ಜಾತಿ ವ್ಯವಸ್ಥೆಯ ವಿರುದ್ಧ ಜನಾಕ್ರೋಶ ರೂಪಗೊಳ್ಳಬೇಕು: ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತ ಬೆಜವಾಡ ವಿಲ್ಸನ್

Update: 2019-08-24 17:01 GMT

ಬೆಂಗಳೂರು, ಆ.24: ದೇಶವು ಜಾತೀಯತೆ, ಅಸ್ಪಶ್ಯತೆಯಿಂದ ನರಳುತ್ತಿದೆ. ಮಲದ ಗುಂಡಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಮೃತಪಡುತ್ತಿದ್ದಾರೆ. ಇದರ ಬಗ್ಗೆ ಜನಾಕ್ರೋಶ ರೂಪಗೊಳ್ಳದೇ ಇರುವುದು ಇಂದಿನ ದುರಂತವಾಗಿದೆ ಎಂದು ಮ್ಯಾಗಸ್ಸೆ ಪ್ರಶಸ್ತಿ ಪುರಸ್ಕೃತ ಬೆಜವಾಡ ವಿಲ್ಸನ್ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಸುಚಿತ್ರಾ ಫಿಲ್ಮಂ ಸೊಸೈಟಿ ವತಿಯಿಂದ ಆಯೋಜಿಸಿದ್ದ ಯು.ಆರ್.ಅನಂತಮೂರ್ತಿ ಅವರ ನೆನಪಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ಒಂದು ಬಾಂಬ್ ದಾಳಿಯಾದ ಸಂದರ್ಭದಲ್ಲಿ, ಒಂದು ಹೆಣ್ಣಿನ ಮೇಲೆ ಅತ್ಯಾಚಾರವಾದಾಗ, ಒಬ್ಬರ ಹತ್ಯೆಯಾದ ಸಂದರ್ಭದಲ್ಲಿ ಸಹಜವಾಗಿ ಜನಾಕ್ರೋಶ ಭುಗಿಲೇಳುತ್ತದೆ. ಆದರೆ, ಪ್ರತಿದಿನ ಜಾತಿಯ ಕಿರುಕುಳ, ಮಲ ಗುಂಡಿ ಶುಚಿ ಮಾಡುವ ಸಂದರ್ಭದಲ್ಲಿ ಸಾಯುವವರ ಬಗ್ಗೆ ಯಾಕೆ ಅಷ್ಟೇ ಮಟ್ಟದಲ್ಲಿ ಜನಾಕ್ರೋಶ ರೂಪಗೊಳ್ಳುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ಭಾರತದಲ್ಲಿ ಸಾವಿರಾರು ವರ್ಷಗಳಿಂದಲೂ ನಿರಂತರವಾಗಿ ಜಾತಿ ವ್ಯವಸ್ಥೆ ನಮ್ಮನ್ನು ಕಾಡುತ್ತಿದೆ. ಇಂದಿಗೂ ಅದು ಮುಂದುವರಿದಿದ್ದು, ಇತೀಚಿಗೆ ತಮಿಳುನಾಡಿನಲ್ಲಿ ದಲಿತರೊಬ್ಬರ ಮೃತದೇಹವನ್ನು ಸಾಗಿಸಲು ಅನುಮತಿ ನೀಡಿಲ್ಲ. ಮತ್ತೊಂದು ಕಡೆ ಮೇಲ್ಜಾತಿಯವರನ್ನು ಪ್ರೀತಿಸಿದ್ದಕ್ಕೆ ಹೆಣ್ಣಿನ ಎದೆಗೆ ಒದ್ದ ದೃಶ್ಯಗಳು ಇಂದಿಗೂ ನಮ್ಮ ಕಣ್ಣು ಮುಂದಿರುವ ತಾಜಾ ಸಾಕ್ಷಿಗಳಾಗಿವೆ ಎಂದರು.

