ಕೇಂದ್ರದಿಂದ ಹೆಚ್ಚಿನ ನೆರವಿನ ವಿಶ್ವಾಸ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-08-24 16:46 GMT

ಬೆಂಗಳೂರು, ಆ. 24: ನೆರೆ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ತಂಡ ರಾಜ್ಯಕ್ಕೆ ಆಗಮಿಸಿದ್ದು, ತಂಡ ಖುದ್ದು ಪರಿಶೀಲನೆ ನಡೆಸಿ ಕೇಂದ್ರಕ್ಕೆ ವಿಸ್ತೃತ ವರದಿ ಸಲ್ಲಿಸಲಿದ್ದು, ಕೇಂದ್ರ ಸರಕಾರದಿಂದ ಹೆಚ್ಚಿನ ನೆರವು ಸಿಗುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೇಂದ್ರ ಅಧ್ಯಯನ ತಂಡದ ಜತೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಕೇಂದ್ರ ನೆರೆ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿದ್ದು, ಬೆಳಗಾವಿ, ಬಾಗಲಕೋಟೆ, ಗದಗ ಹಾಗೂ ಕೊಡಗು ಜಿಲ್ಲೆಗಳಲ್ಲಿ ಖುದ್ದು ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಲಿದೆ. ಸ್ಥಳೀಯ ಅಧಿಕಾರಿಗಳು ಭಾರೀ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದ ಸಂಭವಿಸಿರುವ ಹಾನಿಯ ಬಗ್ಗೆ ಮಾಹಿತಿ ನೀಡಿದೆ ಎಂದ ಅವರು, ರಾಜ್ಯದಲ್ಲಿನ ಪ್ರವಾಹದಿಂದ ಉಂಟಾಗಿರುವ ಅನಾಹುತ, ನಷ್ಟದ ಕುರಿತು ಕೇಂದ್ರ ತಂಡಕ್ಕೆ ಮಾಹಿತಿ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಭವಿಸಿರುವ ಜನ- ಜಾನುವಾರುಗಳ ಸಾವು, ರಸ್ತೆಗಳು ಹಾಗೂ ಬೆಳೆ ನಷ್ಟ ಸೇರಿದಂತೆ ಅಗತ್ಯ ಮಾಹಿತಿ ನೀಡಿದ್ದು, ಹಾನಿಯ ಬಗ್ಗೆ ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಕೇಂದ್ರದಿಂದ ಆಗಮಿಸಿರುವ ತಂಡ ರಾಜ್ಯದಲ್ಲಿ ಆ.28ರ ವರೆಗೆ ಮೂರು ದಿನ ಪ್ರವಾಸ ಕೈಗೊಳ್ಳಲಿದ್ದು, ಮಾಹಿತಿ ಸಂಗ್ರಹಿಸಲಿದೆ. ಅದಷ್ಟು ಶೀಘ್ರವೇ ಕೇಂದ್ರಕ್ಕೆ ಸಮಗ್ರ ವರದಿ ಸಲ್ಲಿಸಲಿದ್ದು, ಕೇಂದ್ರ ಸರಕಾರದಿಂದ ಹೆಚ್ಚಿನ ನೆರವು ದೊರೆಯುವ ಸಾಧ್ಯತೆಗಳಿವೆ ಇದರಿಂದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಸಚಿವರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ್, ಲಕ್ಷ್ಮಣ ಸವದಿ, ಕೇಂದ್ರ ಅಧ್ಯಯನ ತಂಡದ ಮುಖ್ಯಸ್ಥ ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಕಾಶ್, ಸದಸ್ಯರಾದ ಎಸ್.ಸಿ.ಮೀನಾ, ಡಾ. ಪೊನ್ನುಸ್ವಾಮಿ, ಜಿತೇಂದ್ರ ಪನ್ವಾರ್, ವಿಜಯ್‌ಕುಮಾರ್, ಮಾಣಿಕ್ ಚಂದ್ರ ಪಂಡಿತ್ ಹಾಗೂ ಓ.ಪಿ.ಸುಮನ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News