ಮುಳುಗದಂತೆ ಕಾಪಾಡಿದ ಮಾನವೀಯ ಕೈಗಳು

Update: 2019-08-25 08:45 GMT

ನೆರೆ ಪರಿಹಾರ ಕೇಂದ್ರಗಳಲ್ಲಿ ವಿತರಣೆ ಮಾಡಲಿಕ್ಕಾಗಿ ಅವಶ್ಯಕ ವಸ್ತುಗಳನ್ನು ಪುರುಷರ ಹಾಗೂ ಮಹಿಳೆಯರ ಆ ತಂಡ ಸಂಗ್ರಹಿಸುತ್ತಿತ್ತು. ಆಗ ಮಧ್ಯವಯಸ್ಕನೊಬ್ಬ ಅವರಿಗೆ ಬಟ್ಟೆಗಳು ಬೇಕೆ? ಎಂದು ಕೇಳಿದ. ಅವರು ಹೌದು ಎಂದಾಗ, ಆತ ಅವರನ್ನು ಕರೆದುಕೊಂಡು ಹೋಗಿ ತನ್ನ ಅಂಗಡಿಯ ಶಟರ್‌ಗಳನ್ನು ತೆರೆದ. ಆ ಬಳಿಕ ಅವರು ಕಂಡದ್ದನ್ನು ಅವರು ನಂಬದಾದರು. ನೌಶಾದ್ ಎಂಬ ಹೆಸರಿನ ಆತ ನಾಲ್ಕು ದೊಡ್ಡ ಚೀಲಗಳಲ್ಲಿ, ಮಾರಲು ಇಟ್ಟಿದ್ದ ಬಟ್ಟೆಗಳನ್ನು ತುಂಬಲಾರಂಭಿಸಿದ. ಅವನ ಅಂಗಡಿಗೆ ನಷ್ಟವಾಗಲಾರದೆ? ಎಂದು ಅವರು ಕೇಳಿದಾಗ, ‘ಇಲ್ಲ’ ಎಂದ ನೌಶಾದ್ ತನಗೆ ದೇವರಿಂದ ಪ್ರತಿಫಲ ಸಿಗುತ್ತದೆ; ಅದೇ ತನಗೆ ದೊಡ್ಡ ಲಾಭ ಎಂದು ಹೇಳಿದ. ಆತ ನೆರೆ ಸಂತ್ರಸ್ತರಿಗೆ ನೀಡಿದ ಪ್ರೀತಿಯ ಆ ಕೊಡುಗೆಯಿಂದಾಗಿ ದೇಶಾದ್ಯಂತ ಆತ ಪ್ರಶಂಸೆಗೆ ಪಾತ್ರನಾದ.

ಕೇರಳ ರಾಜ್ಯದ ಹಲವಾರು ಭಾಗಗಳಲ್ಲಿ ಇಂತಹ ಪ್ರೀತಿಯ ಕೊಡುಗೆಗಳು ಹರಿದು ಬಂದಿವೆ. 2018ರಲ್ಲಿ ಪ್ರವಾಹ ಬಂದಾಗ ಮಲಬಾರ್ ಭಾಗದ ಜನರು ನೆರೆಪೀಡಿತ ದಕ್ಷಿಣ ಜಿಲ್ಲೆಗಳಿಗೆ ಧಾವಿಸಿ ನೆರೆಪೀಡಿತರ ಪ್ರಾಣ ಉಳಿಸಿ ಅಭೂತ ಪೂರ್ವ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದರು. ಈಗ ಮಲಬಾರ್ ಪ್ರದೇಶದಲ್ಲಿ ಹೆಚ್ಚಿನ ನೆರೆಹಾನಿಯಾಗಿರುವಾಗ, ಕೇರಳ ದಕ್ಷಿಣ ಭಾಗದ ಜನರು ಮಲಬಾರ್ ನೆರೆ ಸಂತ್ರಸ್ತರ ನೆರವಿಗೆ ಧಾವಿಸುತ್ತಿದ್ದಾರೆ. ಮಲಬಾರ್‌ನ ಕೆಲವು ಹೊಟೇಲ್‌ಗಳು ಜನರಿಗೆ ಉಚಿತವಾಗಿ ಆಹಾರ ನೀಡುತ್ತಿವೆ. ನೆರೆ ಪರಿಹಾರ ಕಾರ್ಯಕ್ಕಾಗಿ ಬಂದವರಿಗೆ ಹೊಟೇಲ್‌ಗಳು ನೀಡುತ್ತಿರುವ ವಿಶೇಷ ಸವಲತ್ತು ಇದು.

