ಪಿಂಕ್ ಟ್ಯಾಕ್ಸ್ ಏಕೆ?

Update: 2019-08-25 11:45 GMT

ಗಂಡಸರು ಹೇರ್‌ಕಟ್ ಮಾಡಿಸಿಕೊಂಡರೆ 100 ರೂ. ಒಳಗೆ ಇರುತ್ತದೆ. ಅದೇ ಮಹಿಳೆಯರ ಹೇರ್‌ಕಟ್ ಆದರೆ 400ರಿಂದ 700ರೂ. ಇರುತ್ತದೆ. ಜಾಗ್ರತೆಯಿಂದ ಗಮನಿಸಿದರೆ ಇಬ್ಬರಲ್ಲಿ ಗಂಡಸರ ಹೇರ್‌ಕಟ್‌ಗೆ ಹೆಚ್ಚಿನ ಸಮಯ ಹಿಡಿಯುತ್ತದೆ. ಹಾಗಿರುವಾಗ ಏಕೆ ಹೀಗೆ? ಇದಷ್ಟೇ ಅಲ್ಲ.. ಒಂದೇ ರೀತಿಯಾಗಿರುವ ಸೇವೆಗಳಲ್ಲಿ, ವಸ್ತುಗಳ ಬೆಲೆಗಳಲ್ಲಿ ಸಹ ಭಾರೀ ವ್ಯತ್ಯಾಸ ಕಾಣಿಸುತ್ತದೆ. ಉದಾಹರಣೆಗೆ ರೇಜರ್ ಡಿಯೊಡರೆಂಟ್ ಕಾಸ್ಮೆಟಿಕ್ಸ್... ಹೀಗೆ ಯಾವುದನ್ನಾದರೂ ತೆಗೆದುಕೊಳ್ಳಿ. ಇಬ್ಬರಿಗೆ ಸಂಬಂಧಿಸಿದ ದರಗಳಲ್ಲಿ ಎಷ್ಟು ಇಲ್ಲ ಎಂದರೂ ಶೇ.10ರಿಂದ 20ರಷ್ಟು ವ್ಯತ್ಯಾಸ ಕಾಣಿಸುತ್ತದೆ. ಇದನ್ನೇ ‘ವಿಂಕ್ ಟ್ಯಾಕ್ಸ್’ ಅನ್ನುತ್ತಿದ್ದಾರೆ ಮಾರ್ಕೆಟ್ ತಜ್ಞರು. ‘ಮಹಿಳೆ’ ಎಂಬ ಒಂದು ಟ್ಯಾಗ್‌ನೊಂದಿಗೆ ಅವರ ಪರ್ಸ್‌ಗಳನ್ನು ಖಾಲಿ ಮಾಡುತ್ತಿದ್ದಾರೆ. ಇಷ್ಟಕ್ಕೂ ಈ ‘ಪಿಂಕ್ ಟ್ಯಾಕ್ಸ್’ನ್ನು ಮಹಿಳೆಯರು ಏಕೆ ಸಲ್ಲಿಸಬೇಕೆನ್ನುವುದು ಇತ್ತೀಚೆಗೆ ಚರ್ಚನೀಯ ಅಂಶವಾಗಿದೆ.

