ಬಿಜೆಪಿ ಹುಟ್ಟಿದ್ದೇ 370ವಿಧಿ ರದ್ದು, ರಾಮಮಂದಿರ ಕಟ್ಟಲು: ಬಿ.ಎಲ್.ಸಂತೋಷ್

Update: 2019-08-23 16:07 GMT

ಬೆಂಗಳೂರು, ಆ.23: ಬಿಜೆಪಿ ಸ್ಥಾಪನೆಗೊಂಡಿದ್ದೇ 370 ವಿಧಿಯಡಿಯಲ್ಲಿ ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವುದು ಹಾಗೂ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದಕ್ಕೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲವೆಂದು ಬಿಜೆಪಿಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಿಳಿಸಿದ್ದಾರೆ. 

ಶುಕ್ರವಾರ ಜನಮನ ಸಂಘಟನೆ ನಗರದ ಗಾಂಧೀ ಭವನದಲ್ಲಿ ಆಯೋಜಿಸಿದ್ದ ಕಾಶ್ಮೀರ 370 ವಿಧಿ ರದ್ಧತಿ ಕುರಿತ ವಿಶೇಷ ಉಪನ್ಯಾಸ ನೀಡಿದ ಅವರು, ಕಾಶ್ಮೀರಕ್ಕಿದ್ದ 370ವಿಧಿಯ ರದ್ಧತಿಗಾಗಿ ಜನಸಂಘದ ಸ್ಥಾಪಕ ಶ್ಯಾಮ್‌ಪ್ರಸಾದ್ ಮುಖರ್ಜಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಈಗ ಅವರ ತ್ಯಾಗಕ್ಕೆ ಪ್ರಧಾನಿ ನರೇಂದ್ರ ಮೋದಿ ನ್ಯಾಯ ಒದಗಿಸಿದ್ದಾರೆ ಎಂದು ತಿಳಿಸಿದರು.

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮಾಡಿದ ಎಡವಟ್ಟುಗಳನ್ನು ದೇಶದ 15ನೇ ಪ್ರಧಾನಮಂತ್ರಿಯಾದ ನರೇಂದ್ರ ಮೋದಿ ಸರಿಪಡಿಸುತ್ತಾ ಬರುತ್ತಿದ್ದಾರೆ. ನೆಹರೂಗೆ ಜಗತ್ತಿನ ಮುಂದೆ ಪ್ರಸಿದ್ಧಿಯಾಗಬೇಕೆಂಬ ಹಪಾಹಪಿಯಲ್ಲಿ ದೇಶದ ಗಡಿಗಳ ಸಂರಕ್ಷಣೆಯನ್ನು ಮರೆತರು. ಅದರಿಂದಾಗಿ ಕಾಶ್ಮೀರವನ್ನು ಭಾರತದ ಅವಿಭಾಜ್ಯ ಭಾಗವಾಗಿ ಮಾಡಿಕೊಳ್ಳಲು ವಿಫಲರಾದರು ಎಂದು ಅವರು ಹೇಳಿದರು.

370ವಿಧಿ ರದ್ಧತಿಯನ್ನು ಯಾಕೆ ಮಾಡಬಾರದೆಂಬುದಕ್ಕೆ ಮೂರು ಕಾರಣಗಳನ್ನು ಕೊಡಿ ಎಂದು ಸಂಸತ್‌ನಲ್ಲಿ ಅಮಿತ್ ಶಾ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳ ನಾಯಕರಿಗೆ ಕೇಳಿದರು. ಪ್ರತಿಪಕ್ಷಗಳ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಲವು ಕಾಂಗ್ರೆಸ್ ನಾಯಕರೂ ನಮ್ಮ ಪರವಾಗಿಯೆ ಇದ್ದರು ಎಂದು ಅವರು ತಿಳಿಸಿದರು.

ಈಗ ಕಾಶ್ಮೀರದಲ್ಲಿ ನಮ್ಮ ಸಂವಿಧಾನ ಸಂಪೂರ್ಣವಾಗಿ ಅಳವಡಿಕೆಯಾಗುತ್ತದೆ. ಇದರಿಂದ ಕಾಶ್ಮೀರದ ಜನತೆಗೆ ಹೆಚ್ಚು ಉಪಯೋಗವಾಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಈಗಾಗಲೆ ವೇದಾಂತ ಸಂಸ್ಥೆ ಆಸ್ಪತ್ರೆಗಳನ್ನು ತೆರೆಯಲು ಮುಂದಾಗಿದೆ. ಕೆಎಲ್‌ಇ ಸಂಸ್ಥೆ ಶಿಕ್ಷಣ ಸಂಸ್ಥೆಯೊಂದನ್ನು ತೆರೆಯಲು ಮಾತುಕತೆ ನಡೆಸುತ್ತಿದೆ. ಹೀಗೆ ಅಭಿವೃದ್ಧಿಯ ಪರ್ವ ಶುರುವಾಗಿದೆ ಎಂದು ಅವರು ಹೇಳಿದರು.

ನಾವು ಕಾಶ್ಮೀರದ ಪ್ರತ್ಯೇಕವಾದಿ ಪಕ್ಷ ಪಿಡಿಪಿ ಜೊತೆ ಸೇರಿ ಸರಕಾರ ರಚಿಸಿದಾಗ ಹಲವು ಮಂದಿ ನಮ್ಮನ್ನು ಟೀಕಿಸಿದ್ದರು. ಆದರೆ, ಇದೊಂದು ತಂತ್ರಗಾರಿಕೆಯ ಭಾಗವೆಂದು ಯಾರಿಗೂ ಅನ್ನಿಸಿರಲಿಲ್ಲ. ನಾವು 370ವಿಧಿಯನ್ನು ಏಕಾಏಕಿ ತೆಗೆಯುವಂತಹ ಭಂಡತನ ಪ್ರದರ್ಶಿಸಲಿಲ್ಲ. ಕಳೆದ 5, 6ವರ್ಷಗಳಿಂದ ಕಾಶ್ಮೀರದಲ್ಲಿ 370ವಿಧಿ ರದ್ದುಪಡಿಸುವಂತಹ ವಾತಾವರಣವನ್ನು ನಿರ್ಮಿಸಿದ್ದೆವು.

-ಬಿ.ಎಸ್.ಸಂತೋಷ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News