ನಂಬಿಕೆ

Update: 2019-08-25 12:52 GMT

ಆಗ ಉಮೇಶನಿಗೆ ಇನ್ನೂ ನಾಲ್ಕು-ಐದು ವರ್ಷ ವಯಸ್ಸು ಇದ್ದಿರಬೇಕು ಅನಿಸುತ್ತೆ. ಆ ಬಾಲ್ಯದ ಮಧುರ ಕ್ಷಣಗಳು ಈಗ ಅಸ್ಪಷ್ಟವಾಗಿದೆ. ಚಂದ್ರು ತನ್ನ ಮನೆಯ ಮುಂದೆ ಇದ್ದ ಬಾವಿಯಿಂದ ತಾಮ್ರದ ಕೊಡದಿಂದ ನೀರು ಎತ್ತಿ ಉಮೇಶನ ತಲೆಯ ಮೇಲೆ ತಪ-ತಪ ಅಂತ ಸುರಿಯುತ್ತಿದ್ದ. ಉಮೇಶನಿಗೆ ತುಂಬ ಚಳಿ ಅನಿಸಿದರೂ ಏನೂ ಹೇಳುವ ಸ್ಥಿತಿಯಲ್ಲಿ ಆಗ ಅವನು ಇರಲಿಲ್ಲ. ಆ ತಣ್ಣೀರು ತಲೆಯ ಮೇಲೆ ಬಿದ್ದ ಕೂಡಲೇ ಆದೇ ಏನೋ ಉಸಿರು ಕಟ್ಟಿದ ಅನುಭವ ಉಮೇಶನಿಗೆ. ಚಂದ್ರು ಸ್ನಾನ ಮುಗಿದ ಕೂಡಲೇ ದೇವರ ಕೋಣೆಗೆ ಅವನನ್ನು ಕರೆದುಕೊಂಡು ಹೋಗಿ ದೇವರಲ್ಲಿ ಒಳ್ಳೆಯ ವಿದ್ಯಾ-ಬುದ್ಧಿ ಕೊಡಿ ಅಂತ ಬೇಡಿಕೊಳ್ಳಲು ಹೇಳುತ್ತಿದ್ದ. ಚಂದ್ರು ಕೂಡ ಎಂದಿನಂತೆ ದೇವರಲ್ಲಿ ಏನೋ ಮೌನವಾಗಿ ಕೇಳುತ್ತಿದ್ದನು. ಚಂದ್ರುವಿನ ಅಚ್ಚು-ಮೆಚ್ಚಿನ ದೇವರು ಅಂದ್ರೆ ಗಣೇಶ. ಗಣೇಶ ಕೂಡ ಇವನು ಕೇಳಿದನ್ನೆಲ್ಲಾ ಕೊಟ್ಟು ಬಿಡುತ್ತಿದ್ದ. ಸಂಜೆ ಹೊತ್ತು ಉಮೇಶ ಅರ್ಧ ಗಂಟೆ ದೇವರ ಭಜನೆ ಮಾಡುತ್ತಿದ್ದ. ಅದರೆ .....ಈಗ ಅದೆನ್ನೆಲ್ಲಾ ಮಾಡುತ್ತಿಲ್ಲ..... ! ಉಮೇಶನ ಅಮ್ಮ ಸಹ ದೊಡ್ಡ ದೈವ ಭಕ್ತೆ. ಆಕೆಯೇ..... ಕೌಸಲ್ಯ. ಈಕೆ ಮದುವೆಯಾಗಿ ಮೊದಲ ಸಲ ಈ ಮನೆಗೆ ಬಂದಾಗ ವಿಪರೀತ ಜ್ವರ ಬಂದಿತಂತೆ, ಆಗ ಕೌಸಲ್ಯ ಚಂದ್ರನ ಹತ್ತಿರ, ‘ ರೀ .....ಇಲ್ಲಿ ಯಾರಾದ್ರು ತಾಯತ ಕಟ್ಟುವವರಿದ್ರೆ ಸ್ವಲ್ಪ ವಿಚಾರಿಸಿ . ಒಂದು ತಾಯತ ತನ್ನಿ ... ಅದನ್ನು ಕಟ್ಟಿದ್ರೆ ಎಲ್ಲಾ ಸರಿ ಹೋಗುತ್ತೆ’ ಎಂದಳಂತೆ.... !

ಆಗ, ಚಂದ್ರು ತನ್ನ ಅಂಗಡಿಯಲ್ಲಿ ಇದ್ದ ಒಂದು ತಾಯತವನ್ನು ಪೇಪರಿನಲ್ಲಿ ಇಟ್ಟು, ಅದರ ಜೊತೆ ಸ್ವಲ್ಪ ಕುಂಕುಮ, ಒಂದು ಕಪ್ಪು ದಾರ ಇದ್ದ ಕವರನ್ನು ಕೌಸಲ್ಯಳಿಗೆ ತಂದು ಕೊಟ್ಟು ಅದನ್ನು ಸ್ನಾನ ಮಾಡಿ ಕಟ್ಟಿಕೋ ಎಂದ. ಮಾರನೇ ದಿನ,

‘‘ಏನೇ..... ಹೇಗಿದೆ ಜ್ವರ?’’ ಎಂದ ಚಂದ್ರು.

‘‘ಹುಂ ..... ಪರವಾಗಿಲ್ಲಾ ..... ತುಂಬಾ ವಾಸಿ ಎನಿಸುತ್ತಿದೆ’’ ‘‘ಆಯ್ಯೋ ..... ಮರಾಯ್ತಿ ..... ಅದು ನಾನೇ ... ತಯಾರಿಸಿ ನಮ್ಮ ಅಂಗಡಿಯಿಂದ ತಂದದ್ದು. ನೋಡು... ನೀನು ಎಷ್ಟು ಭ್ರಮೆಯಲ್ಲಿ ಜೀವನ ನಡೆಸುತ್ತಿದ್ದಿ ... ಮಾಟ-ಮಂತ್ರ ಅಂತ ಯಾವುದನ್ನು ನಂಬಲೇ ... ಬೇಡ... ಎಲ್ಲಾ ಸುಳ್ಳು... !’’ ಅಂದ.

ಕೌಸಲ್ಯ ಒಲ್ಲದ ಮನಸ್ಸಿನಿಂದ ಗಂಡನ ವಾದವನ್ನು ಒಪ್ಪಿದಳು.

