ಫ್ಯಾಶಿಸಂ ವಿರುದ್ಧದ ಹೋರಾಟಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು: ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಕೆ.ಉಮಾ

Update: 2019-08-26 17:59 GMT

ಬೆಂಗಳೂರು, ಆ. 26: ಮಾನವ ವಿರೋಧಿ ಫ್ಯಾಶಿಸಂ ವಿರುದ್ಧ ಪ್ರತಿರೋಧವನ್ನು ಬೆಳೆಸುವ ಮೂಲಕ ಶಿಕ್ಷಣ, ಸಂಸ್ಕೃತಿ ಹಾಗೂ ಮಾನವಕುಲವನ್ನು ರಕ್ಷಿಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಕೆ.ಉಮಾ ಕರೆ ನೀಡಿದ್ದಾರೆ.

ಸೋಮವಾರ ನಗರದ ಶಿಕ್ಷಕರ ಸದನದಲ್ಲಿ ಎಐಡಿಎಸ್‌ಓನ 7ನೆ ರಾಜ್ಯಮಟ್ಟದ ಪ್ರತಿನಿಧಿ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಅನ್ಯಾಯ, ಅಸತ್ಯಗಳ ವಿರುದ್ಧದ ಸಾಮಾಜಿಕ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು.

ಪ್ರಧಾನಿ ಮೋದಿ ನೇತೃತ್ವದ ಸರಕಾರ ದೇಶವನ್ನು ಆರ್ಥಿಕ ನಾಶದತ್ತ ತಳ್ಳಿದೆ. ಕೋಟ್ಯಂತರ ಉದ್ಯೋಗಗಳು ನಾಶವಾಗುತ್ತಿವೆ. ನಮ್ಮ ಪೀಣ್ಯದಲ್ಲೆ 10ಲಕ್ಷ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ನೋಟು ರದ್ಧತಿ, ಜಿಎಸ್‌ಟಿಯಂತಹ ಕ್ರಮಗಳು ಸಣ್ಣ ಮಧ್ಯಮ ಗಾತ್ರದ ಉದ್ಯಮಗಳನ್ನೆಲ್ಲ ನಾಶ ಮಾಡಿ ಅಂಬಾನಿ, ಆದಾನಿಯಂತಹ ದೈತ್ಯ ಏಕಸ್ವಾಮ್ಯ ಉದ್ಯಮಪತಿಗಳನ್ನು ಬೆಳೆಸಲಾಗುತ್ತಿದೆ.

ಬ್ಯಾಂಕುಗಳು, ಬಿಎಸ್‌ಎನ್‌ಎಲ್, ರೈಲ್ವೆಯಂತಹ ಉದ್ಯಮಗಳೆಲ್ಲಾ ನೆಲಕಚ್ಚುತ್ತಿವೆ. ದೊಡ್ಡ ಬಿಕ್ಕಟ್ಟು ಎದುರಾಗಿದೆ. ಜನರ ಪ್ರತಿರೋಧ ಬೆಳೆಯುತ್ತಿದೆ. ಪ್ರತಿರೋಧದ ಧ್ವನಿಯನ್ನು ನಿರ್ದಯವಾಗಿ ಹತ್ತಿಕ್ಕಲಾಗುತ್ತಿದೆ. ದೇಶಪ್ರೇಮದ ಹೆಸರಿನಲ್ಲಿ ಭದ್ರತೆ ಹೆಸರಿನಲ್ಲಿ ಅಂಧಾಭಿಮಾನವನ್ನು ಬೆಳೆಸಿ, ಜನರ ಆಲೋಚನೆ-ತಾರ್ಕಿಕ ಶಕ್ತಿಯನ್ನೆ ನಾಶ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಎಐಡಿಎಸ್‌ಓ ಪ್ರಧಾನ ಕಾರ್ಯದರ್ಶಿ ಅಶೋಕ ಮಿಶ್ರಾ ಮಾತನಾಡಿ, ಕಸ್ತೂರಿ ರಂಗನ್ ಶಿಫಾರಸ್ಸಿನ ರಾಷ್ಟ್ರೀಯ ಶಿಕ್ಷಣ ನೀತಿ 2019 ಕರಡು ಶಿಕ್ಷಣವನ್ನು ಸರ್ವನಾಶಗೈಯ್ಯುವ ನೀಲನಕ್ಷೆಯೆಂದು ತೋರಿಸಿಕೊಡುತ್ತದೆ. ವಿಜ್ಞಾನ-ಕಲೆಯ ಕಲಿಕೆಯನ್ನು ಶಾಲಾ ಶಿಕ್ಷಣದಿಂದ ಬೇರ್ಪಡಿಸುವ, ಐಚ್ಛಿಕಗೊಳಿಸುವ, ಹಿಂದಿ ಹೇರಿಕೆ ಮೂಲಕ ಐಕ್ಯತೆ ಮುರಿಯುವ, ಜನತಾಂತ್ರಿಕ ಪ್ರಕ್ರಿಯೆಯನ್ನೇ ನಾಶ ಮಾಡಲು ಮುಂದಾಗಿದೆ ಎಂದು ದೂರಿದರು.

ನೂತನ ಸಮಿತಿ ಆಯ್ಕೆ: ಕೆ.ಎಸ್.ಅಶ್ವಿನಿ-ರಾಜ್ಯಾಧ್ಯಕ್ಷೆ, ಮಹೇಶ್, ಹನುಮಂತು, ಗೋವಿಂದ ಹಾಗೂ ಕುಮಾರ್ ಚಿತ್ರದುರ್ಗ-ಉಪಾಧ್ಯಕ್ಷಗಳು, ಅಜಯ್ ಕಾಮತ್- ರಾಜ್ಯ ಕಾರ್ಯದರ್ಶಿ, ಅಭಯಾ-ಖಜಾಂಚಿ, ಸಿತಾರಾ, ರಾಜೇಶ್, ರೋಷನ್, ಸುಭಾಷ್, ಸುರೇಶ್, ಈರಣ್ಣ, ಸ್ನೇಹ, ಮಹಾಂತೇಶ ಮತ್ತು ಚಂದ್ರಕಲಾ ಅವರನ್ನು ಕಾರ್ಯದರ್ಶಿ ಸದಸ್ಯರುಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News