ಕಣ್ಣೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ನೆರೆಯಿಂದಾಗಿ ಅಲ್ಲಿಯ ಮಸೀದಿ ನಾಶವಾಯಿತು. ಪರಿಣಾಮವಾಗಿ ಅಲ್ಲಿಯ ಮುಸ್ಲಿಮರಿಗೆ ಈದ್ ನಮಾಜ್ ಮಾಡಲು ಸ್ಥಳವಿಲ್ಲವಾಯಿತು. ಆಗ ಅಲ್ಲಿಯ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಮ್ ತಮ್ಮ ಕಾಂಪೌಡ್‌ನಲ್ಲಿದ್ದ ಸಭಾಭವನದಲ್ಲಿ ಮುಸ್ಲಿಮರಿಗೆ ಈದ್ ಪ್ರಾರ್ಥನೆ ನಡೆಸಲು ಅವಕಾಶ ಮಾಡಿಕೊಟ್ಟಿತು.

ಕಣ್ಣೂರು ಜಿಲ್ಲೆಯಲ್ಲೇ, ಇನ್ನೊಂದು ಪ್ರಕರಣದಲ್ಲಿ, ಸೋಮವಾರ ತಮ್ಮ ಈದ್ ಪ್ರಾರ್ಥನೆ ಮುಗಿಸಿದ ಮುಸ್ಲಿಮರ ಒಂದು ತಂಡ, ನೆರೆಯಿಂದಾಗಿ ಕೆಸರು ಕೊಳೆ ತುಂಬಿದ್ದ ದೇವಸ್ಥಾನವನ್ನು ಶುಚಿಗೊಳಿಸಲು ಧಾವಿಸಿತು. ನಿಜ, ನೀರಿನ ಮಟ್ಟ ಏರಿದಾಗ ಅದು ದೇವಸ್ಥಾನವೋ ಅಥವಾ ಮಸೀದಿಯೋ ಎಂದು ಪ್ರವಾಹ ಯೋಚಿಸಲಿಲ್ಲ.

ಆಗಸ್ಟ್ 9ರ ರಾತ್ರಿ ತಿರುವನಂತಪುರದ ಮೇಯರ್ ವಿ.ಕೆ. ಪ್ರಶಾಂತ್ ನೆರೆ ಪರಿಹಾರ ಕೇಂದ್ರಗಳ ವಿವರಗಳನ್ನು ತನ್ನ ವೀಡಿಯೊ ಸಂದೇಶದಲ್ಲಿ ನೀಡಿದ್ದರು; ಇನ್ನಷ್ಟು ನೆರವು, ಪರಿಹಾರ ಸಾಮಗ್ರಿಗಳು ಬೇಕಾಗಿವೆ ಎಂದು ಹೇಳಿದ್ದರು. ಆ ಪರಿಹಾರ ಸಾಮಗ್ರಿ ಕೇಂದ್ರಗಳಿಗೆ ಎಲ್ಲಿಲ್ಲದ ನೆರವಿನ ಮಹಾಪೂರವೇ ಹರಿದು ಬಂತು. ಅವಶ್ಯಕ ಸಾಮಗ್ರಿಗಳನ್ನು ತುಂಬಿದ ಟ್ರಕ್‌ಗಳು ನೆರೆ ಪೀಡಿತ ಪ್ರದೇಶಗಳಿಗೆ ಹೊರಟವು. ಆಗಸ್ಟ್ 15ರ ವರೆಗೆ ನೆರೆ ಪೀಡಿತ ಮಲಬಾರ್ ಪ್ರದೇಶಗಳಿಗೆ ಒಟ್ಟು 52 ಟ್ರಕ್‌ಗಳನ್ನು ಕಳುಹಿಸಲಾಯಿತು. ಆಹಾರ, ಬಟ್ಟೆಗಳು ಹಾಗೂ ಕುಡಿಯುವ ನೀರಿನಿಂದ ಆರಂಭಿಸಿ ಹತ್ತಾರು ಅವಶ್ಯಕ ಸಾಮಗ್ರಿಗಳನ್ನು ಆ ಟ್ರಕ್‌ಗಳಲ್ಲಿ ಸಾಗಿಸಲಾಯಿತು.