ಕೌಸಲ್ಯ ಬಡ ಕೃಷಿಕ ಕುಂಟುಬದಿಂದ ಬಂದವಳು, ಆಕೆಗೆ ದನ-ಕರು ಸಾಕುವುದೆಂದರೆ ತುಂಬಾ ಇಷ್ಟ. ದನ-ಕರುಗಳನ್ನು ತನ್ನ ಸ್ವಂತ ಮಕ್ಕಳಂತೆ ಸಾಕುತ್ತಿದ್ದಳು. ಚಂದ್ರುವಿನ ಮನೆಗೆ ಬರುವ ಅತಿಥಿಗಳು ಮೊದಲು ಅವರ ದನದ ಕೊಟ್ಟಿಗೆಯ ಕಡೆಗೆ ಕಣ್ಣು ಹಾಯಿಸಿ ಬರುವುದು ಸರ್ವೇಸಾಮಾನ್ಯ ವಿಷಯ. ಒಂದು ದಿನ ಇದ್ದಕ್ಕಿದ್ದಂತೆ ಕೊಟ್ಟಿಗೆಯಲ್ಲಿ ಇದ್ದ ದನಕ್ಕೆ ಹುಷಾರು ತಪ್ಪಿ ಎರಡೇ ದಿನದಲ್ಲಿ ಸತ್ತು ಹೋಯಿತು. ಈ ಘಟನೆಯಿಂದ ಕೌಸಲ್ಯ ಹೊರಬರಲು ತುಂಬಾ ಸಮಯ ಬೇಕಾಯಿತು. ಆಗ ಅಕ್ಕ -ಪಕ್ಕದ ಮನೆಯವರು ಬಂದು, ‘ಇದು ಯಾವುದೋ ..... ರಾಹುವಿನ ಉಪದ್ರ ...ಬೇಗ ಕೇಶವಮೂರ್ತಿಯ ಹತ್ತಿರ ಹೋಗಿ ತಾಯತ ತನ್ನಿ’ ಅಂದರು.

ಆದರೆ, ಇದನ್ನೆಲ್ಲಾ ಚಂದ್ರು ಒಪ್ಪಿಕೊಳ್ಳಲು ತಯಾರಿಲ್ಲ. ಆದರೂ... ಈ ದುಃಖದ ಸಮಯದಲ್ಲಿ ಪತ್ನಿಗೆ ನೋವಾಗಬಾರದು ಎಂದು ತಿಳಿದು ಅತೀ ಬೇಸರದಿಂದ ಒಲ್ಲದ ಮನಸ್ಸಿನಿಂದ ಕೇಶವ ಮೂರ್ತಿ ಮನೆಯ ಅಂಗಳದಲ್ಲಿ ಬಂದು ನಿಂತ. ಅದು ಬೆಳಗ್ಗೆ ಸುಮಾರು ಆರೂವರೆ ಸಮಯ... ಆಗಲೇ... ಅಲ್ಲಿ ಹತ್ತು ಇಪ್ಪತ್ತು ಜನ ಸೇರಿದ್ದರು. ಒಬ್ಬರ ಮುಖದಲ್ಲಿ ಒಂದೊಂದು ಸಮಸ್ಯೆಗಳು, ಆ ಸಮಸ್ಯೆಗಳಿಗೆ ಇಲ್ಲಿಯೇ ಪರಿಹಾರ ಪಡೆಯುತ್ತೇನೆ ಎಂದು ಹೇಳುತ್ತಿರುವ ಆ ಕಣ್ಣುಗಳು. ಅಲ್ಲಿ ನೆರೆದಿದ್ದ ಜನರು ತಮ್ಮ ಸರದಿ ಬಂದ ಕೂಡಲೇ ಕೇಶವ ಮೂರ್ತಿಗಳ ಕೊಠಡಿಯ ಒಳಕ್ಕೆ ಹೋಗುತ್ತಿದ್ದರು. ಅವರನ್ನೆಲ್ಲ ಕಳುಹಿಸಲು ಒಬ್ಬ ದಢೂತಿ ವ್ಯಕ್ತಿ ಇದ್ದ ಅವನ ಹೆಸರು ಲಿಂಗ ಅಂತ. ಚಂದ್ರುವಿನ ಸರದಿ ಬರಲು ಇನ್ನೂ ಇಪ್ಪತ್ತು ನಿಮಿಷವಾಗಬಹುದು ಎಂದು ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬ ಹೇಳಿದ. ಚಂದ್ರು ಮೆಲ್ಲನೆ ಲಿಂಗನನ್ನು ಕರೆದು,

‘‘ಏನ್ನಪ್ಪಾ ..... ಯಾವಾಗಲೂ ಜನ ಇಷ್ಟು ಬೇಗ ಬರ್ತಾರ?’’ ಅಂದ.

‘‘ಯಾವಾಗಲೂ ಇಲ್ಲ.....ಕೆಲವೊಮ್ಮೇ ಅಷ್ಟೇ.....’’

‘‘ಮತ್ತೆ..... ಇವತ್ತು.....ಇಷ್ಟು ಜನ ಇದ್ದರಲ್ಲಾ ... ?’’

‘‘ಹೋ.....ಅದ... ಎರಡು ದಿನ ನಮ್ಮ ಸ್ವಾಮಿಗಳು ಊರಲ್ಲಿ ಇರುವುದಿಲ್ಲ. ಅವರು ಇವತ್ತು ಸಂಜೆ ಕೇರಳಕ್ಕೆ ಹೋಗುತ್ತಾರೆ. ಬರುವಾಗ ಎರಡು ದಿನ ಆಗುತ್ತೇ ...ಅದಕ್ಕೆ ಇಷ್ಟು ಜನ .....!’’ ಅಂದ ಲಿಂಗ.

