಡಿಎಸ್‌ಗೆ ಬೆಂಬಲ ಕೊಟ್ಟಿದ್ದೆವು. ಸದನದಲ್ಲಿ ಎಷ್ಟು ದಿನ ಚರ್ಚೆ ಆದರೂ ನಾವು ಅವರ ಜೊತೆ ನಿಂತಿದ್ದೆವು. ಸಿದ್ದರಾಮಯ್ಯ ಎಲ್ಲಿಯೂ ಸರಕಾರದ ವಿರುದ್ಧ ಮಾತನಾಡಿರಲಿಲ್ಲ. ಚುನಾವಣೆಯಲ್ಲಿ ಸೋತ ಬಳಿಕ ಅವರು ಸರಿಯಿಲ್ಲ, ಇವರು ಸರಿಯಿಲ್ಲ ಎಂದು ಆರೋಪಗಳನ್ನು ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಸಿದ್ದರಾಮಯ್ಯ ಮಾಡಿರುವ ಆರೋಪಗಳಿಗೆ ಉತ್ತರಿಸಲು ಸಕಾಲವಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಟ್ವೀಟ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಮೊದಲು ಕುಮಾರಸ್ವಾಮಿ ಅವರ ತಂದೆಗೆ ಈ ಸಂದರ್ಭದಲ್ಲಿ ಆರೋಪ ಮಾಡುವುದು ಬೇಡ ಎಂದು ಹೇಳಬೇಕಿತ್ತು. ಆಗ ಸುಮ್ಮನಿದ್ದು, ಈಗ ಹೇಳಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಬಿಜೆಪಿ ರಾಷ್ಟ್ರಮಟ್ಟದಲ್ಲಿ ಹೇಗೆ ನಡೆದುಕೊಳ್ಳುತ್ತಿದೆ ಎಂಬುದರ ಬಗ್ಗೆ ಅವರಿಗೆ ಅರಿವಿಲ್ಲವೇ? ನಾವು ನಮ್ಮ ಎಲ್ಲ ನಾಯಕರಿಗೆ ಸಮ್ಮಿಶ್ರ ಸರಕಾರದ ವಿರುದ್ಧ ಸಾರ್ವಜನಿಕವಾಗಿ ಹೇಳಿಕೆ ನೀಡಬಾರದು ಎಂದು ಸೂಚನೆ ಕೊಟ್ಟೆವು. ಅದರ ಪ್ರಕಾರ ಎಲ್ಲ ನಾಯಕರು ನಡೆದುಕೊಂಡಿದ್ದೇವೆ ಎಂದು ಅವರು ತಿಳಿಸಿದರು.

ಲೋಕಸಭಾ ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ‘ಫ್ರೆಂಡ್ಲಿ ಫೈಟ್’ ಇರಲಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಫಲಿತಾಂಶ ಬಂದ ಬಳಿಕ ನಾವು ಫ್ರೆಂಡ್ಲಿ ಫೈಟ್ ಮಾಡಿದ್ದರೆ ಉತ್ತಮ ಫಲಿತಾಂಶ ಬರುತ್ತಿತ್ತು ಎಂದು ಕುಮಾರಸ್ವಾಮಿ ಒಪ್ಪಿಕೊಂಡರು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಶಾಸಕರ ಅನರ್ಹತೆಯಿಂದಾಗಿ ತೆರವಾಗುವ ಕ್ಷೇತ್ರಗಳಲ್ಲಿ ಎದುರಾಗುವ ಉಪ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕಾ ಅಥವಾ ಬೇಡವೇ ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾವು ನಮ್ಮ ಪಕ್ಷದ ನಿಲುವನ್ನು ಆ ಸಂದರ್ಭದಲ್ಲಿ ಪ್ರಕಟಿಸುತ್ತೇವೆ ಎಂದು ಅವರು ತಿಳಿಸಿದರು.

‘ಅನರ್ಹರಿಗೆ ಉತ್ತಮ ಸ್ಥಾನಮಾನ ನೀಡಿ’

ಮೈತ್ರಿ ಸರಕಾರವನ್ನು ಬೀಳಿಸಲು ಹಾಗೂ ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಸಹಕಾರ ನೀಡಿರುವ 17 ಮಂದಿ ಅನರ್ಹ ಶಾಸಕರಿಗೆ ಮುಖ್ಯಮಂತ್ರಿ ನ್ಯಾಯಕೊಡಿಸಬೇಕು. ಅವರ ತ್ಯಾಗ, ಬಲಿದಾನ ವ್ಯರ್ಥವಾಗದಂತೆ ನೋಡಿಕೊಳ್ಳಿ. ಅವರಿಗೆ ಉಪ ಮುಖ್ಯಮಂತ್ರಿ ಸೇರಿದಂತೆ ಒಳ್ಳೆಯ ಸಚಿವ ಸ್ಥಾನ ಕೊಡಿ.

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News