ಆ.25: 50 ಸಾವಿರ ಕೋಟಿ ನೆರೆ ಪರಿಹಾರಕ್ಕೆ ಆಗ್ರಹಿಸಿ ಕನ್ನಡ ಒಕ್ಕೂಟಗಳ ಧರಣಿ

Update: 2019-08-24 17:16 GMT

ಬೆಂಗಳೂರು, ಆ.24: ನೆರೆ ಪರಿಹಾರಕ್ಕೆ 50 ಸಾವಿರ ಕೋಟಿ ರೂ.ಗೆ ಆಗ್ರಹಿಸಿ ಆ.25ರಂದು ರಾಜಭವನದ ಮುಂದೆ ಹಾಗೂ ಕನ್ನಡ ವಿರೋಧಿತನದ ವಿರುದ್ಧ ಆ.30.ರಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಕನ್ನಡದ ಒಕ್ಕೂಟವು ಹಮ್ಮಿಕೊಂಡಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟ ಅಧ್ಯಕ್ಷ ವಾಟಾಳ್ ನಾಗರಾಜ್, ರಾಜ್ಯದ ಅರ್ಧಕ್ಕಿಂತ ಹೆಚ್ಚಿನ ಭೂ ಪ್ರದೇಶವೇ ನೀರಲ್ಲಿ ಮುಳುಗಿ ಜನ ತತ್ತರಿಸಿದರೂ ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡದಿರುವುದು ಖಂಡನೀಯ. ನೆರೆ ಪರಿಹಾರ ಕ್ರಮದಲ್ಲಿ ರಾಜ್ಯ ಸರಕಾರವೂ ವಿಫಲವಾಗಿದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಿ ಸಮಸ್ಯೆ ಆಲಿಸಬೇಕು. 50,000 ಕೋಟಿ ರೂ. ಹಣ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ರಾಜಭವನದ ಮುಂದೆ ಧರಣಿ ನಡೆಸಲಾಗುವುದು ಎಂದರು.

ಪರಭಾಷಿಕರಿಂದ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಧಕ್ಕೆ ಉಂಟಾಗುತ್ತಿರುವುದನ್ನು ಪ್ರತಿರೋಧಿಸಿ ಆ.30ರಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಾರ್ವಾಡಿ ಮತ್ತು ಹಿಂದಿ ಹೇರಿಕೆ ವಿರುದ್ಧ ಪ್ರತಿಕೃತಿ ದಹನ ಮಾಡಲಾಗುತ್ತದೆ. ನಂತರ ಸಾವಿರಾರು ಜನರಿಂದ ಕೆೆ.ಆರ್.ಮಾರುಕಟ್ಟೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದೇವೆ. ಎಲ್ಲ ಕನ್ನಡಪರ ಸಂಘಟನೆ ಬೆಂಬಲಿಸಿದ್ದು ಸಾವಿರಾರು ಕನ್ನಡಾಭಿಮಾನಿಗಳು, ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ.

ರಾಜ್ಯದವರೇ ಆದ ಸಂಸದ ತೇಜಸ್ವಿ ಸೂರ್ಯ ಹಾಗೂ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರೇ ಕನ್ನಡಕ್ಕಾಗಿ ಹೋರಾಡುವವರನ್ನು ಪುಂಡರು ಎಂದರೆ ಇನ್ನು ಮಾರ್ವಾಡಿಗಳು ನಮ್ಮನ್ನು ಹೀಯಾಳಿಸುವುದರಲ್ಲಿ ತಪ್ಪಿಲ್ಲ. ಹೀಗಾಗಿಯೇ ಕನ್ನಡ ಅಸ್ತಿತ್ವಕ್ಕೆ ಅಲುಗಾಡುವ ಸ್ಥಿತಿ ಎದುರಾಗಿದೆ. ಇದಕ್ಕೆ ಕಡಿವಾಣ ಹಾಕುವ ಜತೆಗೆ ಉದ್ಯೋಗ, ಶಿಕ್ಷಣದಲ್ಲಿ ಕನ್ನಡಿಗರಿಗೆ ಆದ್ಯತೆ ದೊರೆಯುವಂತೆ ಮಾಡಬೇಕು. ಜತೆಗೆ ಉನ್ನತ ಸ್ಥಾನದಲ್ಲಿರುವವರು ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕು. ಯಾವುದೇ ಕಾರಣಕ್ಕೂ ಕನ್ನಡಿಗರ ಹೋರಾಟದಲ್ಲಿ ಧರ್ಮ ಬೆರೆಸಿ ರಾಜಕೀಯ ಮಾಡಬಾರದು ಎಂದು ಎಚ್ಚರಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ ಕುಮಾರ್ ಶೆಟ್ಟಿ ಮಾತನಾಡಿ, ಕನ್ನಡ ಕಡೆಗಣಿಸಿರುವ ಮಾರ್ವಾಡಿಗಳ ಬಳಿ ಕಡಿಮೆ ಬಡ್ಡಿಗೆ ಹಣ ತೆಗೆದುಕೊಳ್ಳುವ ನಮ್ಮ ಕನ್ನಡಿಗರೇ ಏಜೆಂಟ್‌ಗಳಾಗಿದ್ದಾರೆ. ಕನ್ನಡ ಹೊರತಾಗಿ ಬೇರಾವುದು ಶಾಶ್ವತವಲ್ಲ ಎಂಬುದನ್ನು ಅವರು ಮನಗಾಣಬೇಕು. ಕೂಡಲೇ ಎಚ್ಚೆತ್ತು ಸ್ವಾರ್ಥ ಬದಿಗಿಟ್ಟು ನಾಡು ನುಡಿಗಾಗಿ ಹೋರಾಡಬೇಕು ಎಂದು ತಿಳಿಸಿದರು.

ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರಾದ ಯಶವಂತ ಯಾಧವ್, ಮುಬಾರಕ್ ಪಾಷಾ, ಗಿರೀಶ್ ಯಾಧವ್, ಕುಮಾರ್, ಮಂಜುನಾಥ್ ದೇವೂರು ಹಾಗೂ ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News