ಅಗಲಿದ ಶೇಷನಾರಾಯಣ

Update: 2019-08-24 18:59 GMT

ಶೇಷನಾರಾಯಣರದು ವಿಕ್ಷಿಪ್ತ ವ್ಯಕ್ತಿತ್ವ. ಅವರು ವಾಚಾಳಿಗಳಾಗಿರಲಿಲ್ಲ. ಎಷ್ಟೂ ವೇಳೆ ಪ್ರಜಾವಾಣಿ/ಸುಧಾ ಕಚೇರಿಗೆ ಬಂದು ನನ್ನ ಮುಂದೆ ಕುಳಿತು ‘ನೀವು ಕೆಲಸ ಮಾಡಿ ನಾನು ತೊಂದರೆ ಕೊಡುವುದಿಲ್ಲ’ ಎಂದು ಸುಮ್ಮನೆ ಕುಳಿತುಬಿಡುತ್ತಿದ್ದರು. ಒಂದಷ್ಟು ಹೊತ್ತಿನ ನಂತರ ಕೈಚೀಲದಿಂದ ಹಸ್ತಪ್ರತಿಯೊಂದನ್ನು ಹೊರತೆಗೆದು ‘ಪ್ರಕಟಿಸಲು ಸಾಧ್ಯವಾದರೆ...’ ಎಂದು ಅದನ್ನು ನನ್ನ ಕೈಯಲ್ಲಿಟ್ಟು ದೂಸ್ರ ಮಾತಾಡದೆ ಹೊರಟು ಬಿಡುತ್ತಿದ್ದರು. ಬದುಕಿನ ಕಷ್ಟಕಾರ್ಪಣ್ಯಗಳ ನೋವುಂಡು ಅಲಿಪ್ತನಂತೆ ಇರುತ್ತಿದ್ದ ಶೇಷನಾರಾಯಣರ ಮಾಗಿದ ಜೀವನಾನುಭವವೇ ಅವರ ಸಾಹಿತ್ಯ ಕೃತಿಗಳ ಮೂಲಸ್ರೋತ.