ಪ್ರಧಾನಿ ಮೋದಿ ಕಳೆದ ಬಾರಿ ಅಧಿಕಾರ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಅಚ್ಛೇದಿನ್‌ಗಳನ್ನು ತರುತ್ತೇವೆ ಎಂದಿದ್ದರು. ಆದರೆ, ಅವರ ಅಧಿಕಾರ ಅವಧಿ ಮುಗಿಯುವ ವೇಳೆ ಮಲದ ಗುಂಡಿ ಸ್ವಚ್ಛಗೊಳಿಸುವುದು ಆಧ್ಯಾತ್ಮಿಕ ಸಂತುಷ್ಟಿ ನೀಡುವ ಕೆಲಸ ಎಂದು ಹೇಳುತ್ತಾರೆ. ಇದು ಮಾನವತೆಯ ಮೇಲೆ ನಡೆಸಿದ ದೊಡ್ಡ ದಾಳಿಯಾಗಿದೆ ಎಂದು ಅವರು ಹೇಳಿದರು. ಎರಡು ನಿಮಿಷ ಕೈಯಲ್ಲಿ ಪೊರಕೆ ಹಿಡಿದು, ಫೋಟೊಶೂಟ್ ಮಾಡಿಸಿಕೊಂಡು, ಸ್ವಚ್ಛ ಭಾರತದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿಗೆ, ದೇಶದಾದ್ಯಂತ ನೂರಾರು ಜನರು ಮಲ ಹೊರುವ ಪದ್ಧತಿ ಜೀವಂತವಾಗಿರುವುದು ಕಾಣುತ್ತಿಲ್ಲ. ಹೀಗಾಗಿ, ನಮಗೆ ಬೇಕಿರುವುದು ಸ್ವಚ್ಛ ಭಾರತ ಯೋಜನೆಯಲ್ಲ, ನಮ್ಮ ಮೆದುಳಿನ ಸ್ವಚ್ಛತೆ. ಜಾತಿ ವ್ಯವಸ್ಥೆ ಧ್ವಂಸವಾದಾಗ ಮಾತ್ರ ಅಭಿವೃದ್ದಿ ಭಾರತ ನಿರ್ಮಾಣವಾಗುತ್ತದೆ ಎಂದು ವಿಲ್ಸನ್ ಅಭಿಪ್ರಾಯಪಟ್ಟರು.

ದೇಶದಲ್ಲಿ ಲಕ್ಷಾಂತರ ದಲಿತರು ಮಲ ಹೊರುತ್ತಿದ್ದಾರೆ. ಆದರೂ, ಇದನ್ನು ತಡೆಯಲು ಸರಕಾರಗಳು ಮುಂದಾಗಿಲ್ಲ. ಮಲಹೊರುವ ಪದ್ಧತಿ ನಿಷೇಧವಾಗಿದ್ದರೂ, ಉತ್ತರ ಪ್ರದೇಶ, ಗುಜರಾತ್, ಬಿಹಾರ, ಮಧ್ಯಪ್ರದೇಶ, ಕರ್ನಾಟಕ ಸೇರಿದಂತೆ ಅನೇಕ ಕಡೆಗಳಲ್ಲಿ ಜೀವಂತವಾಗಿದೆ ಎಂದು ಅವರು ಆಪಾದಿಸಿದರು.

