ಆ್ಯಂಟಿಗುವಾ: ಭಾರತದ ಬಿಗಿ ಹಿಡಿತದಲ್ಲಿ ಮೊದಲ ಟೆಸ್ಟ್

Update: 2019-08-25 03:43 GMT

ಆ್ಯಂಟಿಗುವಾ: ಅಜಿಂಕ್ಯ ರಹಾನೆ ಹಾಗೂ ನಾಯಕ ವಿರಾಟ್ ಕೊಹ್ಲಿಯವರ ಭರ್ಜರಿ ಅರ್ಧಶತಕಗಳ ನೆರವಿನೊಂದಿಗೆ ಭಾರತ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಬಿಗಿಹಿಡಿತ ಸಾಧಿಸಿದೆ.

ಮೂರನೇ ದಿನದ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿದ್ದು, ಒಟ್ಟಾರೆ 260 ರನ್‌ಗಳ ಮುನ್ನಡೆಯಲ್ಲಿದೆ. ಮೊದಲ ಇನಿಂಗ್ಸ್‌ನಲ್ಲಿ 81 ರನ್ ಗಳಿಸಿದ್ದ ಅಜಿಂಕ್ಯ ರಹಾನೆ (ನಾಟೌಟ್ 53) ಹಾಗೂ ನಾಯಕ ವಿರಾಟ್ ಕೊಹ್ಲಿ (ನಾಟೌಟ್ 51) ಮೂರನೇ ದಿನದ ಅಂತ್ಯಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. 17 ರನ್‌ಗಳಾಗಿದ್ದಾಗ ಕೆಮರ್ ರೂಚ್ ಬೌಲಿಂಗ್‌ನಲ್ಲಿ ಜಾನ್ ಕ್ಯಾಂಪೆಲ್ ಅವರಿಂದ ಜೀವದಾನ ಪಡೆದ ರೆಹಾನೆ ವೃತ್ತಿಜೀವನದ 19ನೇ ಅರ್ಧಶತಕ ಗಳಿಸಿದರು. ಮುರಿಯದ ನಾಲ್ಕನೇ ವಿಕೆಟ್‌ಗೆ ರೆಹಾನೆ- ಕೊಹ್ಲಿ ಜೋಡಿ 41.4 ಓವರ್‌ಗಳಲ್ಲಿ 104 ರನ್ ಗಳಿಸಿದೆ.

ಆರಂಭಿಕ ಆಟಗಾರ ಮಾಯಾಂಕ್ ಅಗರ್‌ವಾಲ್ (16) 14ನೇ ಓವರ್‌ನಲ್ಲಿ ಚೇಸ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆದರೆ ಟಿವಿ ರಿಪ್ಲೇಗಳಲ್ಲಿ ಚೆಂಡು ಲೆಗ್‌ಸ್ಟಂಪ್‌ನಾಚೆಗೆ ಇದ್ದುದು ಕಂಡುಬಂತು. ಬ್ಯಾಟ್ಸ್‌ಮನ್ ರಿಪ್ಲೇ ಕೇಳದ ಕಾರಣ ಔಟ್ ಆಗಬೇಕಾಯಿತು. ಬಳಿಕ ಕೆ.ಎಲ್.ರಾಹುಲ್ (38) ಮತ್ತು ಚೇತೇಶ್ವರ ಪೂಜಾರ (25) ಎರಡನೇ ವಿಕೆಟ್‌ಗೆ 43 ರನ್ ಸೇರಿಸಿದರು. ರಾಹುಲ್ ಸ್ವೀಪ್ ಮಾಡುವ ಯತ್ನದಲ್ಲಿ ಚೇಸ್‌ಗೆ ವಿಕೆಟ್ ಒಪ್ಪಿಸಿದರೆ, ಪೂಜಾರಾ ಅವರ ವಿಕೆಟನ್ನು ಮರು ಓವರ್‌ನಲ್ಲೇ ರೋಚ್ ಕಬಳಿಸಿ ಭಾರತ 81 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು.

ಇದಕ್ಕೂ ಮುನ್ನ ವೆಸ್ಟ್‌ಇಂಡೀಸ್ ತಂಡ 74.2 ಓವರ್‌ಗಳಲ್ಲಿ 222 ರನ್‌ಗೆ ಆಲೌಟ್ ಆಗಿ ಭಾರತ 75 ರನ್‌ಗಳ ಮುನ್ನಡೆ ಪಡೆಯಿತು. ಇಶಾಂತ್ ಶರ್ಮಾ (43ಕ್ಕೆ 5) ಮೊಹ್ಮದ್ ಶಮಿ (48ಕ್ಕೆ 2) ಮತ್ತು ರವೀಂದ್ರ ಜಡೇಜಾ (2/64) ಬೌಲಿಂಗ್‌ನಲ್ಲಿ ಮಿಂಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News