ಕೆಪಿಎಲ್: ಅಮೋಘ ಆಲ್‌ರೌಂಡ್ ಪ್ರದರ್ಶನದಿಂದ ಅಬ್ಬರಿಸಿದ ಕೆ.ಗೌತಮ್

Update: 2019-08-24 18:31 GMT

ಬೆಂಗಳೂರು, ಆ.24: ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಈಗ ನಡೆಯತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ(ಕೆಪಿಎಲ್)ಮೊದಲಿಗೆ ಬ್ಯಾಟಿಂಗ್ ಹಾಗೂ ಆ ಬಳಿಕ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ.

ಬಳ್ಳಾರಿ ಟಸ್ಕರ್ಸ್ ತಂಡವನ್ನು ಪ್ರತಿನಿಧಿಸಿರುವ 30ರ ಹರೆಯದ ಗೌತಮ್ ಶುಕ್ರವಾರ ಶಿವಮೊಗ್ಗ ಲಯನ್ಸ್ ವಿರುದ್ಧ ಟ್ವೆಂಟಿ-20 ಪಂದ್ಯದಲ್ಲಿ 134 ರನ್ ಗಳಿಸಿದ್ದಲ್ಲದೆ, ಕರಾರುವಾಕ್ ಬೌಲಿಂಗ್‌ನ ಮೂಲಕ 8 ವಿಕೆಟ್‌ಗಳನ್ನು ಉರುಳಿಸಿ ಬಳ್ಳಾರಿಗೆ 70 ರನ್ ಗೆಲುವು ತಂದುಕೊಟ್ಟರು.

ಕೇವಲ 39 ಎಸೆತಗಳಲ್ಲಿ ಶತಕ ಪೂರೈಸಿದ ಗೌತಮ್ ಕೆಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಗಳಿಸಿದ ಹಿರಿಮೆಗೆ ಪಾತ್ರರಾದರು. 56 ಎಸೆತಗಳಲ್ಲಿ 134 ರನ್‌ನಿಂದ ಮಿಂಚಿದ ಗೌತಮ್ ಟೂರ್ನಮೆಂಟ್‌ನ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಸಾಧನೆಯನ್ನೂ ಮಾಡಿದರು. ಕೆಪಿಎಲ್‌ನ ಏಕೈಕ ಇನಿಂಗ್ಸ್‌ನಲ್ಲಿ ಗರಿಷ್ಠ ಸಂಖ್ಯೆಯ ಸಿಕ್ಸರ್(13) ಸಿಡಿಸಿದ ಸಾಧನೆ ಮಾಡಿದ್ದಾರೆ. ಬೌಂಡರಿಗಳ ಮೂಲಕವೇ ಒಟ್ಟು 106 ರನ್ ಗಳಿಸಿದ್ದಾರೆ. ಇದು ಕೆಪಿಎಲ್‌ನಲ್ಲಿ ದಾಂಡಿಗನೊಬ್ಬನ ಉತ್ತಮ ಸಾಧನೆಯಾಗಿದೆ.

ಬೌಲಿಂಗ್‌ನಲ್ಲೂ ಮಿಂಚಿದ ಆಫ್ ಸ್ಪಿನ್ನರ್ ಗೌತಮ್ 4 ಓವರ್‌ಗಳಲ್ಲಿ ಕೇವಲ 15 ರನ್ ಬಿಟ್ಟುಕೊಟ್ಟು 8 ವಿಕೆಟ್‌ಗಳನ್ನು ಉರುಳಿಸಿದರು.

 ಇದು ಟಿ-20 ಕ್ರಿಕೆಟ್ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್ ಆಗಿದೆ. ಆದರೆ, ರಾಜ್ಯಮಟ್ಟದ ಟಿ-20 ಲೀಗ್‌ಗಳು ಅಧಿಕೃತ ಟಿ-20 ಸ್ಥಾನಮಾನ ಹೊಂದಿಲ್ಲದ ಕಾರಣ ಈ ದಾಖಲೆಯನ್ನು ಅಧಿಕೃತವಾಗಿ ಪರಿಗಣಿಸುವುದಿಲ್ಲ. ರಾಜ್ಯಮಟ್ಟದ ಪಂದ್ಯಗಳನ್ನು ಇತರ ಟಿ-20 ಎಂದು ವರ್ಗೀಕರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News