ಶತಕ ವಂಚಿತಗೊಂಡಿರುವುದಕ್ಕೆ ಬೇಸರವಿಲ್ಲ: ರಹಾನೆ

Update: 2019-08-23 18:41 GMT

ಆ್ಯಂಟಿಗುವಾ, ಆ.23: ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ಶತಕ ವಂಚಿತವಾಗಿರುವ ಹಿನ್ನೆಲೆಯಲ್ಲಿ ನನಗೇನು ಬೇಸರ ಇಲ್ಲ. ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ತಂಡದ ಉಪ ನಾಯಕ ಅಜಿಂಕ್ಯ ರಹಾನೆ ತಿಳಿಸಿದ್ದಾರೆ.

    ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಮೊದಲನೇ ದಿನ ಕೇಮರ್ ರೋಚ್ ಹಾಗೂ ಶಾನನ್ ಗ್ಯಾಬ್ರಿಯಲ್ ಅವರ ಮಾರಕ ದಾಳಿಗೆ ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕೈಸುಟ್ಟುಕೊಂಡು ಪೆವಿಲಿಯನ್ ಹಾದಿ ಹಿಡಿದಾಗ ಅಜಿಂಕ್ಯ ರಹಾನೆ ಕ್ರೀಸ್‌ಗೆ ಅಂಟಿಕೊಂಡು ಬ್ಯಾಟ್ ಮಾಡಿದ್ದರು. ಇವರಿಗೆ ರಾಹುಲ್ ಮತ್ತು ಹನುಮ ವಿಹಾರಿ ಸಾಥ್ ನೀಡಿದ್ದರು.

  ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಜಿಂಕ್ಯಾ ರಹಾನೆ ಅವರು ದೀರ್ಘ ಸಮಯ ಕ್ರೀಸ್‌ನಲ್ಲಿ ಉಳಿದು ತಂಡದ ಬಗ್ಗೆ ಹೆಚ್ಚು ಯೋಚನೆ ಮಾಡುತ್ತೇನೆ. ಒಂದು ವೇಳೆ ಶತಕ ಬಾರಿಸಲು ಸಾಧ್ಯವಾಗದಿದ್ದರೆ ಆ ಬಗ್ಗೆ ನನಗೇನು ಬೇಸರ ಇಲ್ಲ. ಶತಕ ವಂಚಿತನಾದೆನ್ನಲ್ಲಾ ಎಂಬ ಬೇಸರ ವ್ಯಕ್ತಪಡಿಸುವ ಮನಸ್ಥಿತಿ ನನ್ನದಲ್ಲ. ತಂಡದ ಗೆಲುವಿಗಾಗಿ ಹೋರಾಟ ನಡೆಸುವ ಮನೋಭಾವ ನನ್ನದು ಎಂದು ಅಭಿಪ್ರಾಯಪಟ್ಟರು.

 ಆಸ್ಟ್ರೇಲಿಯ ವಿರುದ್ಧ ಕೊನೆಯ ಟೆಸ್ಟ್ ಸುಮಾರು ಏಳು ತಿಂಗಳಾಗಿದೆ. ಹಾಗಾಗಿ, ದೀರ್ಘ ಸಮಯದ ಬಳಿಕ ನಾವು ಟೆಸ್ಟ್ ಆಡುವಾಗ ಕ್ರೀಸ್‌ಗೆ ಹೊಂದಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ . ಈ ಕಾರಣದಿಂದಾಗಿ ಸಾಧ್ಯವಾದಷ್ಟು ಹೆಚ್ಚು ಎಸೆತಗಳನ್ನು ಆಡುವ ಮೂಲಕ ತಂಡಕ್ಕೆ ನೆರವಾಗಬೇಕೆಂಬ ಯೋಜನೆ ಹಾಕಿಕೊಂಡು ಬ್ಯಾಟಿಂಗ್ ನಡೆಸಿದೆ ಎಂದು ರಹಾನೆ ತಿಳಿಸಿದ್ದಾರೆ.

ಆರಂಭದಲ್ಲಿ ನನಗೆ ಬ್ಯಾಟಿಂಗ್ ಮಾಡುವುದು ಕಠಿಣವಾಗಿ ಕಂಡು ಬಂತು. ಯಾಕೆಂದರೆ ಚೆಂಡು ಹೆಚ್ಚು ಪುಟಿದೇಳುತ್ತಿತ್ತು ಹಾಗೂ ಚೆಂಡಿನ ಚಲನೆ ಯಾವ ರೀತಿ ಇದೆ ಎಂದು ಯೋಚಿಸಲು ಸಾಧ್ಯವಿರಲಿಲ್ಲ. ವೆಸ್ಟ್ ಇಂಡೀಸ್‌ನ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. 25 ರನ್‌ಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ಸಮಯದಲ್ಲಿ ಕ್ರೀಸ್‌ಗೆ ಆಗಮಿಸಿದ್ದೆ. ಆಗ ಬ್ಯಾಟಿಂಗ್ ನಡೆಸುವುದು ನನಗೆ ಸವಾಲಾಗಿತ್ತು ಎಂದು ರಹಾನೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News