×
Ad

ಸಾಂಸ್ಕೃತಿಕ ನೀತಿ ಶೀಘ್ರ ಅನುಷ್ಠಾನಗೊಳ್ಳಲಿ: ಪ್ರೊ.ಬರಗೂರು ರಾಮಚಂದ್ರಪ್ಪ

Update: 2019-08-26 23:33 IST

ಬೆಂಗಳೂರು, ಆ.26: ರಾಜ್ಯದಲ್ಲಿ ಸಾಂಸ್ಕೃತಿಕ ನೀತಿ ಜಾರಿಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದರೂ, ಇದುವರೆಗೂ ಅದನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ನಿರಾಸಕ್ತಿ ತಾಳಿರುವುದು ದುರಂತ ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದ ನಯನ ಸಭಾಂಗಣದಲ್ಲಿ ಪದ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ‘ರಂಗಶ್ರಾವಣ ರಂಗೋತ್ಸವ’ ಮತ್ತು ಡಾ.ನರಸಿಂಹಮೂರ್ತಿ ಹೂವಿನಹಳ್ಳಿಯವರ ರಚಿಸಿರುವ ‘ಬೆಂಕಿಸುಳಿ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾನು ನೀಡಿದ ಸಾಂಸ್ಕೃತಿಕ ನೀತಿಯನ್ನು ಸಂಪುಟದಲ್ಲಿ ಮಂಡಿಸಿ 27 ಶಿಫಾರಸ್ಸುಗಳನ್ನು ಅನುಷ್ಠಾನ ಮಾಡಲು ಒಪ್ಪಿಕೊಂಡಿತ್ತು. ಅಲ್ಲದೆ, 2017 ರಲ್ಲಿಯೇ ಗೆಜೆಟೆಡ್ ನೋಟಿಫಿಕೇಷನ್ ಹೊರಡಿಸಲಾಗಿದೆ. ಆದರೆ, ಇದುವರೆಗೂ ಅಧಿಕಾರಿಗಳು ಅದನ್ನು ಜಾರಿ ಮಾಡುವಲ್ಲಿ ಸೋತಿದ್ದಾರೆ ಎಂದರು.

ಸಣ್ಣ ಸಣ್ಣ ಸಂಸ್ಥೆಗಳಿಗೆ ಅನುದಾನ ಸಿಗಬೇಕಿದೆ. ಅದಕ್ಕಾಗಿ ಎಲ್ಲರೂ ಸಂಘಟಿತರಾಗಿ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡು ಸರಕಾರದ ಮೇಲೆ ಒತ್ತಡ ಹೇರಬೇಕು. ಆಗಷ್ಟೇ ಸಾಂಸ್ಕೃತಿಕ ಸ್ವಾಯತ್ತತೆ ಉಳಿಯುತ್ತದೆ. ಪೇಪರ್ ರಹಿತ ಕಚೇರಿ ಮಾಡುತ್ತೇನೆ ಎನ್ನುತ್ತಾರೆ. ಆದರೆ, ಹೊಸ ತಂತ್ರಜ್ಞಾನ ಬಳಕೆ ಮಾಡುವುದು ಮಹಾಸಾಧನೆ ಎಂಬ ಭ್ರಮೆಯಲ್ಲಿದಾರೆ ಎಂದು ಅವರು ವ್ಯಂಗ್ಯವಾಡಿದರು.

