×
Ad

ರಾಜ್ಯವು ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದೆ: ಡಾ.ಎಲ್.ಹನುಮಂತಯ್ಯ

Update: 2019-08-23 21:32 IST

ಬೆಂಗಳೂರು, ಆ.23: ರಾಜ್ಯವು ತನ್ನದಲ್ಲದ ತಪ್ಪಿಗೆ ತಾನು ಶಿಕ್ಷೆ ಅನುಭವಿಸುವ ಸ್ಥಿತಿ ಬಂದಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ವಿಷಾದ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಸಂಘರ್ಷ ಸಮಿತಿ ಆಯೋಜಿಸಿದ್ದ ರಾಜ್ಯದಲ್ಲಿ ನೆರೆ, ಬರ ಹಾಗೂ ರಾಜಕೀಯ ಸ್ಥಿತಿ ಚಿಂತನ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾದರೆ ಆ ಮಳೆಯ ನೀರನ್ನು ಆ ರಾಜ್ಯದ ಅಣೆಕಟ್ಟೆಗಳಲ್ಲಿ ತುಂಬಿಸಿಕೊಳ್ಳುತ್ತಾರೆ. ಹೆಚ್ಚಿನ ಮಳೆಯಾದಾಗ ಒಮ್ಮೆಯೇ ಅಣೆಕಟ್ಟೆಯ ನೀರನ್ನು ನಮ್ಮ ರಾಜ್ಯಕ್ಕೆ ಬಿಡುಗಡೆ ಮಾಡುತ್ತಾರೆ. ಇದರಿಂದಾಗಿ ರಾಜ್ಯವು ನೆರೆ ಪ್ರವಾಹವನ್ನು ಅನುಭವಿಸುತ್ತದೆ ಎಂದು ಬೇಸರಪಟ್ಟರು.

ನಮ್ಮ ರಾಜ್ಯದಲ್ಲಿ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಆದರೆ, ಪಕ್ಕದ ರಾಜ್ಯದಲ್ಲಿ ಅಧಿಕ ಮಳೆಯಾದಾಗ ಅದರ ಎಲ್ಲ ಪರಿಣಾಮವನ್ನು ನಾವು ಅನುಭವಿಸಬೇಕು. ಇದು ಭೌಗೋಳಿಕವಾಗಿ ಅನುಭವಿಸುತ್ತಿರುವ ಸಂಘರ್ಷವಾಗಿದೆ. ಒಂದು ತಿಂಗಳ ಹಿಂದೆ ಕುಡಿಯಲು 2 ಟಿಎಂಸಿ ನೀರನ್ನು ಬಿಡಿ ಎಂದು ಮಹಾರಾಷ್ಟ್ರವನ್ನು ಕೇಳಿದರೂ ಬಿಡಲಿಲ್ಲ. ಆದರೆ, ಅಲ್ಲಿ ಬಿದ್ದ ಅತಿಯಾದ ಮಳೆಯಿಂದ ಹಾಗೂ ಅಣೆಕಟ್ಟೆಗಳು ತುಂಬಿದ್ದರಿಂದ ಏಕಾಏಕಿ ರಾಜ್ಯಕ್ಕೆ ಹೆಚ್ಚಿನ ನೀರು ಬಿಡುಗಡೆ ಮಾಡಿದ್ದು, ರಾಜ್ಯದ 22 ಜಿಲ್ಲೆಗಳಲ್ಲಿನ ಅತಿವೃಷ್ಟಿಗೆ ಕಾರಣವಾಯಿತು. ಇದರಿಂದಾಗಿ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅಪಾಯ ಸಂಭವಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯದ ಪ್ರವಾಹದಿಂದಾಗಿ 88 ಜನ ಸತ್ತಿದ್ದಾರೆ. 6 ಜನ ಕಣ್ಮರೆಯಾಗಿದ್ದು ಅವರ ಮಾಹಿತಿ ಇನ್ನೂ ದೊರೆತಿಲ್ಲ. 1,840 ಜಾನುವಾರುಗಳು ಸತ್ತಿವೆ. 303 ಗಂಜಿ ಕೇಂದ್ರಗಳು ಸ್ಥಾಪಿಸಲಾಗಿದೆ. 1.59 ಲಕ್ಷ ಜನರು ಈ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು, 8 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಅಲ್ಲದೆ, 103 ತಾಲೂಕುಗಳು ಅತಿವೃಷ್ಟಿಗೆ ಸಿಲುಕಿರುವುದನ್ನು ಗಮನಿಸಿದರೆ, ರಾಜ್ಯದ ಶೇ.75 ಭಾಗ ಪ್ರವಾಹದಿಂದ ನರಳಿರುವುದು ತಿಳಿಯುತ್ತದೆ ಎಂದು ಮಾಹಿತಿ ನೀಡಿದರು.

ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ನೆರೆ ಮತ್ತು ಬರ ರಾಜ್ಯಕ್ಕೆ ನಿರಂತರವಾಗಿ ಬರುತ್ತಲೇ ಇದೆ. ರಾಜಸ್ಥಾನವನ್ನು ಬಿಟ್ಟರೆ ಈ ದೇಶದಲ್ಲಿ ಬರಗಾಲ ಇರುವುದು ಕರುನಾಡಿನಲ್ಲಿ ಮಾತ್ರ. 70 ದಶಕಗಳಿಂದಲೂ ಇದರ ನಿವಾರಣೆಗೆ ಯಾರೂ ಪ್ರಯತ್ನ ಮಾಡಿಲ್ಲ. ಕಳೆದ ವರ್ಷದ ಬರಗಾಲದ ಛಾಯೆಯನ್ನು ಎಷ್ಟು ಪ್ರದೇಶಗಳು ಅನುಭವಿಸಿವೆ. ಕೊಡಗಿನ ವಿಕೋಪ ಹಾಗೂ ಇತ್ತೀಚಿನ ಪ್ರವಾಹದಿಂದ ರಾಜ್ಯಕ್ಕೆ ಎಷ್ಟು ನಷ್ಟವಾಗಿದೆ ಎಂಬ ನಿಖರವಾದ ಮಾಹಿತಿಯೂ ಇಲ್ಲ. ಪರಿಹಾರವೂ ದೊರಕಲಿಲ್ಲ. ಇದು ರಾಜ್ಯ ರಾಜಕೀಯ ಮುಖಂಡರ ಅಧಿಕಾರದ ದಾಹದಿಂದ ಹಾಗೂ ಸರಕಾರದ ಅಸ್ಥಿರತೆಯಿಂದ ಎಂದು ಬೇಸರ ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ಸಿಎಂ ಎರಡು ದಿನದಿಂದ ನೀರು ಬಿಡುತ್ತೇವೆ ಎಂದು ಹೇಳಿದ್ದರು. ಆದರೆ ರಾಜ್ಯದಲ್ಲಿನ ಕೊಳಕು ರಾಜಕೀಯದ ವಾತಾವರಣದಿಂದ ನಮ್ಮ ಒಬ್ಬ ನಾಯಕನೂ, ಅಧಿಕಾರಿಗಳೂ ಗಮನ ಹರಿಸಲಿಲ್ಲ. ಹೀಗಾಗಿ ಇದಕ್ಕೆಲ್ಲ ನಾವೇ ಹೊಣೆಗಾರರು. ಏಕೆಂದರೆ ನೆರೆರಾಜ್ಯದ ಪ್ರವಾಹ ಹಾಗೂ ಅಣೆಕಟ್ಟೆಗಳೆಲ್ಲ ತುಂಬಿ ತುಳುಕಿದ್ದರಿಂದ ನಮ್ಮ ರಾಜ್ಯ ಈ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದರು.

ರಾಜ್ಯದ ಹಿತ್ತಾಸಕ್ತಿಗೋಸ್ಕರ ಕಾವೇರಿ ನಿರ್ವಹಣಾ ಮಂಡಳಿಯ ರೀತಿ ಕೃಷ್ಣ ನಿರ್ವಹಣಾ ಮಂಡಳಿ ರಚಿಸಬೇಕು ಹಾಗೂ ಅಲ್ಲಿನ ಅಣೆಕಟ್ಟೆಯಿಂದ ಎಷ್ಟು ಟಿಎಂಸಿ ನೀರನ್ನು ಯಾವ ಯಾವ ಪ್ರದೇಶಗಳಿಗೆ ನೀಡಬೇಕು ಎಂಬುದನ್ನು ನಾವು ಮನಗಾಣಬೇಕು. ಅಲ್ಲದೆ, ನಾವು ಇನ್ನೂ ನೀರನ್ನು ಸರಿಯಾಗಿ ಉಪಯೋಗ ಮಾಡುತ್ತಿಲ್ಲ. ಬರಗಾಲದ ಪರಿಹಾರವನ್ನೂ ಕಂಡುಕೊಳ್ಳುತ್ತಿಲ್ಲ ಎಂದು ತಿಳಿಸಿದರು.

ಕೇಂದ್ರ ಸರಕಾರ ನೆರೆ ರಾಜ್ಯಗಳಲ್ಲಿ ಸಂಭವಿಸಿದ ವಿಕೋಪಗಳಿಗೆ ಅಧಿಕಮಟ್ಟದ ಸಹಾಯ ಮಾಡುತ್ತದೆ. ಆದರೆ ರಾಜ್ಯದ ನೆರೆ ನೋಡಿಕೊಂಡು ಹೋಗುತ್ತಾರೆಯೇ ಹೊರತು, ಪರಿಹಾರವನ್ನು ಘೋಷಣೆ ಮಾಡುವುದಿಲ್ಲ. ಇದು ರಾಜಕೀಯ ಲೆಕ್ಕಾಚಾರವಾಗಿದೆ. -ಕೋಡಿಹಳ್ಳಿ ಚಂದ್ರಶೇಖರ್, ರೈತ ಸಂಘದ ಅಧ್ಯಕ್ಷ ರಾಜ್ಯದಲ್ಲಿ 17 ಶಾಸಕರನ್ನು ಕೊಂಡುಕೊಳ್ಳುವುದಾಗಿ ಹೇಳಿಕೊಂಡಿರುವುದನ್ನು ಅಪರಾಧಿಯೇ ಒಪ್ಪಿಕೊಂಡಿದ್ದಾನೆ. ದೇಶದಲ್ಲಿ ಏಕ ಪಕ್ಷದ ಕಲ್ಪನೆ ಬಲಿಷ್ಠವಾಗುತ್ತಿರುವುದು ದುರಂತವಾದುದು. ನಾಯಕತ್ವ ಇಲ್ಲದ ದೇಶವು ಯಾವ ದಿಕ್ಕಿನೆಡೆ ಹೋಗುತ್ತಿದೆ. ನಾವು ಹೇಗೆ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುತ್ತೇವೆ ಎಂಬುದನ್ನು ನೆನೆದರೆ ಆತಂಕವಾಗುತ್ತದೆ.

-ಎಚ್.ಎಸ್.ದೊರೆಸ್ವಾಮಿ, ಸ್ವಾತಂತ್ರ ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News