ಪ್ಲಾಸ್ಟಿಕ್ ನಿಷೇಧ ಹಿನ್ನೆಲೆ: ಆನ್‌ಲೈನ್ ಮಾರಾಟಗಾರರ ಮೇಲೆ ಪಾಲಿಕೆ ಕಣ್ಣು

Update: 2019-08-26 18:19 GMT

ಬೆಂಗಳೂರು, ಆ 26: ನಗರದಲ್ಲಿ ಪ್ಲಾಸ್ಟಿಕ್ ನಿಷೇಧದ ಮುಂದುವರೆದ ಭಾಗವಾಗಿ ಆನ್‌ಲೈನ್‌ಗಳು ಗ್ರಾಹಕರಿಗೆ ಪೂರೈಸುವ ಪ್ಲಾಸ್ಟಿಕ್‌ಗಳ ಮೇಲೂ ಬಿಬಿಎಂಪಿ ಕಣ್ಣಿಟ್ಟಿದೆ. ಆನ್‌ಲೈನ್ ಮೂಲಕ ದಿನಬಳಕೆ ಆಹಾರ ಧಾನ್ಯಗಳನ್ನು ಗ್ರಾಹಕರಿಗೆ ಪೂರೈಸುವ ಅಂಟಿಕೊಳ್ಳುವ ಪ್ಲಾಸ್ಟಿಕ್‌ನಲ್ಲಿ ಸುತ್ತಿ ಕಳುಹಿಸದಂತೆ ಬಿಬಿಎಂಪಿ ನಿಷೇಧ ಹೇರಿದೆ. ಇಂತಹ ಪ್ಲಾಸ್ಟಿಕ್‌ನಲ್ಲಿ ಗ್ರಾಹಕರಿಗೆ ಆಹಾರ ಧಾನ್ಯಗಳನ್ನು ಆನ್‌ಲೈನ್ ಮೂಲಕ ಕಳಿಸಿದ್ದಲ್ಲಿ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ.

ಪ್ರಮುಖ ಆನ್‌ಲೈನ್ ಕಂಪನಿ ಬಿಗ್ ಬ್ಯಾಸ್ಕೆಟ್‌ಗೆ ಸೂಚನೆ ನೀಡಿದೆ. ಬಿಗ್ ಬ್ಯಾಸ್ಕೆಟ್ ಕಂಪನಿಯು ದಪ್ಪಗಿನ ಪ್ಲಾಸ್ಟಿಕ್ ಆಹಾರ ವಸ್ತುಗಳನ್ನು ಸುರಕ್ಷಿತವಾಗಿಡುವುದಿಲ್ಲ. ಹಾಗಾಗಿ ತೆಳ್ಳನೆಯ ಅಂಟಿಕೊಳ್ಳಬಹುದಾದ ಪ್ಲಾಸ್ಟಿಕ್ ಅನ್ನು ಬಳಸುತ್ತಿದೆ. ಸೆಪ್ಟೆಂಬರ್ 1 ರಿಂದ ಬಿಗ್ ಬ್ಯಾಸ್ಕೆಟ್ ಕಂಪನಿಯು ಗ್ರಾಹಕರಿಗೆ ಇಂತಹ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು. ಒಂದು ವೇಳೆ ಬಳಕೆಯನ್ನು ಮುಂದುವರೆಸಿದರೆ ದಂಡ, ಇಲ್ಲವೇ ಟ್ರೇಡ್ ಲೈಸೆನ್ಸ್ ಅಥವಾ ಅಂತಹ ಅಂಗಡಿಗಳನ್ನು ಮುಚ್ಚಬೇಕಾಗುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆನ್‌ಲೈನ್‌ನ ಅಧಿಕಾರಿಗಳು, ಈ ಸಂಬಂಧ ಸಂಬಂಧಿಸಿದ ಸಿಬ್ಬಂದಿಗೆ ಸೂಚನೆ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಸೆಪ್ಟೆಂಬರ್‌ನಿಂದ ಪ್ಲಾಸ್ಟಿಕ್ ನಿಷೇಧ ಜಾರಿಗೆ ಬರಲಿದ್ದು, ಪದೇ ಪದೇ ನಿಯಮ ಉಲ್ಲಂಘಿಸಿದಲ್ಲಿ ಮೊದಲಿನ ಮೊತ್ತಕ್ಕಿಂತ ಐದು ಪಟ್ಟು ದಂಡ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ. ಸೆಪ್ಟೆಂಬರ್‌ನಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಉತ್ಪಾದಿಸುವ ಮಾರಾಟ ಮಾಡುವ ಮಳಿಗೆಗಳ ಮೇಲೆ ದಾಳಿ ಮಾಡುವ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News