ಹಾವು ಹಡೆದ ತಾಯಿ ಬೇಲಿ ಹೊಕ್ಕಾಳೆ ಎನ್ನುವುದು ಒಂದು ನಾಣ್ನುಡಿ.ಇದು ಅದ್ಭುತ ರಮ್ಯ ಕಲ್ಪನೆಯಲ್ಲಿ ನಿಜವಾಗಬಹುದು ಎನ್ನುವುದಕ್ಕೆ ಕನ್ನಡದ ಹಳೆಯ ಕಾದಂಬರಿಗಳಲ್ಲಿ ಒಂದಾದ ‘ಪದ್ಮ ರಂಗು’ ನಮಗೆ ನಿದರ್ಶನವಾಗಿ ಒದಗಿ ಬರುತ್ತದೆ. ಈ ಕಾದಂಬರಿಯ ಕರ್ತೃ ಈ ತಿಂಗಳ 7ರಂದು ನಮ್ಮಿಂದ ಅಗಲಿದ ಶೇಷನಾರಾಯಣ.‘ಪದ್ಮರಂಗು’ ಮಾನವ ದಂಪತಿಗೆ ಜನಿಸಿದ ಹಾವಿನ ಕಥೆಯೂ ಹೌದು, ಅದನ್ನು ಹಡೆದ ತಾಯಿಯ ಕಥೆಯೂ ವೈಥೆಯೂ ಹೌದು. ತಾಯಿ ತನ್ನ ದೌರ್ಭಾಗ್ಯ ಹಳಿಯುತ್ತಾ ಕರುಳ ಕುಡಿಯಾದ ಹಾವಿನ ಮರಿಯನ್ನು ದೂರ ಮಾಡಿದರೂ ಹಾವಿನ ಮರಿಗೆ ತಾಯಿಯ ಮೇಲಿನ ಪ್ರೀತಿಮಮಕಾರಗಳಿಂದ, ಮಾತೃ ವಾತ್ಸಲ್ಯದ ಸೆಳೆತಗಳಿಂದ ಬಿಡಿಸಿಕೊಳ್ಳಲಾಗುವುದಿಲ್ಲ. ಅದು ಮನೆಯಲ್ಲೇ ಸುಳಿದಾಡುತ್ತಾ ಕೊನೆಗೆ ಸಮಾರಂಭವೊಂದರಲ್ಲಿ ಪಾಯಸದ ಬಿಸಿ ಪಾತ್ರೆಯಡಿ ಸಿಲುಕಿ ಮರಣಹೊಂದುತ್ತದೆ. ಸುಮಾರು ಐವತ್ತು ಅರವತ್ತು ವರ್ಷಗಳ ಹಿಂದೆ ಓದಿದ ನನ್ನ ನೆನಪು. ಧಾರವಾಡದ ಮನೋಹರ ಗ್ರಂಥ ಮಾಲೆಯ ಪ್ರಕಟನೆಯಾದ ‘ಪದ್ಮರಂಗು’ ಕಾದಂಬರಿ ಬಹುಶ: ಅರವತ್ತರ ದಶಕದ ಪ್ರಾರಂಭದಲ್ಲಿ ಪ್ರಕಟಗೊಂಡಿದೆ. ಅದು ಕನ್ನಡ ಕಥಾ ಸಾಹಿತ್ಯದಲ್ಲಿ ವಾಸ್ತವ ಯುಗ ವಿಜೃಂಭಿಸುತ್ತಿದ್ದ ಕಾಲ. ಫ್ಯಾಂಟಸಿ (ಅದ್ಭುತ ರಮ್ಯ), ಮ್ಯಾಜಿಕಲ್ ರಿಯಲಿಸಂ (ಮಾಯಾ ವಾಸ್ತವ)ತಂತ್ರಗಳಾಗಲೀ ಬಳಕೆಗೆ ಹೆಚ್ಚಾಗಿ ಬಂದಿರಲಿಲ್ಲ. ಆ ಕಾಲದಲ್ಲಿ ಶೇಷನಾರಾಯಣ ವಾಸ್ತವ ಮಾರ್ಗದಲ್ಲೇ ಬರೆದ ‘ಪದ್ಮರಂಗು’ ಸಾಹಿತ್ಯಾಸಕ್ತರ ಗಮನಸೆಳೆಯುವುದರಲ್ಲಿ ಯಶಸ್ವಿಯಾಗಿತ್ತು.

ಶೇಷನಾರಾಯಣ ತೊಂಬತ್ತೆರಡರ ಇಳಿ ವಯಸ್ಸಿನಲ್ಲಿ ನಿಧನರಾದ ಸುದ್ದಿಯನ್ನು ದಿನ ಪತ್ರಿಕೆಯಲ್ಲಿ ಓದಿದಾಗ ಅವರ ಸೃಜನಶೀಲ ಪ್ರತಿಭೆಯೆ ದ್ಯೋತಕವಾಗಿ ನನಗೆ ಥಟ್ಟನೆ ‘ಪದ್ಮರಂಗು’ ನೆನಪಿಗೆ ಬಂತು. ವಯಸ್ಸಿನಿಂದಾಗಿ ದೇಹಶಕ್ತಿ ಕುಗ್ಗಿದ್ದರೂ ಅವರ ದನಿ ಕುಗ್ಗಿರಲಿಲ್ಲ, ಜೀವನೋತ್ಸಾಹ ಕುಗ್ಗಿರಲಿಲ್ಲ. ಮೊನ್ನೆಮೊನ್ನೆಯವರೆಗೂ ಅವರು ನನ್ನೊಡನೆ ಫೋನಿನಲ್ಲಿ ಮಾತನಾಡುತ್ತಿದ್ದರು.

