ಪ್ರಧಾನಿ ಮೋದಿಗೆ ಬಹರೈನ್ ನ ಪ್ರತಿಷ್ಠಿತ ‘ಕಿಂಗ್ ಹಮದ್ ಆರ್ಡರ್ ಆಫ್ ದ ರಿನೈಸಾನ್ಸ್’ ಪ್ರದಾನ

Update: 2019-08-25 16:40 GMT

ಮನಾಮ, ಆ.25: ತ್ರಿರಾಷ್ಟ್ರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಬಹರೈನ್ ಗೆ ಭೇಟಿ ನೀಡಿದ್ದು, ಬಹರೈನ್ ರಾಜ ಹಮದ್ ಬಿನ್ ಈಸಾ ಬಿನ್ ಸಲ್ಮಾನ್ ಅಲ್ ಖಲೀಫಾ ಅವರು ಮೋದಿಗೆ ಬಹರೈನ್ ನ ಪ್ರತಿಷ್ಠಿತ ‘ಕಿಂಗ್ ಹಾಮದ್ ಆರ್ಡರ್ ಆಫ್ ದ ರಿನೈಸಾನ್ಸ್’ ಪ್ರದಾನಿಸಿ ಗೌರವಿಸಿದರು.

ಗಲ್ಫ್ ರಾಷ್ಟ್ರಗಳ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ಬಲಗೊಳಿಸಿದ್ದಕ್ಕಾಗಿ ಮೋದಿಯವರಿಗೆ ಈ ಪ್ರಶಸ್ತಿ ಪ್ರದಾನಿಸಲಾಗಿದೆ. ಬಹರೈನ್ ಗೆ ಭೇಟಿ ನೀಡಿದ ಭಾರತದ ಪ್ರಪ್ರಥಮ ಪ್ರಧಾನಿಯಾಗಿದ್ದಾರೆ ಮೋದಿ.

‘ ಉಭಯ ರಾಷ್ಟ್ರಗಳ ನಡುವೆ ಗಾಢ ನಾಗರಿಕತೆಯ ನಂಟುಗಳ ಮೇಲೆ ಸಂಬಂಧವು ರೂಪುಗೊಂಡಿದೆ. ಪ್ರಧಾನಿ ಮೋದಿ ಮತ್ತು ಬಹರೈನ್ ದೊರೆ ಹಮದ್ ಬಿನ್ ಈಸಾ ಬಿನ್ ಸಲ್ಮಾನ್ ಅಲ್ ಖಲೀಫಾ ಅವರು ಪರಸ್ಪರ ಆಸಕ್ತಿಯ ಎಲ್ಲ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯಿಸಿಕೊಂಡರು ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ ಕುಮಾರ ಅವರು ಟ್ವೀಟಿಸಿದ್ದಾರೆ.

‘ದಿ ಕಿಂಗ್ ಹಾಮದ್ ಆರ್ಡರ್ ಆಫ್ ದಿ ರಿನೈಸಾನ್ಸ್ ಪ್ರಶಸ್ತಿಯನ್ನು 130 ಕೋಟಿ ಭಾರತೀಯರ ಪರವಾಗಿ ನಮ್ರತೆಯೊಂದಿಗೆ ಸ್ವೀಕರಿಸುತ್ತಿದ್ದೇನೆ. ಇದು ಬಹರೈನ್‌ನೊಂದಿಗಿನ ನೂರಾರು ವರ್ಷಗಳ ಇತಿಹಾಸವಿರುವ ಮತ್ತು 21ನೇ ಶತಮಾನದಲ್ಲಿ ವೇಗವಾಗಿ ವರ್ಧಿಸುತ್ತಿರುವ ಭಾರತದ ಗಾಢವಾದ ಸ್ನೇಹಕ್ಕೆ ಲಭಿಸಿರುವ ಮನ್ನಣೆಯಾಗಿದೆ ’ ಎಂದು ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ತ್ರಿರಾಷ್ಟ್ರ ಪ್ರವಾಸದಲ್ಲಿರುವ ಮೋದಿ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಂದ ಫ್ರಾನ್ಸ್‌ಗೆ ನಿರ್ಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News