ಕೇರಳದ ವಿವಿಧ ಭಾಗಗಳಲ್ಲಿ ತೆರೆಯಲಾದ 1,200ಕ್ಕೂ ಹೆಚ್ಚು ಪರಿಹಾರ ಶಿಬಿರಗಳಿಗೆ 2.2ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಯಿತು. ಹಲವಾರು ಮಂದಿಗೆ ಅವರ ಮಿತ್ರರು ಬಂಧುಗಳು ತಮ್ಮ ಮನೆಗಳಲ್ಲಿ ಆಶ್ರಯ ನೀಡಿದರು. ಇದು ಪ್ರೀತಿ ಮತ್ತು ಬಾಂಧವ್ಯದ ಸಂಕೇತವಾಯಿತು. ಗೆಳೆಯರ ತಂಡವೊಂದು ‘‘ನಮ್ಮ ಜತೆ ಉಳಿದುಕೊಳ್ಳಿ’’ (ಸ್ಟೇ ವಿದ್ ಅಸ್) ಅಭಿಯಾನ ಆರಂಭಿಸಿತು. ಆ ಮೂಲಕ ನೆರೆ ಪರಿಹಾರಕ್ಕೆ ಆ ತಂಡ ತನ್ನ ಕಾಣಿಕೆ ಸಲ್ಲಿಸಿತು. ತಮ್ಮ ಮನೆಗಳಲ್ಲಿ ನೆರೆ ಸಂತ್ರಸ್ತರಿಗೆ ಆಶ್ರಯ, ವಸತಿ ನೀಡುವ ಕುಟುಂಬಗಳನ್ನು ಸಂಪರ್ಕಿಸಿ ನೆರೆ ಪೀಡಿತರಿಗೆ ನೆರವು ನೀಡುವ ಒಂದು ಕೊಂಡಿಯಾಗಿ ತಂಡ ಕೆಲಸ ಮಾಡಿತು. ಮಳೆಯಿಂದಾಗಿ ಮನೆಗೆ ಹೋಗಲಾರದೆ ವಿಮಾನ ನಿಲ್ದಾಣದಲ್ಲೇ ಸಿಕ್ಕಿ ಹಾಕಿಕೊಂಡವರಿಗೆ ತಮ್ಮ ಮನೆಗಳಲ್ಲಿ ಆಶ್ರಯ ನೀಡುವುದಾಗಿ ಕಲ್ಲಿಕೋಟೆ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಕೆಲವು ಕುಟುಂಬಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ರವಾನಿಸಿದವು.

ಮಲಪುರಂ ಜಿಲ್ಲೆಯ ನೀಲಂಬೂರ್‌ನ ಕವಲಪ್ಪರದಲ್ಲಿ 12 ಅಡಿ ಆಳದ ಕೆಸರು ಮತ್ತು ಬಂಡೆಗಳ ಅಡಿಯಲ್ಲಿ ಹೂತು ಹೋಗಿರುವವರ ಮೃತದೇಹಗಳನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಯುತ್ತಿರುವಾಗಲೇ, ಸಮೀಪದ ಪೊತುಕಲ್‌ನ ಸಲಫಿ ಮಸೀದಿ ಅಲ್ಲಿ ಹೊರತೆಗೆಯಲಾದ ಶವಗಳ ಮರಣೋತ್ತರ ಪರೀಕ್ಷೆ ನಡೆಸಲು ಮಸೀದಿಯ ಸಮೀಪವೇ ಸ್ಥಳಾವಕಾಶ ಒದಗಿಸಲು ಮುಂದೆ ಬಂತು. ಮೃತ ಪಟ್ಟವರ ಧರ್ಮ ಅಥವಾ ಜಾತಿಯಾಗಲಿ ಅಥವಾ ಅಲ್ಲಿ ನಡೆಯಲಿರುವ ವೈದ್ಯಕೀಯ ಕ್ರಿಯೆಯ ಸ್ವರೂಪವಾಗಲಿ ಮಸೀದಿಯ ಆಡಳಿತಕ್ಕೆ ಮುಖ್ಯವಾಗಲೇ ಇಲ್ಲ. ಅದರ ಕಣ್ಮುಂದೆ ಇದ್ದದ್ದು ಮಾನವೀಯತೆಯ ಕಾಳಜಿ ಮಾತ್ರ. ಆ ಪ್ರಾಕೃತಿಕ ವಿಕೋಪಗಳಲ್ಲಿ, ಉಕ್ಕಿ ಬಂದ ಪ್ರವಾಹದಲ್ಲಿ ಜನರು ಸಾಯುತ್ತಿದ್ದಾಗ ಸಾವು ಅವರ ಧರ್ಮ ಯಾವುದೆಂದು ಕೇಳಲಿಲ್ಲ.