ಶೇಷನಾರಾಯಣ ಗಡಿನಾಡ ಕನ್ನಡಿಗರು. ಅವರ ಊರು ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ತಾಳವಾಡಿ ಫಿರ್ಕಾಗೆ ಸೇರಿದ ಪಾಳ್ಯ ಎಂಬ ಗ್ರಾಮ. ಸುಬ್ರಹ್ಮಣ್ಯ-ಕಾವೇರಿ ದಂಪತಿಯ ಜ್ಯೇಷ್ಠ ಪುತ್ರರಾದ ಶೇಷನಾರಾಯಣ ಜನಿಸಿದ್ದು 1927ರ ಆಗಸ್ಟ್ 18ರಂದು. ಕುಟುಂಬದ ಬಡತನದಿಂದಾಗಿ ಓದು ನಾಲ್ಕನೇ ಸ್ಟಾಂರ್ಡಿಗೇ ನಿಂತುಹೋಯಿತು.ಹಳ್ಳಿಯಲ್ಲಿ ಉಳಿದರೆ ವಂಶಪಾರಂಪರ್ಯವಾಗಿ ಬಂದ ಶ್ಯಾನುಭೋಗಿಕೆ ವೃತ್ತಿಯಲ್ಲೇ ಬದುಕು ಸವೆಸಬೇಕಾಗುತ್ತದೆ ಎಂಬುದನ್ನರಿತು ಹುಟ್ಟಿದೂರಿಗೆ ವಿದಾಯ ಹೇಳಿ ಉದ್ಯೋಗ ಅರಸುತ್ತ ಊರೂರು ಅಲೆಯ ತೊಡಗಿದರು. ಶೇಷನಾರಾಯಣರ ಬದುಕೊಂದು ಚಕ್ರಾಯಣ. ಅವರು ವೃದ್ಧಾಪ್ಯದಲ್ಲಿ ಬೆಂಗಳೂರಿನಲ್ಲಿ ಮಕ್ಕಳೊಂದಿಗೆ ನೆಲಸುವವರೆಗೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಅವರು ಓದು-ಬರಹ-ಮುದ್ರಣ ಕೆಲಸಗಳಲ್ಲಿ ದೇಶ ಪರ್ಯಟನ ಮಾಡುತ್ತಲೇ ಇದ್ದರು.

ಶೇಷನಾರಾಯಣ ಬದುಕಿನ ಪಯಣ ಶುರುವಾದದ್ದು ಕೂಲಿ ಕೆಲಸದಿಂದ. ಲಾರಿ ಕಂಪೆನಿಯೊಂದರಲ್ಲಿ ಈ ಕಾಯಕ. ಉದ್ಯೋಗ ಬದಲಿಸುತ್ತ ಊರೂರು ಅಲೆಯುತ್ತೇ ಕಲಿತರು.ಲೋಕಾನುಭವದೊಂದಿಗೆ ಜ್ಞಾನವೂ ಬೆಳೆಯಿತು. ಸಾಹಿತ್ಯಕ್ಕೂ ಮುದ್ರಣ ತಂತ್ರಜ್ಞಾನಕ್ಕೂ ಇರುವಂಥ ಅವಿನಾಭಾವ ಸಂಬಂಧವೇ ಶೇಷನಾರಾಯಣರಿಗೂ ಮುದ್ರಣ ಕಲೆಗೂ.ಊರೂರು ಸುತ್ತುತ್ತಾ ಮೈಸೂರು ತಲುಪಿದ ಶೇಷನಾರಾಯಣ ಅಲ್ಲಿ ಮುದ್ರಣಾಲಯವೊಂದರಲ್ಲಿ ಕೆಲಸಕ್ಕೆ ಸೇರಿದರು. ಮೊಳೆ ಜೋಡಿಸುವುದರಿಂದ ಹಿಡಿದು ಮುದ್ರಿಸುವುದರವರೆಗೆ, ಬೈಂಡಿಂಗ್‌ವರೆಗೆ ಮುದ್ರಣ ತಂತಜ್ಞಾನದಲ್ಲಿ ಪರಿಣಿತರಾದರು.ಒಂದಷ್ಟು ಕಾಲ ಪತ್ರಕರ್ತರಾಗಿ ‘ಚಿತ್ರಗುಪ್ತ’ ಪತ್ರಿಕೆಯಲ್ಲಿ ದುಡಿದರು. 1971ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಿ.ಎಂ.ಶ್ರೀ ಅಚ್ಚುಕೂಟ ಸೇರಿ ಅದರ ಮುಖ್ಯಸ್ಥರಾದರು.ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಶ್ವಕೋಶ ಪ್ರಕಟನೆ ಯೋಜನೆಯಲ್ಲಿ ಭಾಗಿಯಾದರು. ಈ ಮಧ್ಯೆ ಎಪ್ಪತ್ತರ ದಶಕದಲ್ಲಿ ತಮ್ಮದೇ ಆದ ವಿಕಾಸ ಮುದ್ರಣಾಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಶೇಷನಾರಾಯಣರ ಬದುಕಿನಲ್ಲಿ ಇದೊಂದು ನಿಗೂಢ ಅಧ್ಯಾಯ. ಈ ಮುದ್ರಣಾಲಯ ಉತ್ತಮ ಗುಣಮಟ್ಟದ ಮುದ್ರಣಕ್ಕೆ ಹೆಸರುವಾಸಿಯಾಯಿತು. ಪ್ರಖ್ಯಾತ ಲೇಖಕರ ಗ್ರಂಥಗಳನ್ನು ಮುದ್ರಿಸಿದರು. ಆದರೆ ಒಂದು ಮುಂಜಾನೆ ಹಠಾತ್ತನೆ ವಿಕಾಸ ಮುದ್ರಣಾಲಯ ಬಂದ್ ಆಯಿತು. ಶೇಷನಾರಾಯಣರು ಕಾಣದಾದರು. ಮದ್ರಾಸಿನಲ್ಲಿದ್ದಾರೆಂದು ಸ್ವಲ್ಪಕಾಲದ ನಂತರ ಬೆಂಗಳೂರಿನ ಗೆಳೆಯರಿಗೆ ಸುದ್ದಿ ಬಂತು. ಒಂದಷ್ಟುಕಾಲದ ಅಜ್ಞಾತ ವಾಸದ ನಂತರ ಶೇಷನಾರಾಯಣ ಬೆಂಗಳೂರಿಗೆ ಹಿಂದಿರುಗಿದರು.

