ರೂಪದರ್ಶಿಯ ಹತ್ಯೆ ಪ್ರಕರಣ: ಹಣಕ್ಕಾಗಿ ಕೃತ್ಯವೆಸಗಿದ ಕ್ಯಾಬ್ ಚಾಲಕ ಸೆರೆ

Update: 2019-08-23 14:11 GMT

ಬೆಂಗಳೂರು, ಆ.23: ರೂಪದರ್ಶಿಯ ಹತ್ಯೆ ಪ್ರಕರಣವನ್ನು ಇಲ್ಲಿನ ಬಾಗಲೂರು ಠಾಣಾ ಪೊಲೀಸರು ಭೇದಿಸಿದ್ದು, ಕ್ಯಾಬ್ ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

ಎಚ್.ಎಂ.ನಾಗೇಶ್(22) ಬಂಧಿತ ಆರೋಪಿ ಚಾಲಕನಾಗಿದ್ದು, ಮೃತ ಮಹಿಳೆ ಪಶ್ಚಿಮ ಬಂಗಾಳ ಮೂಲದ ಪೂಜಾ ಸಿಂಗ್ ಎಂದು ಪೊಲೀಸರು ತಿಳಿಸಿದ್ದಾರೆ.

ಜು.31ರಂದು ಬಾಗಲೂರಿನ ಬಳಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಈಶಾನ್ಯ ವಿಭಾಗದ ಡಿಸಿಪಿ ಭೀಮಶಂಕರ್ ಗುಳೇದ್ ತಿಳಿಸಿದ್ದಾರೆ.

ಪತ್ತೆ ಹೇಗೆ?: ಪೂಜಾ ಸಿಂಗ್ ಧರಿಸಿದ್ದ ಬ್ರಾಂಡ್ ಜೀನ್ಸ್ ಬಟ್ಟೆಯ ಬಾರ್ ಕೋಡ್, ಗಡಿಯಾರ, ಉಂಗುರದಿಂದ ಗುರುತು ಪತ್ತೆಯಾಗಿದೆ. ಸಾಮಾನ್ಯವಾಗಿ ಈ ರೀತಿಯಾದ ಉಂಗುರ ಪಶ್ಚಿಮ ಬಂಗಾಳದವರು ಧರಿಸುತ್ತಾರೆ. ಈ ವೇಳೆ ಪೊಲೀಸರು ಪಶ್ಚಿಮ ಬಂಗಾಳಕ್ಕೆ ತೆರಳಿ ರೂಪದರ್ಶಿ ನಾಪತ್ತೆಯಾದ ವಿಚಾರವನ್ನು ಖಚಿತಪಡಿಸಿದ್ದರು. ಈ ಸಂಬಂಧ ಪೂಜಾ ಸಿಂಗ್ ಅವರ ಪತಿ ಕೊಲ್ಕತ್ತಾ ನಗರದ ನ್ಯೂಟೌನ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ.

ಹಣಕ್ಕಾಗಿ ಕೊಲೆ: ಮಹಿಳೆಯು ಪರಪ್ಪನ ಅಗ್ರಹಾರದ ಪ್ರೇವರ್ ಪೆವಿಲಿಯನ್ ಹೊಟೇಲ್‌ನಲ್ಲಿ ಕಾರ್ಯಕ್ರಮ ಮುಗಿಸಿ ಜು.31ರ ಮಧ್ಯರಾತ್ರಿ ಹೊರ ರಾಜ್ಯಕ್ಕೆ ತೆರಳಲು ವಿಮಾನ ನಿಲ್ದಾಣಕ್ಕೆ ಓಲಾ ಕ್ಯಾಬ್ ಬುಕ್ ಮಾಡಿರುವ ಮಾಹಿತಿ ಪತ್ತೆಯಾಗಿದೆ. ಓಲಾ ಕಂಪನಿಯಿಂದ ಅಂದುರಾತ್ರಿ ಕ್ಯಾಬ್ ತೆಗೆದುಕೊಂಡು ಹೋದವರ ಮಾಹಿತಿ ಕಲೆ ಹಾಕಿದಾಗ ಕ್ಯಾಬ್ ತೆಗೆದುಕೊಂಡು ಹೋಗಿರುವುದು ಚಾಲಕ ನಾಗೇಶ್ ಎಂಬುದು ಕಂಡು ಬಂದಿದೆ. ಕೂಡಲೇ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ವಿಮಾನ ನಿಲ್ದಾಣದ ಹಿಂಭಾಗದ ಗೇಟ್ ಬಳಿ ಮಹಿಳೆಯ ಬಳಿ ಹಣ ದೋಚಲು ಮುಂದಾಗಿದ್ದಾನೆ. ಪ್ರತಿರೋಧ ತೋರಿದಾಗ ಆಕೆಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿ ಗುರುತು ಸಿಗದಂತೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾಗಿ ಬಾಯಿಬಿಟ್ಟಿದ್ದಾನೆ ಎಂದು ಭೀಮಾಶಂಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News