ರಾಜ್ಯಕ್ಕೆ ಬಿಜೆಪಿ ಏಕ ಚಕ್ರಾಧಿಪತ್ಯದ ಆಡಳಿತವನ್ನು ನೀಡಿದೆ: ಜೆಡಿಎಸ್ ವಕ್ತಾರ ರಮೇಶ್ ಬಾಬು

Update: 2019-08-26 14:30 GMT

ಬೆಂಗಳೂರು, ಆ. 26: ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಇಂದಿಗೆ ಒಂದು ತಿಂಗಳು. ಹಿಂದಿನ ಮೈತ್ರಿ ಸರಕಾರದ ಮೇಲೆ ಕಾರಣವಿಲ್ಲದೆ ಆರೋಪಗಳನ್ನು ಮಾಡುತ್ತಿದ್ದ ಇವರು ಇನ್ನೂ ಪೂರ್ಣ ಪ್ರಮಾಣದ ಸರಕಾರ ರಚನೆ ಮಾಡಲು ಸಾಧ್ಯ ಆಗದೇ ಇರುವುದು ವೈಫಲ್ಯದ ಸಂಕೇತ ಎಂದು ಜೆಡಿಎಸ್ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ.

ರಾಜ ಪ್ರಭುತ್ವದಲ್ಲಿ ಏಕ ಚಕ್ರಾಧಿಪತ್ಯದ ಆಡಳಿತವನ್ನು ನಾವು ಇತಿಹಾಸದಲ್ಲಿ ಓದಿದ್ದೆವು. ಬಿಜೆಪಿ ರಾಜ್ಯಕ್ಕೆ ಯಡಿಯೂರಪ್ಪನವರ ಏಕ ಚಕ್ರಾಧಿಪತ್ಯದ ಆಡಳಿತವನ್ನು ನೀಡುವ ಮೂಲಕ ಜನತಂತ್ರದಲ್ಲೂ ಇದು ಸಾಧ್ಯ ಎಂದು ರುಜುವಾತು ಮಾಡಿದೆ. ಇದಕ್ಕಾಗಿ ಬಿಜೆಪಿಗೆ ಮತ್ತು ಸಂಘ ಪರಿವಾರಕ್ಕೆ ಅಭಿನಂದನೆಗಳು ಎಂದು ಅವರು ಲೇವಡಿ ಮಾಡಿದ್ದಾರೆ.

ಯಡಿಯೂರಪ್ಪ ಒಂದು ತಿಂಗಳಿಂದ ಏಕವ್ಯಕ್ತಿ ಆಡಳಿತದ ಮೂಲಕ ಸಮೃದ್ಧಿಯಾಗಿ ಊಟ ಮಾಡುತ್ತಿದ್ದಾರೆ. ಬಿಜೆಪಿ ಅಥವಾ ಸಂಘ ಪರಿವಾರ ಪೂರ್ಣ ಪ್ರಮಾಣದ ಸಂಪುಟದ ರಚನೆ ಅಥವಾ ಖಾತೆಗಳ ಹಂಚಿಕೆ ಮುಖಾಂತರ ಅವರ ಸಮೃದ್ಧಿಯ ಭೋಜನಕ್ಕೆ ಅಡೆತಡೆ ಮಾಡುವುದಿಲ್ಲ ಎಂದು ನಾನು ನಂಬಿರುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದ ಸಮಸ್ಯೆಗಳು ಬಿಜೆಪಿ ಪಕ್ಷದ ಆದ್ಯತೆಯಾಗದೆ ಇರುವುದರಿಂದ ನಮ್ಮ ರಾಜ್ಯದಲ್ಲಿ ಏಕ ಚಕ್ರಾಧಿಪತ್ಯದ ಆಡಳಿತ ಮತ್ತು ಭ್ರಷ್ಟಾಚಾರದ ಮೂಲಕ ಸಿಎಂ ಸಮೃದ್ಧ ಭೋಜನ ಯಾರ ಹಂಗೂ ಇಲ್ಲದೆ ನಡಿಯುತ್ತಿದೆ. ಇವರ ಒಂದು ತಿಂಗಳ ಆಡಳಿತ ಇತಿಹಾಸದ ಪುಟ ಸೇರಿದೆ. ಹೀಗಾಗಿ ಯಡಿಯೂರಪ್ಪಗೆ ಅಭಿನಂದನೆಗಳು ಎಂದು ರಮೇಶ್‌ ಬಾಬು ಲೇವಡಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News