‘ರೇಜರ್’ ಎನ್ನುವುದು ಗಂಡಸರಿಗಾದರೂ, ಮಹಿಳೆಯರಿಗಾದರೂ ಒಂದೇ ರೀತಿ ಕಾಣಿಸುತ್ತದೆ. ಹಾಗಿರುವಾಗ ಮಹಿಳೆಯರ ರೇಜರ್‌ಗಳನ್ನು ಇಮ್ಮಡಿ ಬೆಲೆಗೆ ಏಕೆ ಮಾರುತ್ತಿದ್ದಾರೆ? ಅದು ಹೇರ್‌ಕಟ್ ಇರಬಹುದು, ಹೆಡ್ ಮಸಾಜ್ ಇರಬಹುದು, ಹೇರ್ ಕೇರ್ ಉತ್ಪತ್ತಿಗಳು ಇರಬಹುದು.. ಮಹಿಳೆಯರು ಎನ್ನುತ್ತಲೇ ಮಾರ್ಕೆಟ್‌ನಲ್ಲಿ ಶೇ. 48ರಷ್ಟು ಹೆಚ್ಚು ಬೆಲೆ ಇರುತ್ತದೆ ಎಂದು ಇತ್ತೀಚಿನ ಒಂದು ಕನ್‌ಸ್ಯೂಮರ್ ಎಫೇರ್ಸ್‌ ಡಿಪಾರ್ಟ್‌ಮೆಂಟ್ ಮಾಡಿದ ಸಂಶೋಧನೆಯಲ್ಲಿ ವ್ಯಕ್ತಗೊಂಡಿದೆ. ಹೊರಗೆ ಕಾಣಿಸದ ಯಾರೂ ಹಚ್ಚಿಕೊಳ್ಳದ ಈ ‘ಪಿಂಕ್ ಟ್ಯಾಕ್ಸ್’ ರೂಪದಲ್ಲಿ ಮಹಿಳೆಯರು ತುಂಬಾ ನಷ್ಟ ಹೊಂದುತ್ತಿದ್ದಾರೆ. ‘‘ಇದು ನಿಜವೇ, ನಾನೂ ನಮ್ಮವರು ಹೇರ್‌ಕಟ್‌ಗೋಸ್ಕರ ಸಲೂನ್‌ಗೆ ಹೋದರೆ, ನನ್ನ ಹೇರ್‌ಕಟ್ ಭುಜಗಳವರೆಗೆ ಮಾಡುತ್ತಾರೆ. ಅದು ಬೇಗನೆ ಮುಗಿಯುತ್ತದೆ. ನಮ್ಮವರ ಹೇರ್‌ಕಟ್‌ಗೆ ತುಂಬಾ ಸಮಯ ಹಿಡಿಯುತ್ತದೆ. ಏಕೆಂದರೆ ಸ್ಟ್ರೈಕ್ಸ್, ಗ್ರೇಡಿಯೇಶನ್, ಜೀರೋಕಟ್, ಲೈನ್‌ಕಟ್, ಫ್ರಂಟ್ ಬ್ರಶಪ್ ಅಂತ ತುಂಬಾ ಅಂಶಗಳಿರುತ್ತವೆ. ಆದರೂ ಸರಿ, ನನ್ನ ಹೇರ್‌ಕಟ್‌ಗೆ ಹೆಚ್ಚು ಹಣ ತೆಗೆದುಕೊಳ್ಳುತ್ತಾರೆ’’ ಎಂದು ಕಿರಣ್ ಮನ್ರಾಲ್ ಎಂಬ ಲೇಖಕಿ ದೂರುತ್ತಾರೆ.

