ಇವರಿಗೂ ಉದ್ಯೋಗ ಭದ್ರತೆ ಸಿಗಲಿ

Update: 2019-08-26 19:28 GMT

ಮಾನ್ಯರೇ,

ರಾಜ್ಯದಲ್ಲಿ ಸರಕಾರಿ ನೌಕರರಿಂದ ಹಿಡಿದು ಅಸಂಘಟಿತ ಕಾರ್ಮಿಕರವರೆಗೂ ಅವರ ಉದ್ಯೋಗಕ್ಕೆ ಸಾಕಷ್ಟು ಭದ್ರತೆಗಳಿವೆ. ಆದರೆ, ದೇಶದಲ್ಲಿ ಮಾಹಿತಿ ತಂತ್ರಜ್ಞಾನದ ಸಂಸ್ಥೆಗಳಲ್ಲಿ ದುಡಿಯುವ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಯಾವುದೇ ರೀತಿಯ ಉದ್ಯೋಗ ಭದ್ರತೆ ಇಲ್ಲ. ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಸಂದರ್ಭದಲ್ಲಿ ಹತ್ತಾರು ಷರತ್ತುಗಳನ್ನು ವಿಧಿಸುವ ಈ ಸಂಸ್ಥೆಗಳು ಅವರನ್ನು ಹೇಳದೇ ಕೇಳದೇ ರಾತ್ರೋ ರಾತ್ರಿ ಉದ್ಯೋಗದಿಂದ ಕಿತ್ತುಹಾಕುತ್ತಾರೆ, ಇಲ್ಲವೇ ಕಡಿಮೆ ಸಂಬಳವನ್ನು ನಿಗದಿಪಡಿಸುತ್ತಾರೆ. ಒತ್ತಾಯಪೂರ್ವಕವಾಗಿ ರಜೆ ಮೇಲೆ ಹೋಗಲು ಆದೇಶ ನೀಡುತ್ತಾರೆ. ಹೀಗಾಗಿ ಈ ಉದ್ಯೋಗಿಗಳಿಗೆ ಯಾವ ಭದ್ರತೆಯೂ ಇಲ್ಲ. ಲಕ್ಷಾಂತರ ರೂಪಾಯಿಗಳ ಸಂಬಳದ ಹಿನ್ನೆಲೆಯಲ್ಲಿ ಸಂಬಳಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಸಾಲವನ್ನು ಬಹಳಷ್ಟು ಮಂದಿ ಮಾಡಿಕೊಂಡಿರುತ್ತಾರೆ. ಮನೆ ಖರೀದಿಸಲು, ವಾಹನ ಖರೀದಿಸಲು, ಮಕ್ಕಳ ವಿದ್ಯಾಭ್ಯಾಸಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲವನ್ನು ಪಡೆದುಕೊಂಡಿರುತ್ತಾರೆ. ಇದ್ದಕ್ಕಿದ್ದ ಹಾಗೆ ಇವರನ್ನು ಕೆಲಸದಿಂದ ತೆಗೆದು ಹಾಕಿದರೆ, ಇವರು ಎಲ್ಲಿಗೆ ಹೋಗಬೇಕು. ಇಂತಹ ಸಂದರ್ಭಗಳಲ್ಲಿ ಇವರು ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಅಪಾಯದ ಮಾರ್ಗವನ್ನು ಹಿಡಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಕಾರ್ಮಿಕ ಸಚಿವರು ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಒಂದಷ್ಟು ಭದ್ರತೆಯನ್ನು ನೀಡಬಹುದಾದಂತಹ ಕಾನೂನನ್ನು ರೂಪಿಸಬೇಕಾಗಿ ಕೇಂದ್ರ ಸರಕಾರದಲ್ಲಿ ಕೋರಬೇಕಾಗಿದೆ. ವಿಶೇಷವಾಗಿ ಬೆಂಗಳೂರು ನಗರದ ಲೋಕಸಭಾ ಸದಸ್ಯರು ಈ ನಿಟ್ಟಿನಲ್ಲಿ ಹೆಚ್ಚು ಗಮನವನ್ನು ಹರಿಸಬೇಕಾಗಿದೆ. ಏಕೆಂದರೆ, ಬೆಂಗಳೂರು ನಗರ ವಿಶ್ವದ ಮಾಹಿತಿ ತಂತ್ರಜ್ಞಾನದ ತವರುಮನೆ ಎಂಬ ಕೀರ್ತಿ ಇರುವುದರಿಂದ, ಬಹುತೇಕ ಕಂಪೆನಿಗಳು ಬೆಂಗಳೂರಿನಲ್ಲಿ ನೆಲೆಸಿವೆ.

-ಕೆ.ಎಸ್. ನಾಗರಾಜ್, ಹನುಮಂತನಗರ, ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News