ಕಳೆದ ವರ್ಷ ನೆರೆ ಸಂತ್ರಸ್ತರ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದ ಸಂಘಟನೆಗಳು ಮತ್ತು ಪರಿಹಾರ ಕಾರ್ಯ ತಂಡಗಳು ಈ ವರ್ಷ ಕೂಡ ಅತ್ಯುತ್ತಮ ಸೇವೆ ಸಲ್ಲಿಸುತ್ತಿವೆ. ದಿ ಗ್ರೀನ್ ಪ್ಯಾಲಿಯೇಟಿವ್, ಹಲವಾರು ಮುಸ್ಲಿಂ ಸಂಘಟನೆಗಳು, ತಮ್ಮ ಯುವ ಹಾಗೂ ವಿದ್ಯಾರ್ಥಿ ಘಟಕಗಳೊಂದಿಗೆ ಕೆಲಸ ಮಾಡುತ್ತಿರುವ ರಾಜಕೀಯ ಪಕ್ಷಗಳು, ಶಾಲೆ ಹಾಗೂ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು, (ಎರ್ನಾಕುಲಂ ನಲ್ಲಿ ಮುಖ್ಯ ಕಚೇರಿ ಹೊಂದಿರುವ) ಅನ್‌ಪೊಡು ಹೊಚ್ಚಿ, (ಕಲ್ಲಿಕೋಟೆ ಕೇಂದ್ರವಾಗಿರುವ) ಕಂಪ್ಯಾಶನೇಟ್ ಕೇರಳಂ, (ಕಣ್ಣೂರಿನ) ಕೊಕೊರ್ತು ಕಣ್ಣೂರು ಇತ್ಯಾದಿ ಆ ಸಂಘಟನೆಗಳಲ್ಲಿ ಕೆಲವು ಸಂಘಟನೆಗಳಾಗಿದೆ. ಈದ್ ದಿನದಂದು ಹಲವಾರು ಸಂಘಟನೆಗಳು ಮತ್ತು ಸ್ಥಳೀಯ ತಂಡಗಳು ನೆರೆ ಸಂತ್ರಸ್ತರ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಅದ್ದೂರಿಯಾದ ಬಿರಿಯಾನಿ ಊಟದ ವ್ಯವಸ್ಥೆ ಮಾಡಿದ್ದವು. ಹಾಗೆಯೇ ಈದ್‌ಗಾಗಿ ವಿತರಿಸಲು ಉತ್ತಮ ಬಟ್ಟೆಗಳನ್ನು ಸಂಗ್ರಹಿಸಿ ವಿತರಣೆ ಮಾಡಿದವು. ಪ್ರೀತಿ ಮತ್ತು ಮಾನವೀಯತೆಯ ಮುಂದುವರಿಯುವಿಕೆಯ ಒಂದು ಸಂಕೇತವಾಗಿ ಪುನರ್ವಸತಿ ಪ್ರಾಜೆಕ್ಟ್‌ಗಳನ್ನು ಕೂಡ ಈಗ ಯೋಜಿಸಲಾಗುತ್ತಿದೆ.

Writer - ನಾಝಿಯಾ ಬಿ.

contributor

Editor - ನಾಝಿಯಾ ಬಿ.

contributor

Similar News