ಈಗ ಚಂದ್ರುವಿನ ಸರದಿ ಬಂತು. ಚಂದ್ರು ಭಯದಿಂದಲ್ಲೇ ಮೆಲ್ಲನೇ ಕೇಶವ ಮೂರ್ತಿಗಳ ಕೊಠಡಿಗೆ ನುಗ್ಗಿದ. ಅಲ್ಲಿ .. ಕೆಂಪು ಪಂಚೆಯನ್ನು ತೊಟ್ಟಿದ್ದ, ಎದೆಯ ಮೇಲೆ ಕಪ್ಪಗಿನ ರೋಮ, ತಲೆಯ ಮೇಲಿಂದ ಉದ್ದನೆಯ ಕೂದಲನ್ನು ಹಿಂದೆ ಚಾಚಿದ್ದ, ಹಣೆಯ ಮೇಲೆ ಬಿಳಿಯ ಅಡ್ಡ ನಾಮ ಮತ್ತು ಅದರ ಮಧ್ಯ ಭಾಗದಲ್ಲಿ ಕಡು ಕೆಂಪಗಿನ ಕುಂಕುಮವನ್ನು ಹಾಕಿರುವ ವ್ಯಕ್ತಿಯನ್ನು ನೋಡಿ ಸ್ವಲ್ಪ ಗಾಬಾರಿಯಾಯಿತು ಚಂದ್ರುವಿಗೆ.

‘‘ಬನ್ನಿ ...ಬನ್ನಿ.....ಕುಳಿತುಕೊಳ್ಳಿ...’’ ಎಂದರು ಕೇಶವಮೂರ್ತಿಗಳು.

‘‘ಹಾ...ಎಲ್ಲಿಂದ ಬಂದಿದ್ದೀರಿ.. ?’’

‘‘ನಾನು...ಅಲ್ಲಿ ಸೇತುವೆ ಇದೆಯಲ್ಲಾ ... ಅದರ ಪಕ್ಕನೇ .. ನಮ್ಮ ಮನೆ ಇರುವುದು’’

‘‘ಎನೂ.....ಸಮಸ್ಯೆ..?’’

‘‘ಎನ್ನಿಲ್ಲಾ ...ಸ್ವಾಮಿ ...ಇತ್ತೀಚೆಗೆ ನಮ್ಮ ದನ ಸತ್ತು ಹೋಯಿತು.. ಅದಕ್ಕೆ ಏನು ಕಾರಣ ಅಂತ ತಿಳಿದುಕೊಳ್ಳಬೇಕಿತ್ತು’’

ಕೇಶವ ಮೂರ್ತಿಗಳು ಕವಡೆಗಳನ್ನು ಎರಡು ಸಲ ನೆಲದ ಮೇಲೆ ಹಾಕಿ, ಮನಸ್ಸಿನಲ್ಲಿ ಏನೋ...ಅಂದುಕೊಂಡರು.

‘‘ಹೌದು ...ಸಮಸ್ಯೆ ಇದೆ ...’’

‘‘ದನ ಸಾಯುವಾಗ ಅದರ ಬಾಯಲ್ಲಿ ರಕ್ತ ಬಂದಿತ್ತಾ ...?’’

‘‘ಹೌದು ಸ್ವಾಮಿ ...’’

‘‘ಹಾಗಾದರೆ... ಖಂಡಿತಾ .....ಅದು ರಾಹುವಿನ ಉಪದ್ರ..... ಸಂಶಯವೇ ಬೇಡ’’

‘‘ಸ್ವಾಮಿ ...ಅದು ಏನಾಯಿತು ಅಂದ್ರೆ.....ದನಕ್ಕೆ ಜ್ವರ ಬಂದಿತ್ತು. ಹುಲ್ಲು ತಿನ್ನುತ್ತಿರಲಿಲ್ಲ, ಅದಕ್ಕೆ ಪಶು ವೈದ್ಯರು ದನಕ್ಕೆ ಸೂಜಿ ಹಾಕುವಾಗ ನಮ್ಮ ಕೈ ತಪ್ಪಿ ದನ ನೆಲಕ್ಕೆ ಅಪ್ಪಳಿಸಿತ್ತು. ದನ ಗರ್ಭ ಧರಿಸಿದ್ದರಿಂದ ಹೊಟ್ಟೆ ಭಾಗಕ್ಕೆ ಹೆಚ್ಚು ಪೆಟ್ಟಾಗಿ ದನದ ಬಾಯಲ್ಲಿ ರಕ್ತ ಬಂತು’ ಎಂದು ಮರು ಉತ್ತರ ನೀಡಿದ ಚಂದ್ರು. ಇದರಿಂದ ಸ್ವಾಮಿಗಳು ಸ್ವಲ್ಪ ವಿಚಲಿತರಾದರು. ಈ ವ್ಯಕ್ತಿಗೆ ನನ್ನ ಮಾತಿನಲ್ಲಿ ನಂಬಿಕೆ ಇಲ್ಲ ಎನ್ನುವುದು ದೃಢೀಕರಿಸಿಕೊಂಡ ಕೇಶವಮೂರ್ತಿಗಳು,

‘‘ಪರವಾಗಿಲ್ಲಾ... ಇದಕ್ಕೆ ತಾಯತ ಎನೂ ಬೇಡ. ಮನೆ ಸುತ್ತ ಆರಶಿಣ ನೀರನ್ನು ಎರಚಿಬಿಡಿ...ಎಲ್ಲ ಸರಿಹೋಗುತ್ತೆ’’ ಎಂದು ಹೇಳಿ ಚಂದ್ರುನನ್ನು ಅಲ್ಲಿಂದ ಸಾಗಹಾಕಿದರು. ಚಂದ್ರು ಕೂಡ ಎಲ್ಲವನ್ನು ಸುಮ್ಮನೇ ಒಪ್ಪಿಕೊಳ್ಳುವ ವ್ಯಕ್ತಿಯಲ್ಲ, ಅರಶಿನ ನೀರು ಹಾಕುವುದು ವೈಜ್ಞಾನಿಕವಾಗಿ ಸರಿಯಾದ ವಿಚಾರ ಎಂದುಕೊಂಡು ಅಲ್ಲಿಂದ ಹೊರಟ. ಮನೆಗೆ ಬಂದ ಚಂದ್ರು, ಸ್ವಾಮಿಗಳು ಹೇಳಿದ ಹಾಗೆ ಮಾಡಿದ. ಇದನ್ನು ದೂರದಿಂದ ನೋಡುತ್ತಿದ್ದ ಕೌಸಲ್ಯ ಖುಷಿಯಿಂದ ಚಂದ್ರುವಿನ ಕಡೆ ಮುಗುಳ್ನಗೆ ಬೀರಿದಳು. ಕೆಲವೊಮ್ಮೆ ಹಾಗೆ ನಮ್ಮ ಜೀವನದಲ್ಲಿ ಹಲವು ಆಶ್ಚರ್ಯ ಘಟನೆಗಳು ನಡೆಯುತ್ತಿರುತ್ತದೆ ಅಲ್ಲವೇ..!