ಭಾರತ ಸಾರ್ವಭೌಮ ರಾಷ್ಟ್ರ. ಇಲ್ಲಿ ದೇಶದ ಸಾರ್ವಭೌಮತೆಗಿಂತ ಜನರ ಸಾರ್ವಭೌಮತೆ ಮುಖ್ಯ. ಜನರಿಲ್ಲದೆ ದೇಶ ಇಲ್ಲ. ಈ ಸಾರ್ವಭೌಮತೆಗೆ ಧಕ್ಕೆ ಉಂಟಾದಾಗ ಇದು ನಾನು ಬಯಸುವ ಭಾರತ ಅಲ್ಲ ಎಂದು ಗಟ್ಟಿ ಧ್ವನಿಯಲ್ಲಿ ಹೇಳಬೇಕು. ಆದರೆ, ಈ ರೀತಿ ಮಾತನಾಡಿದರೆ ದೇಶದ್ರೋಹಿ ಎಂದು ಪ್ರಮಾಣಪತ್ರ ನೀಡುವ ಏಜೆನ್ಸಿಗಳು ದೇಶದಲ್ಲಿವೆ. ಧೈರ್ಯದಿಂದ ಮಾತನಾಡಲೂ ಯೋಚಿಸಬೇಕಾದ ಸ್ಥಿತಿ ಎದುರಾಗಿದೆ ಎಂದು ಬೆಜವಾಡ ವಿಲ್ಸನ್ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಯು.ಆರ್.ಅನಂತಮೂರ್ತಿಯವರು ಬಹಿರಂಗವಾಗಿ, ಗಟ್ಟಿ ಧ್ವನಿಯಲ್ಲಿ ನಾನು ಕಂಡ ಭಾರತ ಇದು ಅಲ್ಲ ಎಂದರು. ಅವರಂತೆ ಎಲ್ಲರೂ ಬಹಿರಂಗವಾಗಿ ಸತ್ಯವನ್ನು ಮಾತನಾಡಬೇಕಿದೆ. ಇಲ್ಲದಿದ್ದರೆ, ಅಧಿಕಾರದಲ್ಲಿರುವವರಿಗೆ ನಮ್ಮ ನೋವು, ಸಂಕಷ್ಟ ಅರ್ಥವಾಗುವುದಿಲ್ಲ ಎಂದು ನುಡಿದರು.

ಭಾರತದಲ್ಲಿ ದಲಿತ, ಶೋಷಿತ ವರ್ಗಗಳು ಇಂದಿಗೂ ಆಹಾರ, ಶಿಕ್ಷಣ, ಉದ್ಯೋಗಕ್ಕಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿಯಿದೆ. ಪರಿಶಿಷ್ಟರಿಗೆ ಮೀಸಲಾತಿಯಿದ್ದರೂ, ಅವರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತಿಲ್ಲ. ಈ ವಿಷಯಗಳ ಬಗ್ಗೆ ಎಲ್ಲಿಯೂ ಚರ್ಚೆಯಾಗುತ್ತಿಲ್ಲ. ಕೇವಲ ಭಾವನಾತ್ಮಕ ವಿಚಾರಗಳು, ದೇಶಪ್ರೇಮದೊಳಗೆ ಮರೆಯಾಗುತ್ತಿವೆ ಎಂದರು.

ದೇಶದಲ್ಲಿ ಹಲವಾರು ಜನರು ಬಡವರಿದ್ದಾರೆ. ಆದರೆ, ಎಲ್ಲರೂ ಮಲ ಹೊರುವ ಕೆಲಸ ಮಾಡುವುದಿಲ್ಲ. ಅದೇ ರೀತಿ ಲಕ್ಷಾಂತರ ಪಿತೃ ಪ್ರಧಾನ ವ್ಯವಸ್ಥೆಯಿಂದ ನೊಂದ ಹೆಣ್ಣು ಮಕ್ಕಳಿದ್ದಾರೆ. ಆದರೆ, ಎಲ್ಲರೂ ಮಲಗುಂಡಿ ಸ್ವಚ್ಛ ಮಾಡುವುದಿಲ್ಲ. ಸಾವಿರಾರು ಜನರು ಅವಿದ್ಯಾವಂತರಿದ್ದಾರೆ. ಎಲ್ಲರೂ ಚರಂಡಿ ಸ್ವಚ್ಛ ಮಾಡುವುದಿಲ್ಲ. ತಲೆ ಮೇಲೆ ಮಲ ಹೊರುವವರು, ಮಲಗುಂಡಿ ಸ್ವಚ್ಛ ಮಾಡುವವರು, ಚರಂಡಿ ಸ್ವಚ್ಛ ಮಾಡುವವರು ಒಂದು ಜಾತಿಯ ಜನ ಮಾತ್ರ.

-ಬೆಜವಾಡ ವಿಲ್ಸನ್, ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News