ವಿದ್ಯಾರ್ಥಿಗಳು ರಾಜಕೀಯ ಪ್ರಜ್ಞೆ ಮೈಗೂಡಿಸಿಕೊಳ್ಳಲಿ: ಸಾಹಿತಿ ಅಲ್ಲಮಪ್ರಭು ಬೆಟ್ಟದೂರು

Update: 2019-08-24 17:21 GMT

ಬೆಂಗಳೂರು, ಆ.24: ವಿದ್ಯಾರ್ಥಿಗಳು ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಮೂಲಕ ಶಿಕ್ಷಣ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿರುವ ಸಮಸ್ಯೆಗಳಿಗೆ ತಾತ್ವಿಕವಾದ ಪರಿಹಾರವನ್ನು ಹುಡುಕಿಕೊಳ್ಳಬೇಕಿದೆ ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದರು.

ಅಖಿಲ ಭಾರತ ಪ್ರಜಾಸತಾತ್ಮಕ ವಿದ್ಯಾರ್ಥಿಗಳ ಒಕ್ಕೂಟ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 7ನೇ ವಿದ್ಯಾರ್ಥಿ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಸಿಲುಕಿರುವ ದೇಶದ ರಾಜಕೀಯ ವ್ಯವಸ್ಥೆ ಜನವಿರೋಧಿ ಹಾದಿಯಲ್ಲಿ ನಡೆಯುತ್ತಿದೆ. ಇವರಿಂದ ಅಧಿಕಾರವನ್ನು ಕಿತ್ತುಕೊಂಡು ಜನಪರವಾದ ಸರಕಾರವೊಂದನ್ನು ಸ್ಥಾಪಿಸಬೇಕಾದರೆ, ವಿದ್ಯಾರ್ಥಿಗಳು ರಾಜಕೀಯ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಚಳವಳಿ ರೂಪಿಸುವುದು ಅಗತ್ಯವಿದೆ ಎಂದು ಅವರು ಹೇಳಿದರು.

ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವುದಕ್ಕೂ ರಾಜಕೀಯ ವಲಯ ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಸಿಲುಕಿ ನರಳುತ್ತಿರುವುದಕ್ಕೂ ನೇರವಾದ ಸಂಬಂಧವಿದೆ. ಇವತ್ತು ಜನವಿರೋಧಿ ಸರಕಾರ ರಾಜ್ಯವನ್ನು, ದೇಶವನ್ನು ಆಳುತ್ತಿರುವುದರಿಂದ ಶಿಕ್ಷಣ ವಲಯದಲ್ಲಿ ಜನವಿರೋಧಿ ನೀತಿಗಳು ರೂಪಗೊಳ್ಳಲು ಕಾರಣವಾಗಿದೆ. ಇವೆಲ್ಲಾ ಅಂಶಗಳನ್ನು ವಿದ್ಯಾರ್ಥಿಗಳು ಕೂಲಂಕಷವಾಗಿ ಅರ್ಥ ಮಾಡಿಕೊಂಡು, ವಿದ್ಯಾರ್ಥಿ, ರೈತ ಹಾಗೂ ಕಾರ್ಮಿಕರ ಪರವಾದ ರಾಜಕೀಯವನ್ನು ಜಾರಿ ಮಾಡುವ ನಿಟ್ಟಿನಲ್ಲಿ ಕಾರ್ಯಮಗ್ನರಾಗಬೇಕೆಂದು ಅವರು ಆಶಿಸಿದರು.

ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗಬಾರದು. ದೇಶದಲ್ಲಿ ನಡೆಯುತ್ತಿರುವ ರಾಜಕೀಯ, ಆರ್ಥಿಕ, ಸಾಮಾಜಿಕ ಸೇರಿದಂತೆ ಎಲ್ಲ ರೀತಿಯ ಬದಲಾವಣೆಗಳನ್ನು ಗಂಭೀರವಾಗಿ ಅಧ್ಯಯನ ಮಾಡಬೇಕು. ಸಮಾಜದ ವಿವಿಧ ಚಿಂತಕರು, ಸಾಹಿತಿಗಳು, ಲೇಖಕರು ಬರೆದಿರುವ ಕೃತಿಗಳನ್ನು ಓದುವ ಮೂಲಕ ತಮ್ಮ ಚಿಂತನೆಗಳನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಎಸ್‌ಯುಸಿಐ ಪಕ್ಷದ ಕೆ.ರಾಧಾಕೃಷ್ಣ ಮಾತನಾಡಿ, ಇವತ್ತು ದೇಶದ ಭವಿಷ್ಯ ಕಿಡಿಗೇಡಿಗಳ ಹಾಗೂ ಬಂಡವಾಳಶಾಹಿಗಳ ಕೈಯಲ್ಲಿ ಸಿಲುಕಿ ನರಳುತ್ತಿದೆ. ಇವರ ಆಡಳಿತದಲ್ಲಿ ಶೋಷಿತರು ಕನಿಷ್ಠ ಮೂಲಭೂತ ಹಕ್ಕುಗಳನ್ನು ಕಳೆದುಕೊಂಡು ಹಲವು ಸಮಸ್ಯೆಗಳಿಗೆ ಈಡಾಗಿದ್ದಾರೆ. ಇಂತಹ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಬೇಕಾಗಿದೆ ಎಂದು ತಿಳಿಸಿದರು.

ವಿದ್ಯಾಭ್ಯಾಸ ಎನ್ನುವುದು ಬಡ ವಿದ್ಯಾರ್ಥಿಗಳ ಪಾಲಿಗೆ ಗಗನ ಕುಸುಮವಾಗಿದೆ. ವರ್ಷದಿಂದ ವರ್ಷಕ್ಕೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗಿನ ಶುಲ್ಕದ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಇಂತಹ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ರೂಪಿಸುತ್ತಿರುವವರು ಯಾರು, ಯಾಕಾಗಿ ಹಾಗೂ ಇದನ್ನು ಬದಲಾಯಿಸುವುದು ಹೇಗೆ ಎಂಬುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದರು.

ದೇಶದಲ್ಲಿ ಹಿಂದುತ್ವ ಸಿದ್ಧಾಂತವನ್ನು ಜಾರಿಗೆ ತರುವಂತಹ ರಾಜಕೀಯ ಬೇಕೊ, ಇಲ್ಲವೆ ಜಾತ್ಯತೀತ, ಸಮಾನತೆ, ವೈಚಾರಿಕತೆಯನ್ನು ಒಳಗೊಂಡ ರಾಜಕೀಯ ವ್ಯವಸ್ಥೆ ಬೇಕೊ ಎಂಬುದನ್ನು ವಿದ್ಯಾರ್ಥಿಗಳು ಸರಿಯಾಗಿ ನಿರ್ಧರಿಸಬೇಕು. ಹಾಗೂ ತಮಗೆ ಬೇಕಾದ ರಾಜಕೀಯ ವ್ಯವಸ್ಥೆಯ ನಿರ್ಮಾಣಕ್ಕೆ ಕಾರ್ಯಮಗ್ನರಾಗಬೇಕಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಎಸ್‌ಯುಸಿಐನ ಅಶೋಕ್ ಮಿಶ್ರ, ಪ್ರಮೋದ್, ಕೆ.ಉಮಾ ಮತ್ತಿತರರಿದ್ದರು.

ಹಕ್ಕೊತ್ತಾಯಗಳು

ಪದವಿವರೆಗಿನ ಶಿಕ್ಷಣವನ್ನು ಉಚಿತವಾಗಿ ನೀಡಬೇಕು.

ಎಲ್ಲ ಸರಕಾರಿ ಹಾಸ್ಟೆಲ್‌ಗಳನ್ನು ಸ್ವಂತ ಕಟ್ಟಡದಲ್ಲಿ ನಡೆಸಬೇಕು.

ವೈಚಾರಿಕ, ವೈಜ್ಞಾನಿಕ ಹಾಗೂ ಸಮಾನ ಶಿಕ್ಷಣ ನೀಡಲು ಆದ್ಯತೆ ನೀಡಬೇಕು

ಪಠ್ಯಪುಸ್ತಕವು ಕೋಮುಭಾವನೆ ಮುಕ್ತವಾಗಿರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News