‘ಜೆಂಡರ್’ ವಿಷಯಕ್ಕೆ ಬಂದರೆ ಪುರುಷರಿಗೆ ಸಮಾನವಾಗಿ ಮಹಿಳೆಯರು ಕೆಲಸ ಮಾಡ್ತಿದ್ದಾರೆ. ಅವರೊಂದಿಗೆ ಕೆಲವೆಡೆ ಸಮಾನ ವೇತನ ತೆಗೆದುಕೊಳ್ಳುತ್ತಿದ್ದಾರೆ. ಮತ್ತೆ ಕೆಲವು ಕಡೆ ಒಂದೇ ರೀತಿಯ ಕೆಲಸ ಮಾಡುತ್ತಿದ್ದರೂ ‘ಜೆಂಡರ್’ ಹೆಸರಿನಲ್ಲಿ ವೇತನಗಳಲ್ಲಿ (ಸುಮಾರು ಶೇ.16ರಿಂದ 30) ಅಂತರಗಳು ಇರುತ್ತವೆ. ಹಾಗಿರುವಾಗ ಮಾರ್ಕೆಟ್‌ನಲ್ಲಿ ಒಂದೇ ವಿಧವಾದ ಉತ್ಪತ್ತಿಗಳಿಗೆ, ಸೇವೆಗಳಿಗೆ ಮಹಿಳೆಯರಿಗೆ ‘ಪಿಂಕ್‌ಟ್ಯಾಕ್ಸ್’ ಏಕೆ ಹಾಕುತ್ತಿದ್ದಾರೆ ಎನ್ನುವುದು ಪ್ರಶ್ನೆ. ಮುಂಬೈ ಶಾಸನಸಭಾ ಸದಸ್ಯೆಯಾದ ಡಾ. ಭಾರತಿ ಲಾವೇಕರ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ‘‘ಮಾರ್ಕೆಟ್‌ನಲ್ಲಿ ಗಂಡಸರ ಉಡುಪುಗಳಿಗೆ ಹೋಲಿಸಿದರೆ ಮಹಿಳೆಯರ ಉಡುಪುಗಳು (ಶರ್ಟ್ಸ್, ಜೀನ್ಸ್ ಇತ್ಯಾದಿ) ಶೇ. 4ರಿಂದ ಶೇ.20ರಷ್ಟು ಹೆಚ್ಚಿನ ದರ ಇರುತ್ತವೆೆ. ವಾಚುಗಳು, ಬ್ಯಾಗುಗಳಂತಹ ಯಾಕ್ಸಸರೀಸ್ ಶೇ.7, ಪರ್ಸನಲ್ ಕೇರ್ ಉತ್ಪತ್ತಿಗಳು ಶೇ.13ರಷ್ಟು ಅಧಿಕ ದರಗಳಿಗೆ ವಿಕ್ರಯಿಸುತ್ತಿದ್ದಾರೆ’’ ಅನ್ನುತ್ತಿದ್ದಾರೆ ಆಕೆ. ಆದರೆ ಮಹಿಳೆಯರ ಉಡುಪುಗಳು, ಯಾಕ್ಸಸರೀಸ್ ವಿಷಯದಲ್ಲಿ ಮತ್ತಷ್ಟು ಡಿಟೇಲ್ ಆಗಿ ಕೆಲಸ ಮಾಡಬೇಕಾಗಿರುತ್ತದೆಯಾದ್ದರಿಂದ ಎಂಬ ಪ್ರತಿಕ್ರಿಯೆ ಮಾರ್ಕೆಟ್ ವರ್ಗಗಳಿಂದ ಕೇಳಿ ಬರುತ್ತಿದ್ದರೂ ಅದನ್ನು ನೆಪ ಮಾತ್ರ ಎಂದೇ ನೋಡುತ್ತಿದ್ದಾರೆ ತಜ್ಞರು. ಸಾಮಾನ್ಯವಾಗಿ ಮಹಿಳೆಯರಿಗೆ ಸೌಂದರ್ಯದ ಮೇಲೆ ಗೀಳು ಹೆಚ್ಚು. ಮೇಲಾಗಿ ಸಿದ್ಧರಾಗುವುದಕ್ಕೆ ಗಂಡಸರಿಗಿಂತ ಹೆಚ್ಚಿನ ಸಮಯ ತೆಗೆದು ಕೊಳ್ಳುತ್ತಾರೆ. ಹಾಗಾಗಿಯೇ ಅವರ ಮೈನಸ್ ಪಾಯಿಂಟನ್ನು ವ್ಯಾಪಾರಿಗಳು ತಮಗೆ ಪ್ಲಸ್ ಆಗಿ ಬದಲಿಸಿಕೊಳ್ಳುತ್ತಾ ಪಿಂಕ್ ಟ್ಯಾಕ್ಸ್ ಹಾಕುತ್ತಾರೆಂಬ ವಾದವೂ ಇದೆ. ಸೌಂದರ್ಯವತಿಯಲ್ಲದ ಅಲಂಕಾರ ಪ್ರಿಯಳಲ್ಲದ ಮಡದಿ, ಗೆಳತಿಯನ್ನು ಪುರುಷರು ಹೇಗೆ ಕಾಣುತ್ತಾರೆಂಬುದು ಇವರಿಗೆ ತಿಳಿಯದೇ? ಇಷ್ಟು ವರ್ಷಗಳಿಂದ ಯಾರೂ ಅಷ್ಟಾಗಿ ಹಚ್ಚಿಕೊಳ್ಳದ ಪಿಂಕ್ ಟ್ಯಾಕ್ಸ್‌ನತ್ತ ಎಲ್ಲರಲ್ಲೂ ಅರಿವು ಮೂಡಿಸುವುದೇ ಇದಕ್ಕೆ ಸರಿಯಾದ ಪರಿಹಾರ ಎಂದು ಮಾರ್ಕೆಟ್ ತಜ್ಞರು ಹೇಳುತ್ತಾರೆ. ಅಂಥ ಬ್ರಾಂಡ್‌ಗಳ ಗುಟ್ಟುನ್ನು ಸೋಷಿಯಲ್ ಮೀಡಿಯಾಗಳ ಮೂಲಕ ಬಟಾ ಬಯಲು ಮಾಡುವ ಕೆಲಸ ಆರಂಭವಾಗಿದೆ. ವಿಮೆನ್ ಟ್ಯಾಗ್‌ನೊಂದಿಗೆ ಹೆಚ್ಚಿನ ಬೆಲೆಗೆ ಮಾರುವುದರಿಂದ ಮಹಿಳೆಗೆ ನಷ್ಟವಾಗುತ್ತದೆ. ವಿದೇಶಗಳಲ್ಲಿ ಈಗಾಗಲೇ ಪಿಂಕ್ ಟ್ಯಾಕ್ಸ್‌ಗೆ ವಿರುದ್ಧವಾಗಿ ವಿವಿಧ ರೀತಿಯ ಆಂದೋಲನಗಳು ನಿರ್ವಹಿಸುತ್ತಿದ್ದಾರೆ. ಭಾರತೀಯರೂ ಆ ದಿಕ್ಕಿನಲ್ಲಿ ವೇಗವಾಗಿ ಹೆಜ್ಜೆ ಇಡಬೇಕಾಗಿದೆ. (ವಿವಿಧ ಮೂಲಗಳಿಂದ)

Writer - ಕಸ್ತೂರಿ ತುಮಕೂರು

contributor

Editor - ಕಸ್ತೂರಿ ತುಮಕೂರು

contributor

Similar News