ಮಾನದಂಡ ರೂಪಿಸಲಿ: ಕನ್ನಡ ಸಂಸ್ಕೃತಿ ಇಲಾಖೆಯು ನಕಲಿ ಸಂಸ್ಥೆಗಳಿವೆ ಎಂದು ಅಸಲಿ ಸಂಸ್ಥೆಗಳಿಗೆ ಅನುದಾನ ನೀಡದಿರುವುದು ಸರಿಯಾದ ಕ್ರಮ ಅಲ್ಲ. ಇದು ಈ ಇಲಾಖೆಗೆ ಗೌರವ ತರುವಂತಹದ್ದೂ ಅಲ್ಲ. ನಕಲಿ ಸಂಸ್ಥೆಗಳನ್ನು ಪತ್ತೆ ಹಚ್ಚಿ ಅವುಗಳಿಗೆ ಅನುದಾನ ಬಿಡುಗಡೆ ಮಾಡುವುದಕ್ಕೆ ಕಡಿವಾಣ ಹಾಕಬೇಕು. ನಕಲಿ ಸಂಸ್ಥೆಗಳನ್ನು ಪತ್ತೆ ಹಚ್ಚುವುದು ಹೇಗೆ? ಎಂಬುದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನ ಪಡೆಯುವ ಸಂಸ್ಥೆಯಿಂದ ಅನುದಾನ ಪಡೆಯುವ ಸಂಸ್ಥೆಗಳಿಗೆ ಅನುದಾನ ನೀಡಲು ಆಯಾ ಕ್ಷೇತ್ರ(ಸಾಹಿತ್ಯ, ಸಂಗೀತ ಮತ್ತು ನಾಟಕ)ದ ತಜ್ಞರ ಸಮಿತಿ ತೀರ್ಮಾನವೇ ಅಂತಿಮ ತೀರ್ಮಾನ ಎಂಬುದಾಗಿ ಆಶಿಸಬೇಕು. ಆಗ ಇಲಾಖೆವಾರು ನೌಕರರ ಮಧ್ಯಪ್ರವೇಶ ತಪ್ಪಲಿದ್ದು, ನಕಲಿ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡುವುದು ತಪ್ಪಲಿದೆ ಎಂದು ತಿಳಿಸಿದರು.

ಏಕಚಕ್ರಾಧಿಪತ್ಯೆಕ್ಕೆ ಮತ: ವಿವೇಕಕ್ಕೆ ವಿದ್ಯೆ ಮಾನದಂಡ ಅಲ್ಲ. ವಿದ್ಯಾವಂತಿಕೆ ಎನ್ನುವುದು ಅರಿವಿನ ಬಾಗಿಲು ತೆರೆದಂತೆ. ಅದನ್ನು ಹೇಗೆ ಗ್ರಹಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಸಮಾಜದಲ್ಲಿ ವಿದ್ಯಾವಂತರು ಹೆಚ್ಚಾದಂತೆ ಜಾತೀಯತೆಯೂ ಮತ್ತಷ್ಟು ಉಲ್ಬಣಿಸುತ್ತಿದೆ. ಧಾರ್ಮಿಕ ಸಂಘರ್ಷಗಳು ಹೆಚ್ಚಾಗತೊಡಗಿವೆ. ಏಕ ಚಕ್ರಾಧಿಪತ್ಯಕ್ಕೆ ಮತ ನೀಡಲು ಮುಂದಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಜೆ.ಹುಚ್ಚಪ್ಪ, ಸಾಹಿತಿಗಳಾದ ಡಾ. ಸುಕನ್ಯಾ ಮಾರುತಿ, ಡಾ. ಕಾ.ವೆಂ.ಶ್ರೀನಿವಾಸಮೂರ್ತಿ, ಪದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದೇವರಾಜ್ ಸೇರಿದಂತೆ ಹಲವರಿದ್ದರು.

ಮಾಜಿ ಪ್ರಧಾನಿ ನೆಹರು ಅವರು ವೈಜ್ಞಾನಿಕ ಮನೋಧರ್ಮ ಹೊಂದಿದ್ದ ವ್ಯಕ್ತಿ. ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ವೇಳೆ ಅಕಾಡೆಮಿಯ ಸದಸ್ಯರಿಗೆ ಟೀಕೆ ಮಾಡುವ, ಪ್ರಶ್ನಿಸುವ ಸ್ವಾಯತ್ತತೆಯನ್ನು ನೀಡಿದ್ದರು. ಆದರೆ, ಕೆಲವರು ನೆಹರು ಅವರನ್ನು ಟೀಕಿಸುವ ಭರದಲ್ಲಿ ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ.

-ಪ್ರೊ.ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News