ಒಂದು ಸಲ ಚಂದ್ರುವಿನ ದೊಡ್ಡ ಮಗ ಉಮೇಶ ಹೈಸ್ಕೂಲ್ ಓದುತ್ತಿರುವಾಗ, ವಿಜ್ಞಾನ ಸಂಘದ ವತಿಯಿಂದ ಮಂಗಳೂರಿನ ವೈದ್ಯಕೀಯ ಕಾಲೇಜಿಗೆ ಪ್ರವಾಸ ಹೋಗಿದ್ದ. ಅಲ್ಲಿ ಹಲವು ಮೃತದೇಹಗಳನ್ನು ನೋಡಿದ ಉಮೇಶನಿಗೆ ಭಯದಿಂದ ಯಾವಾಗ ಮನೆ ಸೇರುತ್ತೇನೆ ಎಂದೆನಿಸಿತು. ಅಂದು ರಾತ್ರಿ, ಉಮೇಶನ ಮಲಗುವ ರೂಮಿನ ಸುತ್ತ ಮಧ್ಯ ರಾತ್ತಿ ಯಾರೋ.. ಗೆಜ್ಜೆ ಕಟ್ಟಿಕೊಂಡು ಸುತ್ತಾಡಿ ಹಾಗೆ, ಯಾರೋ...ಕರೆದ ಹಾಗೇ ಅನಿಸಿತ್ತು. ಮರುದಿನ ಉಮೇಶನಿಗೆ ವಿಪರೀತ ಜ್ವರ ಬಂದದೇ ಅದಕ್ಕೆ ಸಾಕ್ಷಿ...! ಆಗ ಚಂದ್ರು, ಉಮೇಶನಿಗೆ ದೇವರ ಪ್ರಸಾದ ತಿನ್ನಿಸಿದ ಕೂಡಲೇ ಜ್ವರ ಕಡಿಮೆಯಾಯಿತು...!

ನಿಮಗೆ ಇನ್ನೊಂದು ವಿಷಯ ತಿಳಿದಿರಲಿಕ್ಕಿಲ್ಲ .. ಅಲ್ವಾ...? ನೋಡಿ..... ಚಂದ್ರುವಿನ ಮನೆಗೆ ಬರುವ ದಾರಿ ಇದೆಯಲ್ಲ ಅದೇ... ಶ್ಯಾಮಣ್ಣನ ಮನೆಯ ಪಕ್ಕದಲ್ಲಿ ಇರುವ ತಿರುವಿನಲ್ಲಿ ಒಂದು ದೆವ್ವ ಇದೆಯಂತೆ ...! ರಾತ್ರಿ ಹತ್ತು ಗಂಟೆಯಾದ್ರೆ ಸಾಕು, ಆ ರಸ್ತೆಯಲ್ಲಿ ಯಾರೇ ಬರಲಿ ದೆವ್ವ ಅವರನ್ನು ಬಿಡುದಿಲ್ಲವಂತೆ. ಒಂದು ಸಲ ನಮ್ಮ ರಾಘವ ಬೆಂಗಳೂರಿಗೆ ಹೋಗಿ ಬರುವಾಗ ರಾತ್ರಿ ಹತ್ತು ಗಂಟೆಯಾಗಿತ್ತು, ರಾಘವ ಇನ್ನೇನೂ ಶ್ಯಾಮಣ್ಣನ ಮನೆಯ ತಿರುವಿಗೆ ಬಂದಿದ್ದಾನೆ ಅಷ್ಟೇ... ಅವನ ಹಿಂದಿನಿಂದ ಯಾರೋ ಬಂದು, ಸೇದಲು ಬೀಡಿ ಕೊಡಿ ಸ್ವಾಮಿ ಎಂದರಂತೆ. ರಾಘವನಿಗೆ ಆಗಲೇ ಅದು ದೆವ್ವ ಅನ್ನುವ ವಿಷಯ ತಿಳಿದಿತ್ತು, ಅಲ್ಲದೇ, ಅವನು ಎಂಟೆದೆಯ ಗಂಡು, ದೆವ್ವ, ಪಿಶಾಚಿಗೆ ಹೆದರುವ ಜಾಮಾನದವನಲ್ಲ. ಹೋಗಲಿ ಬಿಡು ಅಂತ ಮುಂದೆ ಮುಂದೆ ಸಾಗುತ್ತಿದ್ದ, ಆ ದೆವ್ವ, ಕೊಟ್ಟ ಬೀಡಿಯನ್ನು ಕೆಳಗೆ ಹಾಕಿ, ಅದನ್ನು ಹೆಕ್ಕಿ ಕೊಡು ಎಂದಿತಂತೆ. ಆದರೆ, ರಾಘವ ಬೀಡಿ ಹೆಕ್ಕಿ ಕೊಡುವ ಸಾಹಸಕ್ಕೆ ಹೋಗಲಿಲ್ಲ. ಯಾಕಂದರೆ, ಒಂದು ವೇಳೆ ಎದುರಿನ ವ್ಯಕ್ತಿ ಆ ಬೀಡಿಯನ್ನು ಹೆಕ್ಕಿ ಕೊಡಲು ಕೆಳಗೆ ಬಗ್ಗಿದರೆ, ಆ ದೆವ್ವ, ಅತನ ಬೆನ್ನಿಗೆ ಒಂದು ಬಲವಾದ ಏಟು ಕೊಟ್ಟು ಕೊಂದು ಬಿಡುತದೆ ಅಂತ ನಮ್ಮ ಹಿರಿಯರು ಆಗಾಗ ಹೇಳಿದ ನೆನಪು. ಈ ವಿಷಯ ತಿಳಿದಿದ್ದ ರಾಘವ ಯಾವುದೇ ಪ್ರತಿಕ್ರಿಯ ನೀಡಿದೆ ನೇರವಾಗಿ ಮನೆ ಸೇರಿದ. ಇದು ರಾಘವ ಮಾತ್ರ ಅಲ್ಲ. ನಮ್ಮ ಊರಿನ ಹಲವರಿಗೆ ಈ ರೀತಿಯ ಅನುಭವವಾಗಿದೆ. ಅದರೆ, ನನಗೆ ತಿಳಿದಿರುವ ಪ್ರಕಾರ ರಾಘವನ ಧೈರ್ಯ ನೋಡಿ ಆ ದೆವ್ವ ಅವನಿಗೆ ಎನೂ ಮಾಡಲಿಲ್ಲ ನೋಡಿ... ! ಒಂದು ವೇಳೆ ನಾವು ಆ ಜಾಗದಲ್ಲಿ ಇದ್ದಿದರೆ ಹೋ ... ದೇವರೇ ... ನಮ್ಮ ಗತಿ ..... !?

