ಎ.ಕೆ.ಸುಬ್ಬಯ್ಯನವರ ಪರಿಚಯ

Update: 2019-08-27 11:14 GMT

ಅಜ್ಜಿಕುಟೀರ ಕಾರ್ಯಪ್ಪ ಸುಬ್ಬಯ್ಯ ರಾಜಪೇಟೆ ತಾಲ್ಲೂಕಿನ ಕೋಣಗೇರಿ 1934 ಆ.8ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣ ವಿರಾಜಪೇಟೆಯಲ್ಲಿ, ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಪದವಿ, ಕಾನೂನು ಪದವಿ ಮುಗಿಸಿ 1963ರಿಂದ ವಕೀಲ ವೃತ್ತಿ ಆರಂಭಿಸಿದರು.

ನಂತರ ಜನಸಂಘದಿಂದ ರಾಜಕಾರಣಕ್ಕೆ ಕಾಲಿಟ್ಟರು. 1968 ಮತ್ತು 1974 ರಲ್ಲಿ ಮೈಸೂರು, ಕೊಡಗು ಮತ್ತು ಮಂಗಳೂರು ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸಿ, ಎರಡು ಬಾರಿ ಆಯ್ಕೆಯಾಗಿ ವಿಧಾನ ಪರಿಷತ್ ಪ್ರವೇಶಿಸಿದ ಸುಬ್ಬಯ್ಯನವರು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 18 ತಿಂಗಳು ಜೈಲು ವಾಸ ಅನುಭವಿಸಿದ್ದರು.

1980ರಲ್ಲಿ ಭಾರತೀಯ ಜನತಾ ಪಕ್ಷದಿಂದ ಮತ್ತೊಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. 

ಆ ನಂತರ ಬಿಜೆಪಿಯ ಮುಂಚೂಣಿ ನಾಯಕರಾಗಿ, ಕರ್ನಾಟಕದ ಬಿಜೆಪಿ ಎಂದರೆ ಸುಬ್ಬಯ್ಯ ಎಂಬಂತಾಗಿ ಇಡೀ ಕರ್ನಾಟಕವನ್ನು ಸುತ್ತಿ, ಯುವಕರನ್ನು ಗುರುತಿಸಿ, ಕಾರ್ಯಕರ್ತರನ್ನು ಸಂಘಟಿಸಿದರು. 1983-84ರಲ್ಲಿ ಬಿಜೆಪಿಯಿಂದ ಉಚ್ಚಾಟನೆಗೊಂಡರು. 1984ರಲ್ಲಿ ’ಕನ್ನಡ ನಾಡು’ ಎಂಬ ಪ್ರಾದೇಶಿಕ ಪಕ್ಷ ಹುಟ್ಟುಹಾಕಿದರು. ‘ಆರೆಸ್ಸೆಸ್ ಅಂತರಂಗ’ ಎಂಬ ಪುಸ್ತಕ ಬರೆದರು. ನಂತರ ಕಾಂಗ್ರೆಸ್ ಸೇರಿ 1988 ರಲ್ಲಿ ಮತ್ತೊಂದು ಬಾರಿ ವಿಧಾನ ಪರಿಷತ್ ಸದಸ್ಯರಾದರು. ಹೀಗೆ ನಾಲ್ಕು ಬಾರಿ ಎಂಎಲ್‌ಸಿಯಾಗಿದ್ದ ಸುಬ್ಬಯ್ಯನವರು, ಶಾಸನ ಸಭೆಯನ್ನು, ರಾಜಕಾರಣಿಗಳನ್ನು ಎಚ್ಚರದ ಸ್ಥಿತಿಯಲ್ಲಿಟ್ಟವರು. ಸುಬ್ಬಯ್ಯನವರ ತರ್ಕಬದ್ಧ ವಿಚಾರ ಮಂಡನೆ ಮತ್ತು ಸಂಸದೀಯ ನಡವಳಿಕೆ ಶಾಸನ ಸಭೆಗೇ ಘನತೆ ಗೌರವ ತರುವಂಥದ್ದು.

ವ್ಯವಸ್ಥೆಯ ವಿರುದ್ಧ ಬಂಡೇಳುವ ಗುಣವೇ ಎ.ಕೆ. ಸುಬ್ಬಯ್ಯನವರನ್ನು ಹತ್ತು ಹಲವು ಅವಕಾಶಗಳಿಂದ, ಅಧಿಕಾರ ಸ್ಥಾನಗಳಿಂದ ವಂಚಿತರಾಗುವಂತೆ ಮಾಡಿದೆ. ಅನ್ಯಾಯ ಕಂಡಾಕ್ಷಣ ಉರಿದು ಬೀಳುವ ಅವರ ನೇರ, ನಿಖರ, ನಿಷ್ಠುರ ಮಾತುಗಳಿಂದ ಹಲವರ ಅವಕೃಪೆಗೆ ಗುರಿಯಾದದ್ದೂ ಇದೆ. ಆದರೆ ಅವರ ಈ ಗುಣವೇ ಅವರನ್ನು ‘ಕರ್ನಾಟಕದ ಫೈರ್ ಬ್ರಾಂಡ್’ ಎಂಬ ಖ್ಯಾತಿಗೆ ಕಾರಣವಾಗಿದೆ.

ಇಂತಹ ಸುಬ್ಬಯ್ಯನವರು ಎಲ್ಲ ಪಕ್ಷಗಳಿಗೂ ಒಂದು ಸುತ್ತು ಬಂದು, ಸದ್ಯದ ರಾಜಕಾರಣದಿಂದ ದೂರ ಸರಿದು, ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಜನಪರ ಹೋರಾಟಗಳೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಜಾತ್ಯತೀತ, ವರ್ಗರಹಿತ ಸಮಾಜ ನಿರ್ಮಾಣದ ಆಶಯಗಳನ್ನಿಟ್ಟುಕೊಂಡಿದ್ದ ಸುಬ್ಬಯ್ಯನವರು ಮಾನವ ಹಕ್ಕುಗಳ ಹೋರಾಟಗಳಿಗೆ ನಿರಂತರ ದನಿಯಾಗಿದ್ದರು. ಬಡವರು, ಅಸಹಾಯಕರು, ಮಹಿಳೆಯರ ಸಮಸ್ಯೆ-ಸಂಕಟಗಳಿಗೆ ಸ್ಪಂದಿಸುತ್ತಾ, ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕಾನೂನು ಹೋರಾಟಗಳ ಮೂಲಕ ಮನೆ ಮಾತಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News