ನಿಮ್ಮ ಪಾದಗಳು ವಾಸನೆ ಬೀರುತ್ತಿವೆಯೇ ? ಇಲ್ಲಿವೆ ಅದರ ಕಾರಣಗಳು

Update: 2019-08-23 18:52 GMT

ನೀವು ನಿಮ್ಮ ಶೂಗಳನ್ನು ಕಳಚಿದಾಕ್ಷಣ ಇಡೀ ಕೋಣೆಯಲ್ಲಿ ದುರ್ಗಂಧವುಂಟಾಗುತ್ತದೆಯೇ? ನೀವು ಕಾಲುಗಳನ್ನು ನಿಯಮಿತವಾಗಿ ತೊಳೆದುಕೊಳ್ಳುತ್ತೀರಿ ಮತ್ತು ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತೀರಿ,ಆದರೂ ಅವು ಕೆಟ್ಟ ವಾಸನೆಯನ್ನು ಸೂಸುತ್ತಿವೆಯೇ? ನಿಮ್ಮ ಪಾದಗಳ ವಾಸನೆಯಿಂದಾಗಿ ನಿಮ್ಮ ಸಹೋದ್ಯೋಗಿಗಳ ಎದುರು ಶೂಗಳನ್ನು ಕಳಚಲು ಮುಜುಗರ ಉಂಟಾಗುತ್ತದೆಯೇ? ಇದಕ್ಕೆಲ್ಲ ನಿಮ್ಮ ಉತ್ತರ ಹೌದು ಎಂದಾದರೆ ನೀವು ದುರ್ಗಂಧದ ಪಾದಗಳ ಸಮಸ್ಯೆಯ ಬಲಿಪಶುವಾಗಿದ್ದೀರಿ.

 ವೈದ್ಯಕೀಯವಾಗಿ ಬ್ರೊಮೊಡೊಸಿಸ್ ಎಂದು ಕರೆಯಲಾಗುವ ಈ ಸಮಸ್ಯೆಗೆ ಬ್ಯಾಕ್ಟೀರಿಯಾ ಸೋಂಕಿನಿಂದ ಹಿಡಿದು ಶಿಲೀಂಧ್ರ ಸೋಂಕಿನವರೆಗೆ ಹಲವಾರು ಕಾರಣಗಳಿವೆ. ಕಾಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು ಅಥವಾ ಸೂಕ್ತವಲ್ಲದ ಪಾದರಕ್ಷೆಗಳನ್ನು ಧರಿಸುವುದು ಕೂಡ ಪಾದಗಳು ದುರ್ವಾಸನೆಯನ್ನು ಬೀರಲು ಕಾರಣವಾಗುತ್ತವೆ. ಇಂತಹ ಕೆಲವು ಸಾಮಾನ್ಯ ಕಾರಣಗಳು ಕುರಿತು ಮಾಹಿತಿ ಇಲ್ಲಿದೆ...

ಶರೀರದ ಯಾವುದೇ ಭಾಗಕ್ಕಿಂತ ಹೆಚ್ಚಿನ ಬೆವರು ಗ್ರಂಥಿಗಳು ಪಾದಗಳಲ್ಲಿವೆ. ಶೂಗಳು ಮತ್ತು ಸಾಕ್ಸ್‌ಗಳು ಬೆವರು ಆವಿಯಾಗುವುದನ್ನು ತಡೆಯುತ್ತವೆ ಮತ್ತು ಇದು ಬ್ಯಾಕ್ಟೀರಿಯಾಗಳನ್ನು ಆಕರ್ಷಿಸುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಈ ಬ್ಯಾಕ್ಟೀರಿಯಾಗಳು ಅಭಿವೃದ್ಧಿಗೊಂಡು ಪಾದಗಳಲ್ಲಿ ಕೆಟ್ಟ ವಾಸನೆಗೆ ಕಾರಣವಾಗುತ್ತವೆ.

ಅತಿಯಾಗಿ ಬೆವರುವಿಕೆಯನ್ನುಂಟು ಮಾಡುವ ಜನ್ಮದತ್ತ ಸ್ಥಿತಿ ಹೈಪರ್‌ಹೈಡ್ರಾಸಿಸ್ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ತನ್ಮೂಲಕ ಪಾದಗಳು ವಾಸನೆ ಬೀರುವಂತೆ ಮಾಡುತ್ತದೆ.