ಅದಲ್ಲದೇ, ನಮ್ಮ ಪಕ್ಕದ ಮನೆಯ ದರ್ಜಿ ಪಕ್ಕದ ಪೇಟೆಯಲ್ಲಿ ಕೆಲಸ ಮುಗಿಸಿ ಬರುವಾಗ ...ರಾತ್ರಿಯಾಗಿತ್ತು. ಆದೇ, ಶ್ಯಾಮಣ್ಣನ ಮನೆಯ ಪಕ್ಕದ ರಸ್ತೆಯಲ್ಲಿ ಎದುರು ದೆವ್ವ ಸಿಕ್ಕಿತಂತೆ... ! ಆ ರಾತ್ರಿಯಲ್ಲಿ ಬಿಳಿ ಸೀರೆಯನ್ನು ಉಟ್ಟಿದ್ದ ದೆವ್ವ ಅದರ ಮುಖವನ್ನು ತಲೆಗೂದಲಿನಿಂದ ಮುಚ್ಚಿಕೊಂಡಿತ್ತಂತೆ. ಅಲ್ಲದೇ, ತಲೆಗೂದಲು ಡಾಂಬರ್ ರಸ್ತೆಯ ಮೇಲೆ ಕಪ್ಪಗಿನ ಸೀರೆಯಂತೆ ಚಾಚಿಕೊಂಡಿತ್ತಂತೆ ... ! ಇದನ್ನು ನೋಡಿದ ದರ್ಜಿ ಅಲ್ಲಿಂದ ಓಡಿದವನು ಮನೆಯಲ್ಲೇ ನಿಂತದ್ದು. ಆ ದೆವ್ವವನ್ನು ನೋಡಿ ಮೂರು ದಿನ ಜ್ವರ ಬಂದಿತ್ತು ದರ್ಜಿಗೆ..... ! ಆ ನಂತರ ನೋಡಿ, ಸಂಜೆ ಆರು ಗಂಟೆಯೊಳಗೆ ಎಲ್ಲೇ ಇದ್ದರೂ ಬಂದು ಮನೆ ಸೇರುತ್ತಿದ್ದ.

ಹೇಳಿ ಕೇಳಿ ನಮ್ಮದು ಮಂಗಳೂರು. ಇಲ್ಲಿ ತುಳು ನಾಟಕಗಳು ಭಾರೀ ಫೇಮಸ್. ಒಂದು ಸಲ ಚಂದ್ರುವಿನ ಗೆಳೆಯ ಒಂದು ತುಳು ನಾಟಕದ ಟಿಕೆಟನ್ನು ತಂದು,

‘‘ಹೇ ...ಚಂದ್ರು ... ನನತ್ರ ಒಂದು ಟಿಕೆಟ್ ಉಂಟು, ನನಗೆ ನನ್ನ ಅತ್ತೆ ಮನೆಯಲ್ಲಿ ಭೂತ ನೇಮ ಇರುವುದರಿಂದ ನಾಟಕಕ್ಕೆ ಹೋಗಲಿಕ್ಕೆ ಅಗುವುದಿಲ್ಲ ನೀನೇೆ ಹೋಗು’’ ಅಂದ.

ಆದರೆ, ಚಂದ್ರುವಿಗೆ ಇದರಲ್ಲಿ ಅಸಕ್ತಿ ಇಲ್ಲ. ಅಪರೂಪಕ್ಕೊಮ್ಮೆ ಕನ್ನಡ ಸಿನೆಮಾ ನೋಡುವುದ ಅಷ್ಟೇ. ಅಂದು ಟಿಕೆಟ್ ವೇಸ್ಟ್ ಅಗುತ್ತೆ ಅಂದು ಉಮೇಶನನ್ನು ಕರೆದು,

‘‘ನೋಡು ಪೇಟೆಯಲ್ಲಿ ಒಂದು ತುಳು ನಾಟಕ ಇದೆ. ಹೋಗಿ ನೋಡ್ಕೊಂಡು ಬಾ....’’ ಅಂದ.