ಶೇಷನಾರಾಯಣರದು ವಿಕ್ಷಿಪ್ತ ವ್ಯಕ್ತಿತ್ವ. ಅವರು ವಾಚಾಳಿಗಳಾಗಿರಲಿಲ್ಲ. ಎಷ್ಟೂ ವೇಳೆ ಪ್ರಜಾವಾಣಿ/ಸುಧಾ ಕಚೇರಿಗೆ ಬಂದು ನನ್ನ ಮುಂದೆ ಕುಳಿತು ‘ನೀವು ಕೆಲಸ ಮಾಡಿ ನಾನು ತೊಂದರೆ ಕೊಡುವುದಿಲ್ಲ’ ಎಂದು ಸುಮ್ಮನೆ ಕುಳಿತುಬಿಡುತ್ತಿದ್ದರು. ಒಂದಷ್ಟು ಹೊತ್ತಿನ ನಂತರ ಕೈಚೀಲದಿಂದ ಹಸ್ತಪ್ರತಿಯೊಂದನ್ನು ಹೊರತೆಗೆದು ‘ಪ್ರಕಟಿಸಲು ಸಾಧ್ಯವಾದರೆ...’ ಎಂದು ಅದನ್ನು ನನ್ನ ಕೈಯಲ್ಲಿಟ್ಟು ದೂಸ್ರ ಮಾತಾಡದೆ ಹೊರಟು ಬಿಡುತ್ತಿದ್ದರು. ಬದುಕಿನ ಕಷ್ಟಕಾರ್ಪಣ್ಯಗಳ ನೋವುಂಡು ಅಲಿಪ್ತನಂತೆ ಇರುತ್ತಿದ್ದ ಶೇಷನಾರಾಯಣರ ಮಾಗಿದ ಜೀವನಾನುಭವವೇ ಅವರ ಸಾಹಿತ್ಯ ಕೃತಿಗಳ ಮೂಲಸ್ರೋತ.