ಪ್ರತಿ ದಿನ ಒಂದೇ ಜೊತೆ ಶೂಗಳನ್ನು ಧರಿಸುವುದು ಆರ್ದ್ರ ಸ್ಥಿತಿಯಿಂದಾಗಿ ಬ್ಯಾಕ್ಟೀರಿಯಾಗಳ ಸಂತತಿ ವೃದ್ಧಿಗೊಳ್ಳಲು ಉತ್ತಮ ನೆಲೆಯನ್ನು ಕಲ್ಪಿಸುತ್ತದೆ. ಪ್ರತಿದಿನ ಕಾಲುಚೀಲಗಳನ್ನು ಬದಲಿಸದಿದ್ದರೆ ಅವು ಬೆವರಿನಲ್ಲಿ ನೆನೆದು ತೊಪ್ಪೆಯಾಗಿ ರುತ್ತವೆ ಮತ್ತು ಸ್ವಯಂ ದುರ್ಗಂಧ ಬೀರುವ ಜೊತೆಗೆ ಪಾದಗಳೂ ಕೆಟ್ಟ ವಾಸನೆ ಹೊಂದಿರುವಂತೆ ಮಾಡುತ್ತವೆ.

ಮುಚ್ಚಿದ ಅಥವಾ ಬಿಗಿಯಾದ ಶೂಗಳನ್ನು ಧರಿಸುವುದು ಪಾದಗಳ ಮೇಲೆ ಒತ್ತಡವನ್ನು ಹೇರುವ ಜೊತೆಗೆ ಅವುಗಳನ್ನು ಗಾಯಗಳಿಗೆ ಸುಲಭಭೇದ್ಯವನ್ನಾಗಿಸುತ್ತದೆ,ಜೊತೆಗೆ ಅತಿಯಾದ ಬೆವರುವಿಕೆಯಿಂದ ಪಾದಗಳು ದುರ್ವಾಸನೆ ಬೀರುವಂತೆ ಮಾಡುತ್ತವೆ.

ಪ್ರತಿ ದಿನ ಮನೆಗೆ ಮರಳಿದ ಬಳಿಕ ಪಾದಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳದಿದ್ದರೆ ಅದೂ ಈ ಸಮಸ್ಯೆಗೆ ಕಾರಣವಾಗುತ್ತದೆ.

  ಕಾಲುಗಳು ವಾಸನೆ ಬೀರಲು ಕಾರಣಗಳು ಏನೇ ಇರಲಿ,ಅದು ವ್ಯಕ್ತಿಗೆ ತೀರ ಮುಜುಗರವನ್ನುಂಟು ಮಾಡುತ್ತದೆ ಎನ್ನ್ನುವುದು ಸುಳ್ಳಲ್ಲ. ಆದರೆ ಇದನ್ನು ಕಡೆಗಣಿಸುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಮತ್ತು ಚರ್ಮದ ಸೋಂಕುಗಳೂ ಉಂಟಾಗಬಹುದು. ಮಧುಮೇಹ ರೋಗಿಗಳು ಈ ಸಮಸ್ಯೆಯನ್ನೆದುರಿಸುತ್ತಿದ್ದರೆ ಅದರಿಂದ ಪಾರಾಗಲು ಮೊದಲು ಡರ್ಮಟಾಲಜಿಸ್ಟ್‌ರನ್ನು ಭೇಟಿಯಾಗಬೇಕು. ಮಧುಮೇಹ ನಿಯಂತ್ರಣದಲ್ಲಿಲ್ಲದಿದ್ದರೆ ಅದು ನರಗಳ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಡಯಾಬಿಟಿಕ್ ಫೂಟ್‌ನ ಅಪಾಯವನ್ನು ಹೆಚ್ಚಿಸುವ ಜೊತೆಗೆ ಗ್ಯಾಂಗ್ರಿನ್‌ಗೂ ಕಾರಣವಾಗುತ್ತದೆ. ಅಲ್ಲದೆ ಮಧುಮೇಹಿಗಳು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಸೋಂಕುಗಳಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನೂ ಎದುರಿಸುತ್ತಿರುತ್ತಾರೆ. ಹೀಗಾಗಿ ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಅವರಿಗೆ ಮುಖ್ಯವಾಗುತ್ತದೆ.

ಪಾದಗಳನ್ನು ಬ್ಯಾಕ್ಟೀರಿಯಾ ಪ್ರತಿರೋಧಕ ಸಾಬೂನುಗಳಿಂದ ತೊಳೆದುಕೊಳ್ಳುವುದು,ಬೆರಳುಗಳ ನಡುವಿನ ಸಂದುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು,ಪಾದಗಳನ್ನು ತೊಳೆದುಕೊಂಡ ಬಳಿಕ ಅವುಗಳನ್ನು ಒಣಬಟ್ಟೆಯಿಂದ ಚೆನ್ನಾಗಿ ಒರೆಸುವುದು,ಪ್ರತಿ ದಿನ ಒಂದೇ ಜೊತೆ ಶೂಗಳನ್ನು ಧರಿಸಿಕೊಳ್ಳುವ ಪದ್ಧತಿಯನ್ನು ಕೈಬಿಡುವುದು ಇತ್ಯಾದಿ ಸರಳ ಉಪಾಯಗಳ ಮೂಲಕ ಪಾದಗಳು ದುರ್ವಾಸನೆಯನ್ನು ಬೀರುವುದನ್ನು ತಡೆಯಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News