ಬೆಂಗಳೂರು: ಇಬ್ಬರ ಅಂಗಾಂಗ ದಾನದಿಂದ ಉಳಿಯಿತು 13 ಜನರ ಜೀವ !

Update: 2019-08-26 17:19 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.26: ಮನೆಯ ಇಬ್ಬರು ಸಾವನ್ನಪ್ಪಿ ಎರಡು ಕುಟುಂಬಗಳು ದುಃಖದ ಸಮಯದಲ್ಲಿರುವಾಗಲೇ ಅಂಗಾಂಗ ದಾನ ಮಾಡುವ ಮೂಲಕ 13 ಜೀವಗಳನ್ನು ಉಳಿಸಿ ಮಾನವೀಯತೆ ಮೆರೆದಿವೆ. ನಗರದ ತಾವರೆಕೆರೆಯಲ್ಲಿ 21 ವರ್ಷದ ದಿನಗೂಲಿ ನೌಕರ, ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪರಿಣಾಮ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ನೀಡಿದರೂ ಬ್ರೈನ್ ಡೆಡ್ ಆಗಿತ್ತು.

ಆದರೆ, ಮಗನನ್ನು ಕಳೆದುಕೊಳ್ಳುವ ದುಃಖದಲ್ಲಿದ್ದರೂ ಕುಟುಂಬಸ್ಥರು, ಆತನ ಅಂಗಾಂಗಗಳನ್ನು ದಾನ ಮಾಡಿದರು. ಬಳಿಕ, ಫೋರ್ಟಿಸ್ ಆಸ್ಪತ್ರೆಯ ವೈದ್ಯರ ತಂಡವು ಐದು ಅಂಗಗಳನ್ನು ತೆಗೆದು, ಇತರೆ ರೋಗಿಗಳಿಗೆ ನೀಡಿ, ಜೀವ ಉಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ 30 ವರ್ಷದ ಮಹಿಳೆ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆಕೆಯನ್ನು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರ ಆರೋಗ್ಯ ಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗಿ ಬ್ರೈನ್ ಡೆಡ್ ಎಂದು ವೈದ್ಯರು ಘೋಷಿಸಿದರು. ನಂತರ ಮಹಿಳೆಯ ಕುಟುಂಬ ಸದಸ್ಯರು, ಆಕೆಯ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದಾಗ ಫೋರ್ಟಿಸ್ ವೈದ್ಯರು 8 ಅಂಗಗಳನ್ನು ತೆಗೆದು, ಎಂಟು ರೋಗಿಗಳ ಜೀವ ಉಳಿಸಿದ್ದಾರೆ.

ಈ ಇಬ್ಬರ ಅಂಗಾಂಗಗಳನ್ನು ಒಟ್ಟು 13 ರೋಗಿಗಳಿಗೆ ನೀಡುವ ಮೂಲಕ ಅವರಿಗೆ ಪುನರ್ಜೀವ ನೀಡಲಾಗಿದೆ. ಈ ಮೂಲಕ ಎರಡೂ ಕುಟುಂಬಗಳ ಸದಸ್ಯರು ದುಃಖದಲ್ಲಿದ್ದರೂ ಮಾನವೀಯತೆ ಮೆರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News