ಉಮೇಶ ಹುಟ್ಟು ಕಲಾವಿದ, ತುಂಬಾ ಖುಷಿಯಿಂದ ಈ ಆಫರ್ ಒಪ್ಪಿಕೊಂಡ. ನಾಟಕ ನೋಡಿದ್ದಾಯ್ತು. ಉಮೇಶನ ಹಣೆಬರಹ ಸರಿ ಇಲ್ಲ ಅನಿಸುತ್ತೆ. ನಾಟಕ ರಾತ್ರಿ ಹನ್ನೊಂದು ಗಂಟೆಗೆ ಸರಿಯಾಗಿ ಮುಗಿಯಿತು. ಮನೆಗೆ ಹೋಗುದಾದರೂ ಹೇಗೆ... ಇಲ್ಲಿ ಯಾರೂ ಪರಿಚಯವಿಲ್ಲ ಅವನಿಗೆ. ಅಲ್ಲದೇ, ಪೇಟೆಯಿಂದ ಅವರ ಮನಗೆ ಸುಮಾರು ಹತ್ತು ಮೈಲಿ ದೂರವಿದೆ. ಹೇಗೋ ಅವರನ್ನು ಇವರನ್ನು ಕೇಳಿಕೊಂಡು ಮೈನ್ ರೋಡ್‌ನವರೆಗೆ ಬಂದ. ಇನ್ನು ಇರೋದು ನಿಜವಾದ ಅಗ್ನಿ ಪರೀಕ್ಷೆ. ಇಲ್ಲಿಂದ ಆ ದೆವ್ವ ಪಿಶಾಚಿ ಇರುವ ರಸ್ತೆಯಲ್ಲಿ ಒಂದು ಮೈಲಿ ನಡೆದುಕೊಂಡು ಹೋಗಿ ಮನೆ ಸೇರಬೇಕು. ಇಂಥ ಪರಿಸ್ಥಿತಿ ನಮ್ಮ ಶತ್ರುವಿಗೂ ಬೇಡ. ಏನೇ ಆಗಲಿ ಅಂದುಕೊಂಡು ಚಿಕ್ಕ ಚಿಕ್ಕ ಹೆಜ್ಜೆ ಇಟ್ಟುಕೊಂಡು ದೇಹಪೂರ್ತಿ ಭಯವನ್ನು ತುಂಬಿಕೊಂಡು ಆ ಶ್ಯಾಮಣ್ಣನ ಮನೆಯ ಹತ್ತಿರ ಬರುತ್ತಿರುವಾಗ, ಹಿಂದಿನಿಂದ ಯಾರೋ ಗಟ್ಟಿ ಹೆಜ್ಜೆ ಹಾಕಿಕೊಂಡು ಉಮೇಶನ್ನು ಹಿಂಬಾಲಿಸಿಕೊಂಡು ಬಂದ ಹಾಗಾಯಿತು. ಈಗ ಉಮೇಶನಿಗೆ ಇದು ಪಿಶಾಚಿಯ ಕಾಟ ಎಂಬ ಸಂಶಯ ಬಲವಾಯಿತು. ಎನೇ ಆದರೂ ಹಿಂದೆ ನೋಡಬಾರದು ಅಂದುಕೊಂಡು ತನ್ನ ಭಯದ ನಡಿಗೆಯನ್ನು ಮುಂದುರಿಸಿದ. ಅದರೂ ಅವನ ಮನಸ್ಸಿನಲ್ಲಿ ಎನೋ ಕುತೂಹಲ...! ಪಿಶಾಚಿಯನ್ನು ನೋಡಬೇಕು ಎಂಬ ಹಂಬಲ... ! ಧೃಢ ಸಂಕಲ್ಪದಿಂದ ತನ್ನ ಕೈಯಲ್ಲಿ ಇದ್ದ ಸಣ್ಣ ಟಾರ್ಚ್ ನ್ನು ತಿರುಗಿಸಿ ಹಿಂದೆ ನೋಡಿದ. ಹಿಂದೆ ಒಂದು ದೊಡ್ಡ ನಾಯಿ ನಿಂತಿದೆ. ಈ ದೆವ್ವಗಳು ಹಾಗೆ ಅಂತೆ ಬೇರೆ-ಬೇರೆ ಪ್ರಾಣಿಗಳ ರೂಪ ಬದಲಿಸಿಕೊಂಡು ಬರುತದೆಯಂತೆ ನಮ್ಮ ಅಜ್ಜ ಹೇಳುತ್ತಿದ್ದರು. ಉಮೇಶ ಅದನ್ನು ನೋಡಿ,

‘‘ಶೂ..... ಶೂ.....’’ ಅಂದ

ಪುನಃ ಮುಂದೆ ತಿರುಗಿ ಶ್ಯಾಮಣ್ಣನ ಮನೆಯ ಹತ್ತಿರದ ತಿರುವಿಗೆ ಬಂದ, ಇದೇ, ಆ ಭಯಾನಕ ಜಾಗ. ಅವನ ಎದೆಬಡಿತ ಇನ್ನೂ ಹೆಚ್ಚಾಯಿತು. ಆದರೆ, ಇವನ ಹಿಂದಿನಿಂದ ಬರುತ್ತಿದ್ದ ಶಬ್ದ ಈಗ ಮಾಯವಾಯಿತು. ಆದರೆ, ಈಗ ಇವನ ತಲೆಯ ಮೇಲಿನಿಂದ ಶಬ್ದ ಬರಲಾರಂಭಿಸಿತ್ತು ... ! ಆದರೂ ... ಎಲ್ಲೂ ನಿಲ್ಲದೇ ಮುಂದೆ ಸಾಗುತ್ತಿದ್ದ. ಪುನಃ ಕೂತೂಹಲ, ಟಾರ್ಚ್‌ನ್ನು ತಿರುಗಿಸಿ ಮೇಲೆ ನೋಡಿದ. ಮರದ ಮೇಲೆ ಬಾವಲಿಯು ನೇತು ಹಾಕಿಕೊಂಡು ಶಬ್ದ ಮಾಡುತ್ತಿತ್ತು. ಎನೋ.. ಮನಸ್ಸಿನಲ್ಲಿ ಸ್ವಲ್ಪ ಧೈರ್ಯ ತಂದುಕೊಂಡು, ಮುಂದೆ ಸಾಗಿದ ಇದ್ದಕ್ಕಿಂದಂತೆ ಟಾರ್ಚ್ ಕೆಟ್ಟುಹೋಯಿತು. ಈಗ ಸುತ್ತಲೂ ಬರಿ ಕತ್ತಲೂ.. ಉಮೇಶನಿಗೆ ಈ ದಾರಿ ಚಿರಪರಿಚಿತವಾದುದರಿಂದ ಹೇಗೋ ಮಾಡಿ ಮನೆ ಸೇರಿದ. ಚಂದ್ರುವಿಗೆ ದೆವ್ವ ಮಾಡಿದ ಕೆಲಸವನ್ನು ತಿಳಿಸಿದ. ಆಗ, ಚಂದ್ರು ನಗುತ್ತ,

‘‘ಹೇ ಹುಚ್ಚಾ ... ನೋಡು ... ದಾರಿಯಲ್ಲಿ ಸಿಕ್ಕಿದ ನಾಯಿ ಪಿಶಾಚಿಯ ರೂಪ ಅಲ್ಲ. ಅದೂ ನಿಜವಾದ ನಾಯಿಯೇ. ಆ ಮಧ್ಯ ರಾತ್ರಿಯಲ್ಲಿ ಅದು ಹಸಿವಿನಿಂದ ನಿನ್ನ ಹಿಂದೆ ಬಂದಿದೆ... ! ಮರ ಮೇಲೆ ಶಬ್ದ ಮಾಡಿದ್ದು ಬಾವಲಿ ಏಕೆಂದರೆ ಬಾವಲಿಗಳು ರಾತ್ರಿ ಸಂಚಾರ ಮಾಡುವುದು ಸಹಜ ನಿಯಮ. ಮತ್ತೆ ... ನಿನ್ನ ಟಾರ್ಚನ್ನು ಕೆಡುವಂತೆ ಮಾಡಿದ್ದು ಈ ದೆವ್ವವಲ್ಲ. ಕೊಡಿಲ್ಲಿ ... ನೋಡು... ಇದರ ಸ್ವಿಚ್ ಮುರಿದಿದೆ. ನಿನ್ನಲ್ಲಿ ಪಿಶಾಚಿಯ ಬಗ್ಗೆ ಇದ್ದ ಭಯದಿಂದ ಸ್ವಿಚ್‌ನ ಮೇಲೆ ಅತಿಯಾದ ಬಲ ಪ್ರಯೋಗ ಮಾಡಿದಾಗ ಸ್ವೀಚ್ ಮುರಿದಿದೆ ಅಷ್ಟೇ .. ದೆವ್ವವಿಲ್ಲ ... ಪಿಶಾಚಿಯಿಲ್ಲ ...ಹೋಗಿ ಭಯ ಬಿಟ್ಟು ಮಲಗಿಕೋ’’ ಎಂದ.

