ಎ.ಕೆ.ಸುಬ್ಬಯ್ಯ ಹೋರಾಟದ ದಿನಗಳು ಅವಿಸ್ಮರಣೀಯ: ಸಚಿವ ಸುರೇಶ್ ಕುಮಾರ್

Update: 2019-08-27 14:44 GMT

ಬೆಂಗಳೂರು, ಆ.27: ಒಂದು ಕಾಲದ ನಮ್ಮೆಲ್ಲರ ‘ಹೀರೋ’ ಎ.ಕೆ.ಸುಬ್ಬಯ್ಯ ಇನ್ನಿಲ್ಲವೆಂಬ ಸುದ್ದಿ ಕೇಳಿ ದುಃಖವಾಯಿತು. ಭಾರತೀಯ ಜನತಾಪಕ್ಷ 1980ರಲ್ಲಿ ಪ್ರಾರಂಭವಾದಾಗ ನಮ್ಮ ಅಧ್ಯಕ್ಷರಾಗಿದ್ದ ಸುಬ್ಬಯ್ಯನವರು 1983ರ ನಂತರ ನಮ್ಮಿಂದ ಸೈದ್ಧಾಂತಿಕವಾಗಿ ದೂರವಾದರೂ, ಸೈದ್ಧಾಂತಿಕವಾಗಿ ತೀವ್ರ ವಿರೋಧಿಯಾದರೂ, ಅವರ ಆ ಹೋರಾಟದ ದಿನಗಳನ್ನು ನಾನು ಮರೆಯಲಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ಇಬ್ರಾಹೀಮ್‌ರವರ ರೋಲೆಕ್ಸ್ ವಾಚ್ ಪ್ರಕರಣ, ರೇವಜೀತು ಪ್ರಕರಣ, ಬಾಟ್ಲಿಂಗ್ ಪ್ರಕರಣ ಇತ್ಯಾದಿಗಳ ಸಂದರ್ಭದಲ್ಲಿ ಸುಬ್ಬಯ್ಯನವರ ಘರ್ಜನೆ ಮರೆಯಲಾರದ್ದಂತಹದ್ದು ಎಂದು ಹೇಳಿದ್ದಾರೆ.

ವಿಧಾನಪರಿಷತ್ತಿನಲ್ಲಿ ಸುಬ್ಬಯ್ಯನವರು ಎದ್ದು ಮಾತನಾಡುತ್ತಾರೆಂದರೆ ಇಡೀ ಸದನ ನಿಶ್ಯಬ್ದವಾಗಿ ಆಲಿಸುತ್ತಿತ್ತು. ಅವರ ಆಳವಾದ ಅಧ್ಯಯನದಿಂದ ಕೂಡಿದ ಭಾಷಣಗಳು ಇನ್ನೂ ನೆನಪಿನಲ್ಲಿವೆ. ಅಂದಿನ ದಿನಗಳಲ್ಲಿ ಬೆಂಗಳೂರು ಮಹಾನಗರಪಾಲಿಕೆಯ ಸದಸ್ಯನಾಗಿದ್ದ ನಾನು ಅವರ ಭಾಷಣ ಕೇಳಲೆಂದೇ ವಿಧಾನ ಪರಿಷತ್ತಿಗೆ ಹೋಗಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತುಕೊಳ್ಳುತ್ತಿದ್ದೆ ಎಂದು ಅವರು ತಿಳಿಸಿದ್ದಾರೆ. ಹೈಕೋರ್ಟಿನಲ್ಲಿ ಪ್ರಸಿದ್ದ ವಕೀಲ ಜೇಠ್ಮಲಾನಿ ಹಾಗೂ ಸುಬ್ಬಯ್ಯನವರ ನಡುವಿನ ಮಾತಿನ ಚಕಮಕಿ ಮರೆಯಲಾರದಂತಹದ್ದು. ಒಮ್ಮೆ ಜೇಠ್ಮಲಾನಿ ಬಾಯ್ತಪ್ಪಿ‘ಮಿ.ಸಬ್ಬಯ್ಯ’ ಎಂದುಬಿಟ್ಟರು, ಸುಬ್ಬಯ್ಯ ಎನ್ನುವ ಬದಲಿಗೆ. ಆಗ ತಕ್ಷಣ ಸುಬ್ಬಯ್ಯ ಪ್ರತಿಕ್ರಿಯಿಸಿದ್ದು ‘ಐ ಕ್ಯಾನ್ ಆಲ್‌ಸೋ ಕಾಲ್ ಯೂ ಜೂಠ್ಮಲಾನಿ’ ಎಂದು.

ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರ ಮನೆಗೆ ಹೋಗಿ ಅವರ ಆರೋಗ್ಯ ವಿಚಾರಿಸಿದ್ದೆ. ಅವರ ಸೈದ್ಧಾಂತಿಕ ಬದಲಾವಣೆ ಅವರನ್ನು ನಮ್ಮಿಂದ ದೂರ ಕರೆದೊಯ್ಯಿತು. ಈ ಇಳಿ ವಯಸ್ಸಿನಲ್ಲಿಯೂ ಅವರ ಛಲ ಕಡಿಮೆಯಾಗಿರಲಿಲ್ಲ. ಸುಬ್ಬಯ್ಯ ಎಂದರೆ ಎ.ಕೆ.ಸುಬ್ಬಯ್ಯನವರೇ. ಅಂತಹ ಸುಬ್ಬಯ್ಯನವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಸುರೇಶ್ ಕುಮಾರ್ ಪ್ರಾರ್ಥಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News