ಪ್ರವಾಹದಲ್ಲಿ ಮನೆ ಕಳೆದುಕೊಂಡ ‘ಕಾಮಿಡಿ ಕಂಪನಿ’ ಕಲಾವಿದರಿಗೆ ಅಕುಲ್ ಬಾಲಾಜಿ ನೆರವು

Update: 2019-08-23 14:31 GMT

ಬೆಂಗಳೂರು : ಇತ್ತೀಚೆಗೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿರುವ ಪ್ರವಾಹವು ‘ಕಲರ್ಸ್ ಕನ್ನಡ’ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ‘ಕಾಮಿಡಿ ಕಂಪನಿ’ ಎಂಬ ಹಾಸ್ಯ ಕಾರ್ಯಕ್ರಮದ ಇಬ್ಬರು ಸ್ಪರ್ಧಿಗಳ ಜೀವನವನ್ನೇ ಬುಡಮೇಲು ಮಾಡಿದೆ. ವಿನೋದ್ ಚಾರ್ಮಾಡಿ ಹಾಗೂ ಕುಮಾರ್ ಈಗಷ್ಟೇ ಬೆಳಕಿಗೆ ಬರುತ್ತಿರುವ ಪ್ರತಿಭೆಗಳು. ಆದರೆ ಇತ್ತೀಚಿನ ಪ್ರವಾಹದಲ್ಲಿ ಇವರಿಬ್ಬರ ಮನೆಗಳೂ ಕೊಚ್ಚಿಕೊಂಡು ಹೋಗಿವೆ.

ಮನೆ ಮಾತ್ರವಲ್ಲದೆ ತಮ್ಮ ಕುಟುಂಬದ ಜೀವನಕ್ಕೆ ಆಧಾರವಾಗಿದ್ದ ಹಸುಗಳು ಕೂಡಾ ಪ್ರವಾಹದಲ್ಲಿ ಹೋಗಿವೆ. ಹೊಸದಾಗಿ ಆರಂಭವಾಗಿರುವ ಈ ಹಾಸ್ಯ ಕಾರ್ಯಕ್ರಮದ ಎಪಿಸೋಡ್‌ಗಳು ಪ್ರಸಾರವಾಗುತ್ತಿವೆ, ನೋಡಿ ಎಂದು ಹೇಳಲೆಂದು ತಮ್ಮ ಮನೆಗಳಿಗೆ ಕರೆ ಮಾಡಿದಾಗಲೇ ಮನೆ ಪ್ರವಾಹಕ್ಕೆ ತುತ್ತಾಗಿರುವ ಆಘಾತಕಾರಿ ವಿಷಯ ಇವರಿಬ್ಬರಿಗೂ ಗೊತ್ತಾಗಿದ್ದು.

ನನ್ನ ಮನೆಯವರು ಇದೀಗ ದೊಡ್ಡಮ್ಮನ ಮನೆಯಲ್ಲಿ ಇದ್ದಾರೆ. ನನ್ನ ತಮ್ಮ ಮೂರ್ನಾಲ್ಕು ಜನರನ್ನು ಪ್ರವಾಹದಿಂದ ರಕ್ಷಿಸಿದ್ದಾನೆ. ಆದರೆ ನಮ್ಮ ಜೀವನಕ್ಕೆ ಆಧಾರವಾಗಿದ್ದ ದನ ಕರುಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ, ಎನ್ನುವಾಗ ವಿನೋದ್‌ನ ಕಣ್ಣಾಲಿಗಳು ತುಂಬಿ ಬರುತ್ತವೆ. ಕುಮಾರ್‌ನ ಕುಟುಂಬದ ಸದಸ್ಯರು ಇದೀಗ ಗಂಜಿ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ.

ಈ ಕರುಣಾಜನಕ ಕತೆಯನ್ನು ಕೇಳಿದ ಕಾಮಿಡಿ ಕಂಪನಿ ನಿರೂಪಕ ಅಕುಲ್ ಬಾಲಾಜಿ ಇಬ್ಬರ ಕುಟುಂಬಗಳಿಗೂ ತಲಾ ಐವತ್ತು ಸಾವಿರ ರೂ.ಗಳ ನೆರವು ಘೋಷಿಸಿದರು. ಮಾತ್ರವಲ್ಲದೆ ರಾಜ್ಯದ ಎಲ್ಲರೂ ರಾಜ್ಯಾದ್ಯಂತ ಪ್ರವಾಹದಿಂದ ಸಂತ್ರಸ್ತರಾಗಿರುವವರ ನೆರವಿಗೆ ಧಾವಿಸುವಂತೆ ಮನವಿ ಮಾಡಿದರು.

ತಮ್ಮ ವೈಯಕ್ತಿಕ ನೋವಿನ ಹೊರತಾಗಿಯೂ ವಿನೋದ್ ಆ ಹಣವನ್ನು ತಮಗೆ ನೀಡುವ ಬದಲಾಗಿ ಚಾರ್ಮಾಡಿಯಲ್ಲಿರುವ ಬಡ ಕುಟುಂಬವೊಂದಕ್ಕೆ ನೀಡುವಂತೆ ಅಕುಲ್‌ರಲ್ಲಿ ಮನವಿ ಮಾಡಿದರು. ಮಾತ್ರವಲ್ಲದೆ ಭಾರತೀಯ ಸೇನೆ ಹಾಗೂ ಎನ್‌ಡಿಆರ್‌ಎಫ್ ತಂಡಗಳ ಕೆಲಸವನ್ನು ಕೊಂಡಾಡಿದರು.

ಕಾಮಿಡಿ ಕಂಪನಿ ಪ್ರತಿ ಶನಿವಾರ ಮತ್ತು ರವಿವಾರ ರಾತ್ರಿ 9:30ಕ್ಕೆ ‘ಕಲರ್ಸ್ ಕನ್ನಡ’ದಲ್ಲಿ ಪ್ರಸಾರವಾಗುತ್ತದೆ. ವಿನೋದ್ ಮತ್ತು ಕುಮಾರ್ ಅವರ ಪ್ರವಾಹಕ್ಕೆ ಸಿಲುಕಿರುವ ಕುಟುಂಬಗಳ ಬಗ್ಗೆ ಇನ್ನಷ್ಟು ವಿವರಗಳು ಈ ವಾರಾಂತ್ಯಕ್ಕೆ ಪ್ರಸಾರವಾಗಲಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News