ಈಗ ಉಮೇಶನ ಮನಸ್ಸು ನಿರಾಳವಾಯಿತು. ಇಷ್ಟು ದಿನ ಜನರು ಶ್ಯಾಮಣ್ಣನ ಮನೆಯ ಬಳಿ ದೆವ್ವ ಇದೆ, ಪಿಶಾಚಿ ಇದೆ ಅಂದದ್ದು... ಎಲ್ಲಾ ...ಸುಳ್ಳೇ ...? ಎಂಬ ಪ್ರಶ್ನೆ ಇನ್ನೂ ಉಮೇಶನಲ್ಲಿ ಕಾಡುತ್ತಿತ್ತು.

ಮರುದಿನ ಚಂದ್ರು ತನ್ನ ಅಂಗಡಿ ಸ್ವಚ್ಛಗೊಳಿಸುತ್ತಿದ್ದಾಗ, ಒಂದು ಖಾಲಿ ತಾಯತ ಸಿಕ್ಕಿತ್ತು. ಚಂದ್ರು ಈ ತಾಯತಕ್ಕೆ ಪಕ್ಕದ ಹೊಟೇಲಿನ ಒಲೆಯಿಂದ ಬೂದಿ ತೆಗೆದು ತುಂಬಿಸಿ, ನಂತರ ಅದನ್ನು ಅವರ ಹೊಟೇಲಿನ ಮೇಜಿನ ಬದಿಯಲ್ಲಿ ಇಟ್ಟಿದ್ದ. ಹೋ... ಈ ಹೊಟೇಲ್ ಮಾಲಕನ ಪರಿಚಯ ಮಾಡಿಸಿಲ್ಲ ನಿಮಗೆ. ಸರಿ.....ಸರಿ..... ಅವನ ಹೆಸರು ಕುಶ್, ಮೂಲತಃ ಬಿಹಾರದವನು. ಸದ್ಯಕ್ಕೆ ನಮ್ಮ ಪಕ್ಕದ ಊರಿನಿಂದ ಇಲ್ಲಿಗೆ ಬಂದಿದ್ದಾನೆ. ನಳಪಾಕ ರಾಜನ ಇನ್ನೊಂದು ರೂಪ ಅನ್ನಬಹುದು. ಇವರ ಹೊಟೇಲಿನಲ್ಲಿ ದೊರೆಯುವ ಎಲ್ಲಾ ತಿಂಡಿ ತಿನಿಸುಗಳು ಎಲ್ಲರಿಗೂ ಅಚ್ಚು ಮೆಚ್ಚು. ಆದ್ರೆ ... ಮಾಟ-ಮಂತ್ರ ಅಂದ್ರೆ ಭಾರೀ ಭಕ್ತಿ. ತಿಂಗಳಿಗೊಮ್ಮೆ ಕೇಶವ ಮೂರ್ತಿಯ ಬಳಿ ಹೋಗಿ ತಾಯತ ಕಟ್ಟಿಸಿಕೊಂಡು ಬರುವುದು ಇವರ ವಾಡಿಕೆ. ಇಂಥ ವ್ಯಕ್ತಿಗೆ ತನ್ನ ಹೊಟೇಲಿಗೆ ಯಾರೋ ಮಾಟ ಮಾಡಿಸಿದ್ದಾರೆ ಎಂದರೆ ಹೇಗೆ ಆಗಬೇಡ ಹೇಳಿ.. ಈತ ತನ್ನ ಮೇಜಿನ ಬದಿಯಲ್ಲಿ ಇದ್ದ ತಾಯತವನ್ನು ನೋಡಿ ಚಂದ್ರುವನ್ನು ಕರೆದು.

‘‘ಹೇ..... ಚಂದ್ರಣ್ಣ ನೋಡಿ ... ಇಲ್ಲಿ ತಾಯತ ... ಯಾರೋ... ನನಗೆ ಮಾಟ ಮಾಡಿಸಿದ್ದಾರೆ. ಹೋ... ದೇವರೇ ... ನಾನು ಯಾರಿಗೂ ದ್ರೋಹ ಮಾಡಿಲ್ಲ ಯಾಕಾಪ್ಪ ನಂಗೆ ಈ ಶಿಕ್ಷೆ ...?’’ ಅಂದ. ಕುಶ್‌ನ ಅಸಹಾಯಕತೆ ನೋಡಿ ಚಂದ್ರು ತನ್ನ ಮನಸ್ಸಿನಲ್ಲೇ ನಗುತ್ತಿದ್ದ.

‘‘ಹೇ ... ಬಿಡಣ್ಣ ... ಮಾಟನೂ ಇಲ್ಲ ಮಂತ್ರನೂ ಇಲ್ಲ.....ನೋಡು ನಿನ್ನ ಮುಂದೆನೇ ಈ ತಾಯತನ್ನ ಒಡಿತೀನಿ’’ ಎಂದು ಹೇಳಿ ಆ ತಾಯತವನ್ನು ಬಿಡಿಸಿ ಅದರಲ್ಲಿ ಇದ್ದ ಬೂದಿಯನ್ನು ಕುಶ್‌ನ ಕೈಗೆ ಹಾಕಿ,

‘‘ನೋಡು ಇದು ಬರಿ ಬೂದಿ, ಯಾರೋ ನಿನಗೆ ತಮಾಷೆ ಮಾಡಲು ಈ ರೀತಿ ಮಾಡಿದ್ದಾರೆ. ಭಯಪಡಬೇಡ’’ ಎಂದ ಚಂದ್ರು.