 ಸುಮಾರು ಐವತ್ತು ಕೃತಿಗಳ ಕರ್ತೃವಾದ ಶೇಷನಾರಾಯಣರಿಗೆ ಕರತಲಾಮಲಕವಾಗಿ ಒಲಿದದ್ದು ಕಥಾಸಾಹಿತ್ಯ. ಅವರ ಮೊದಲ ಕಾದಂಬರಿ ‘ಮೂಲಾ ನಕ್ಷತ್ರ’ 1954ರಲ್ಲಿ ಮೈಸೂರಿನ ಕಾವ್ಯಾಲಯ ಪ್ರಕಾಶನದಿಂದ ಪ್ರಕಟವಾಯಿತು.ಮನುಷ್ಯನ ಸ್ವಾರ್ಥ, ಅಹಂಕಾರ, ದುರಾಸೆ, ಗ್ರಾಮೀಣ ಬಡತನ ಇವು ಶೇಷನಾರಾಯಣ ಕೃತಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಸ್ತು. ಹದಿನೇಳಕ್ಕೂ ಹೆಚ್ಚುಕಾದಂಬರಿಗಳು ಮತ್ತು ಎಂಟು ಕಥಾ ಸಂಕಲನಗಳು ಶೇಷನಾರಾಯಣರ ಸಾಹಿತ್ಯ ಮಲ್ಲಾರದ ಪ್ರಮುಖ ಕೃತಿಗಳು. ‘ಅನೆಕೊಂಬು’ ಅವರ ಜನಪ್ರಿಯ ಕಾದಂಬರಿಗಳಲ್ಲೊಂದು. ‘ವಿಭೀಷಣ’,‘ಅಹಲ್ಯೆ ಕಲ್ಲಾಗಲಿಲ್ಲ,‘ಅಯೋಧ್ಯೆಯಲ್ಲಿ ರಾಮನು ಇಲ್ಲ’ ಇವು ರಾಮಾಯಣ ಮಹಾ ಕಾವ್ಯ ಕುರಿತ ಶೇಷನಾರಾಯಣ ವಿಭಿನ್ನದೃಷ್ಟಿಕೋನದ ಕೃತಿಗಳು.ಕಾವೇರಿ ನದಿ ನೀರಿನ ವಿವಾದ ವಿಕೋಪ ಘಟ್ಟ ತಲುಪಿ ಬೆಂಗಳೂರು-ಮೈಸೂರು-ಮಂಡ್ಯಗಳು ಹೊತ್ತಿ ಉರಿಯುತ್ತಿದ್ದ ಸಮಯದಲ್ಲಿ ಶೇಷನಾರಾಯಣರು ಬರೆದ ಕೃತಿ: ‘ಕಾವೇರಿ:ಒಂದು ಚಿಮ್ಮು ಒಂದು ಹೊರಳು-ನಮ್ಮ ನದಿಗಳು ಮತ್ತು ಸಮಸ್ಯೆಗಳು’.ಕಾವೇರಿ ನದಿ ನೀರಿನ ವಿವಾದವನ್ನು ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಮತ್ತು ಕಾನೂನು- ನ್ಯಾಯಶಾಸ್ತ್ರಗಳ ಆಯಾಮಗಳಲ್ಲಿ ಶೋಧಿಸುವ ಈ ಕೃತಿ ಶೇಷನಾರಾಯಣರ ಮಹತ್ವಪೂರ್ಣವಾದ ಕಥಾಸಾಹಿತ್ಯೇತರ ಕೃತಿ. ವೈಚಾರಿಕ ಕೃತಿಯಾದರೂ ಕಾದಂಬರಿಯಂತೆಯೇ ಓದಿಸಿಕೊಳ್ಳುವುದು ಇದರ ಇನ್ನೊಂದು ಹಿರಿಮೆ. ನದಿ ನೀರಿನ ವಿವಾದ ಕುರಿತ ಅವರ ಗಾಢ ಅಧ್ಯಯನಕ್ಕೆ ಇದೊಂದು ನಿದರ್ಶನ.

