ಶಾಲೆ ಬಿಟ್ಟು ಗಣಿಯಲ್ಲಿ ದುಡಿಯುತ್ತಿರುವ 5 ಸಾವಿರಕ್ಕೂ ಹೆಚ್ಚು ಮಕ್ಕಳು

Update: 2019-08-25 16:03 GMT
ಫೋಟೊ ಕೃಪೆ: Reuters

ಹೊಸದಿಲ್ಲಿ, ಆ.25: ಜಾರ್ಖಂಡ್ ಮತ್ತು ಬಿಹಾರದ ಮೈಕಾ ಗಣಿಗಳಲ್ಲಿ 6ರಿಂದ 14 ವರ್ಷದ 5 ಸಾವಿರಕ್ಕೂ ಅಧಿಕ ಮಕ್ಕಳು ಶಾಲೆ ತೊರೆದು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು ಸರಕಾರದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಜಾರ್ಖಂಡ್ ಮತ್ತು ಬಿಹಾರದ ಮೈಕಾ ಗಣಿಗಳಲ್ಲಿ 22 ಸಾವಿರಕ್ಕೂ ಅಧಿಕ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಟೆರೆ ಡೆಸ್ ಹೋಮ್ಸ್’ ಎಂಬ ಅಂತರಾಷ್ಟ್ರೀಯ ಸಂಸ್ಥೆ ಕಳೆದ ವರ್ಷ ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕು ರಕ್ಷಣೆಗಾಗಿನ ರಾಷ್ಟ್ರೀಯ ಆಯೋಗ(ಎನ್‌ಸಿಪಿಸಿಆರ್) ಸಮೀಕ್ಷೆ ನಡೆಸಿ ವರದಿ ತಯಾರಿಸಿದೆ.

ಮೈಕಾ ಗಣಿ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಮಕ್ಕಳ ಒಂದು ವರ್ಗ ಶಿಕ್ಷಣ ಪೂರೈಸುವ ಅವಕಾಶ ವಂಚಿತರಾಗಿದ್ದು ಇವರ ಗಳಿಕೆ ಕುಟುಂಬದ ಆದಾಯಕ್ಕೆ ಪೂರಕವಾಗಿದೆ. ಇನ್ನೊಂದು ವರ್ಗದ ಮಕ್ಕಳು ಮಹಾತ್ವಾಕಾಂಕ್ಷೆಯ ಕೊರತೆ ಇರುವವರು. ಶಿಕ್ಷಣದಲ್ಲಿ ಆಸಕ್ತಿ ಇಲ್ಲದೆ ಮೈಕಾ ಗಣಿಗಳಲ್ಲಿ ದೊರಕುವ ಮೈಕಾ ಚೂರುಗಳನ್ನು ಹೆಕ್ಕಿ ಮಾರಾಟ ಮಾಡಿ ಹಣ ಗಳಿಸುವ ಉದ್ದೇಶದಿಂದ ಶಾಲೆ ಬಿಟ್ಟು ಓಡಿ ಬಂದವರು ಎಂದು ಸಮೀಕ್ಷೆಯ ವರದಿ ತಿಳಿಸಿದೆ. ಜಾರ್ಖಂಡ್ ಮತ್ತು ಬಿಹಾರದ ಮೈಕಾ ಗಣಿ ಪ್ರದೇಶದಲ್ಲಿರುವ ಮಕ್ಕಳ ಯೋಗಕ್ಷೇಮ ಮತ್ತು ಶಿಕ್ಷಣದ ಕುರಿತಾದ ಸಮೀಕ್ಷೆಯನ್ನು ಜಾರ್ಖಂಡ್‌ನ ಕೊಡೆರ್ಮ ಮತ್ತು ಗಿರಿದಿ, ಬಿಹಾರದ ನವಾಡ ಜಿಲ್ಲೆಗಳಲ್ಲಿ ನಡೆಸಲಾಗಿದೆ.

ಜಾರ್ಖಂಡ್‌ನಲ್ಲಿ 6ರಿಂದ 14 ವರ್ಷದೊಳಗಿನ 4,545 ಮಕ್ಕಳು ಶಾಲೆಗೆ ಹಾಜರಾಗುತ್ತಿಲ್ಲ. ಬಿಹಾರದಲ್ಲಿ 649 ಮಕ್ಕಳು ಶಾಲೆಗೆ ಹಾಜರಾಗುತ್ತಿಲ್ಲ. ಮಹಾತ್ವಾಕಾಂಕ್ಷೆಯ ಕೊರತೆ, ಆಸಕ್ತಿಯ ಕೊರತೆ ಮತ್ತು ಮೈಕಾ ಗಣಿಯಲ್ಲಿ ದೊರಕುವ ಚೂರುಗಳನ್ನು ಹೆಕ್ಕುವುದು- ಈ ಕಾರಣಗಳಿಂದ ಶಾಲೆ ಬಿಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಪ್ರದೇಶದಲ್ಲಿ ಮೈಕಾ ಚೂರುಗಳನ್ನು ಹೆಕ್ಕಿ ಮಾರಾಟ ಮಾಡಿ ಜೀವನ ಸಾಗಿಸುವ ಹಲವು ಕುಟುಂಬಗಳಿವೆ. ಮಕ್ಕಳನ್ನು ಶಾಲೆಗೆ ಕಳಿಸುವುದರಿಂದ ಏನೂ ಪ್ರಯೋಜನವಿಲ್ಲ. ಆದರ ಬದಲು ಒಂದಿಷ್ಟು ಮೈಕಾ ಚೂರುಗಳನ್ನು ಹೆಕ್ಕಿದರೆ ಕುಟುಂಬದ ಆದಾಯಕ್ಕೆ ಪೂರಕವಾಗಬಹುದು ಎಂಬುದು ಈ ಕುಟುಂಬದವರ ಅಭಿಪ್ರಾಯವಾಗಿದೆ.