ಸುಮಾರು ಅರ್ಧ ಗಂಟೆ ಕಳೆದ ಮೇಲೆ ನಂತರ ಪುನಃ ಕುಶ್ ಚಂದ್ರುವಿನ ಬಳಿ ಬಂದು,

‘‘ನೋಡಿ ... ನೀವು ಆಗ ಆ ಬೂದಿಯನ್ನು ನನ್ನ ಅಂಗೈಗೆ ಹಾಕಿದಿರಲ್ಲಾ ಈಗ ಕೈ ಮೇಲೆ ಎತ್ತಲು ಆಗುತ್ತಿಲ್ಲ’’ ಎಂದು ಹೇಳಿ ಕಣ್ಣೀರಿಟ್ಟ. ಈಗ ಚಂದ್ರುವಿಗೆ ತಾನು ತಮಾಷೆ ಮಾಡಲು ಹೋಗಿ ಎನೋ ಅನಾಹುತವಾಗುವ ಮುನ್ಸೂಚನೆ ದೊರೆಯಿತು. ಆದರೂ, ‘‘ಹೇ ...ಹೋಗು ಎನೂ ಆಗುವುದಿಲ್ಲ ... ಎಲ್ಲಾ ನಿನ್ನ ಭ್ರಮೆ’’ ಎಂದು ಹೇಳಿ ಕಳುಹಿಸಿದ ಚಂದ್ರು.

ಇಷ್ಟು ಹೇಳಿ ಹತ್ತು ನಿಮಿಷ ಕಳೆದಿದೆ ಅಷ್ಟೇ, ಅಷ್ಟರಲ್ಲಿ ದರ್ಜಿ ಓಡಿ ಬಂದು,

‘‘ಚಂದ್ರಣ್ಣ..... ಕುಶ್ ಮೂರ್ಛೆ ಹೋಗಿದ್ದಾನೆ’’ ಎಂದ.

ಚಂದ್ರುವಿಗೆ ಆಕಾಶವೇ ತಲೆ ಮೇಲೆ ಬಿದ್ದ ಹಾಗೆ ಅನುಭವವಾಯಿತು. ಒಂದು ನಿಮಿಷವು ತಡಮಾಡದೆ, ಜೀಪಿನಲ್ಲಿ ಕುಶ್‌ನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಒಂದು ದೊಡ್ಡ ಇತಿಹಾಸ. ಚಂದ್ರು ಡಾಕ್ಟ್ರರನ್ನು ಪಕ್ಕಕ್ಕೆ ಕರೆದು ನಡೆದ ಎಲ್ಲ ವಿಷಯವನ್ನು ತಿಳಿಸಿದ. ಡಾಕ್ಟ್ರರ್ ಒಂದು ಬಾಟಲಿ ಗ್ಲೂಕೋಸ್ ಏರಿಸಿದರು. ನಂತರ, ಅದೇ ಜೀಪಿನಲ್ಲಿ ಕುಶ್‌ನ ಮನೆಗೆ ತಂದು ಬಿಟ್ಟರು. ಎರಡು ದಿನದ ನಂತರ ಚಂದ್ರು ನಡೆದ ಎಲ್ಲಾ ವಿಷಯವನ್ನು ಕುಶ್‌ಗೆ ತಿಳಿಸಿದ. ಆಗ, ಕುಶ್ ಅವನ ಬಗ್ಗೆಯೇ ನಾಚಿಕೆಪಟ್ಟುಕೊಂಡ. ಇತ್ತೀಚೆಗೆ ಕುಶ್ ಯಾವುದೇ ಮಂತ್ರವಾದಿಯ ಬಳಿ ಹೋಗುತ್ತಿಲ್ಲ ಅಂತ ಅವನ ಸ್ನೇಹಿತ ಬಾಲು ಹೇಳುತ್ತಿದ್ದ.

ಅಲ್ಲಿಂದ, ಅವಸರವಾಗಿ ಓಡಿಬಂದ ಚಂದ್ರು, ಅಂಗಡಿ ಬಾಗಿಲು ಹಾಕಿ ಸೀದಾ ಮನೆಗೆ ಹೋಗಿ ನಡೆದ ವಿಷಯನ್ನೆಲ್ಲಾ ಕೌಸಲ್ಯಗೆ ಹೇಳಿ, ಆಕೆಯಿಂದ ಅಂದಿನ ಮಂಗಳಾರತಿಯನ್ನು ಚೆನ್ನಾಗಿ ಮಾಡಿಸಿಕೊಂಡಿದ್ದ. ಚಂದ್ರು ಅಂದು ರಾತ್ರಿ ಹಸಿವಿಲ್ಲದಿದ್ದರೂ, ಅಕೆಯ ಒತ್ತಾಯಕ್ಕೆ ಸ್ವಲ್ಪ ಊಟ ಮಾಡಿ, ರಾತ್ರಿ ತುಂಬ ಹೊತ್ತು ತನ್ನ ಜೀವನದಲ್ಲಿ ನಡೆದು ಹೋದ ಹಲವು ಘಟನೆಗಳನ್ನು ಮೆಲುಕು ಹಾಕಿಕೊಂಡ. ಏನೇ ಆಗಲಿ, ನಮ್ಮ ಜನ ತನಗೆ ಬೇಕಾದ ರೀತಿಯ ನಂಬಿಕೆಯ ಮೇಲೆ ನಡೆಯುತ್ತಿದ್ದಾರೆ ಎಂದು ಯೋಚಿಸುತ್ತಾ ಅವನಷ್ಟಕ್ಕೆ ಮನಸ್ಸಿನಲ್ಲಿ ನಗುತ್ತಿದ್ದ. ಅವನಿಗೆ, ನಂಬಿಕೆ ಅಂದ್ರೆ ಇದೇನಾ..... ?!!! ಎಂಬ ಪ್ರಶ್ನೆ ಪ್ರಶ್ನೆಯಾಗಿ ಉಳಿಯಿತು. ಚಂದ್ರು ಮೆಲ್ಲನೆ ನಿದ್ದೆಗೆ ಜಾರಿದ..

Writer - ದಿಲೀಪ್ ಕುಮಾರ್ ಸಂಪಡ್ಕ

contributor

Editor - ದಿಲೀಪ್ ಕುಮಾರ್ ಸಂಪಡ್ಕ

contributor

Similar News