 ಶೇಷನಾರಾಯಣ ಉತ್ತಮ ಭಾಷಾಂತರಕಾರರೂ ಆಗಿದ್ದರು. ತಮಿಳು ನೆಲದಲ್ಲಿ ಜನಿಸಿದ ಅವರು ತಮಿಳು ಭಾಷೆಯನ್ನು ಮಾತೃಭಾಷೆ ಕನ್ನಡದಂತೆಯೇ ಚೆನ್ನಾಗಿ ಕಲಿತಿದ್ದರು.ತಮಿಳಿನಲ್ಲಿ ಕೃತಿ ರಚಿಸುವಷ್ಟು ಸಾಮರ್ಥ್ಯವಿತ್ತು. ಅವರು ಕನ್ನಡದಿಂದ ತಮಿಳಿಗೆ ಹಾಗೂ ತಮಿಳಿನಿಂದ ಕನ್ನಡಕ್ಕೆ ಅನೇಕ ಕೃತಿಗಳನ್ನು ಅನುವಾದ ಮಾಡಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಅನೇಕ ಸಣ್ಣ ಕತೆಗಳನ್ನು,ಭೈರಪ್ಪನವರ ‘ದಾಟು’ ಕಾದಂಬರಿಯನ್ನು ತಮಿಳಿಗೆ ಭಾಷಾಂತರಿಸಿದ್ದಾರೆ. ತಮಿಳಿನ ಪ್ರಮುಖ ಸಾಹಿತಿಗಳಾದ ರಾಜಾಜಿ, ಕಲ್ಕಿ, ಅಖಿಲನ್, ಜಯಕಾಂತನ್, ಅಶೋಕಮಿತ್ರನ್, ಎಂ.ಪಿ. ಸೋಮಸುಂದರಂ ಮೊದಲಾದವರ ಪ್ರಸಿದ್ಧ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

 ಕನ್ನಡದ ಅನೇಕ ಮಧ್ಯಮ ಶ್ರೇಣಿಯ ಸಾಹಿತಿಗಳಂತೆ ಶೇಷನಾರಾಯಣರಿಗೂ ಸಾಹಿತ್ಯ ವಿಮರ್ಶೆಯ ನ್ಯಾಯ ಸಿಕ್ಕಿಲ್ಲ.ಅವರ ಕೃತಿಗಳ ಬಗ್ಗೆ ವಿಮರ್ಶಾವಲಯದಲ್ಲಿ ಚರ್ಚೆಯಾಗಿಲ್ಲ. ಆದರೆ ಅವರನ್ನು ಅರಸಿ ಬಂದ ಮಾನ್ಯತೆಗೇನೂ ಕೊರತೆ ಇಲ್ಲ. ಕನ್ನಡ, ತಮಿಳು ಭಾಷೆಗಳ ಪ್ರಮುಖ ಪತ್ರಿಕೆಗಳು ಅವರ ಸೃಜನಶೀಲ ಪ್ರತಿಭೆಯನ್ನು ಗುರುತಿಸಿವೆ. ಅವರ ‘ಬೀಸು’ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿಯ ಪುರಸ್ಕಾರ ದೊರತಿದೆ. ತಮಿಳುನಾಡು ಸರಕಾರ ಕುರುಳ್ ಪೀಠಂ ಪ್ರಶಸ್ತಿಯನ್ನಿತ್ತು ಅವರನ್ನು ಗೌರವಿಸಿದೆ. ಅವರು ಕನ್ನಡಕ್ಕೆ ಅನುವಾದಿಸಿರುವ ತಮಿಳಿನ ಖ್ಯಾತ ಕತೆಗಾರ ಅಶೋಕಮಿತ್ರನ್ ಅವರ ‘ಹದಿನೆಂಟನೆ ಅಕ್ಷರೇಖೆ’ಕೃತಿಗೆ ಅತ್ಯುತ್ತಮ ಭಾಷಾಂತರ ಪ್ರಶಸ್ತಿ ಲಭಿಸಿದೆ. ದಕ್ಷಿಣ ಭಾಷಾ ಪುಸ್ತಕ ಸಂಸ್ಥೆ ಮತ್ತು ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಭಾಜನಾರಾಗಿದ್ದ ಶೇಷನಾರಾಯಣರ ನಿಧನ ಒಂದೆರಡು ಸೆಂಟಿಮೀಟರ್ ಸಣ್ಣ ಸುದ್ದಿಗಷ್ಟೇ ಸೀಮಿತ ವಾದದ್ದು ವಿಷಾದಕರ.

Writer - ಜಿ.ಎನ್. ರಂಗನಾಥ ರಾವ್

contributor

Editor - ಜಿ.ಎನ್. ರಂಗನಾಥ ರಾವ್

contributor

Similar News