 ಮೈಕಾ ಖನಿಜವನ್ನು ಗಣಿಯಿಂದ ಹೊರತೆಗೆದು ಕೈಗಾರಿಕೆಗಳಿಗೆ ಸರಬರಾಜು ಮಾಡುವ ಪ್ರಕ್ರಿಯೆಯಲ್ಲಿ ಬಾಲ ಕಾರ್ಮಿಕರನ್ನು ಬಳಸಬಾರದು ಎಂದು ಮಕ್ಕಳ ಹಕ್ಕು ರಕ್ಷಣೆಗಾಗಿನ ರಾಷ್ಟ್ರೀಯ ಆಯೋಗ ತಿಳಿಸಿದೆ. ಈ ನಿಟ್ಟಿನಲ್ಲಿ ಸರಕಾರೇತರ ಸಂಸ್ಥೆಗಳು, ಅಭಿವೃದ್ಧಿ ಏಜೆನ್ಸಿಗಳು ಸ್ಥಳೀಯರು, ಜಿಲ್ಲಾಡಳಿತ ಹಾಗೂ ಕೈಗಾರಿಕೆಗಳೊಂದಿಗೆ ಕಾರ್ಯನಿರ್ವಹಿಸುವ ಅಗತ್ಯವಿದೆ. ಮಕ್ಕಳಿಂದ ಮೈಕಾ ಚೂರುಗಳನ್ನು ಖರೀದಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜಾರ್ಖಂಡ್ ಮತ್ತು ಬಿಹಾರದ ಮೈಕಾ ಗಣಿ ಪ್ರದೇಶದಲ್ಲಿ ಬಾಲ ಕಾರ್ಮಿಕ ವ್ಯವಸ್ಥೆಯನ್ನು ನಿವಾರಿಸಲು ಆಡಳಿತ ಕ್ರಮ ಕೈಗೊಳ್ಳಬೇಕೆಂದು ಆಯೋಗ ಅಭಿಪ್ರಾಯಪಟ್ಟಿದೆ. ಜೊತೆಗೆ, ಗಿರಿದಿ ಮತ್ತು ಕೊಡೆರ್ಮ ಜಿಲ್ಲೆಯ ಮೈಕಾ ಗಣಿ ಪ್ರದೇಶದಲ್ಲಿರುವ ನಿವಾಸಿಗಳಲ್ಲಿ ಅಪೌಷ್ಠಿಕತೆಯ ಪ್ರಮಾಣ ಕ್ರಮವಾಗಿ ಶೇ.14 ಮತ್ತು ಶೇ.19 ಆಗಿದೆ. ನವಾಡಾ ಜಿಲ್ಲೆಯಲ್ಲಿ ಈ ಪ್ರಮಾಣ ಇನ್ನಷ್ಟು ಅಧಿಕವಾಗಿದೆ ಎಂದು ಆಯೋಗ ತಿಳಿಸಿದೆ.

ಭಾರತಕ್ಕೆ ಅಗ್ರಸ್ಥಾನ

ಕಾಗೆ ಬಂಗಾರ ಎಂದೂ ಕರೆಸಿಕೊಳ್ಳುವ ಮೈಕಾ ಖನಿಜದ ಉತ್ಪಾದನೆಯಲ್ಲಿ ವಿಶ್ವದಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಜಾರ್ಖಂಡ್ ಮತ್ತು ಬಿಹಾರ ಮೈಕಾ ಉತ್ಪಾದಿಸುವ ಪ್ರಮುಖ ರಾಜ್ಯಗಳಾಗಿವೆ. ಸೌಂದರ್ಯವರ್ಧಕ ಸಾಧನಗಳು, ಪೈಂಟ್‌ಗಳ ಉತ್ಪಾದನೆಯಲ್ಲಿ ಮೈಕಾ ಖನಿಜವನ್ನು ಬಳಸಲಾಗುತ್ತದೆ. ಅಲ್ಲದೆ ಕಟ್ಟಡಗಳಲ್ಲಿ , ಇಲೆಕ್ಟ್ರಾನಿಕ್ಸ್ ಸಾಧನಗಳಲ್ಲೂ ಈ ಖನಿಜವನ್ನು ಬಳಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News