ಬಿಜೆಪಿ ಆರು ತಿಂಗಳಿದ್ದರೂ ರಾಜ್ಯಕ್ಕೆ ಸಂಕಷ್ಟ: ದಿನೇಶ್‌ ಗುಂಡೂರಾವ್

Update: 2019-08-27 14:46 GMT

ಬೆಂಗಳೂರು, ಆ.17: ಜಲಪ್ರವಾಹಕ್ಕೆ ಸಿಲುಕಿ ರಾಜ್ಯದ ಅರ್ಧಭಾಗದ ಜನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ, ಬಿಜೆಪಿಗೆ ಇದ್ಯಾವುದರ ಪರಿವೇ ಇಲ್ಲದೆ ಸಚಿವ, ಉಪಮುಖ್ಯಮಂತ್ರಿ ಸ್ಥಾನದಲ್ಲಿ ಸಿಲುಕಿ ಹೆಣಗಾಡುತ್ತಿದೆ. ಈ ಸರಕಾರ ಆರು ತಿಂಗಳು ಇದ್ದರೂ ರಾಜ್ಯ ಮತ್ತಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ಆತಂಕ ವ್ಯಕ್ತಪಡಿಸಿದರು.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದ ದಾಹಕ್ಕಾಗಿ ಸಾವಿರಾರು ಕೋಟಿ ರೂ. ವ್ಯಯಮಾಡಿ ಆಪರೇಷನ್ ಕಮಲವನ್ನು ಯಶಸ್ವಿಗೊಳಿಸಿದರು. ಆ ಮೂಲಕ ಅಧಿಕಾರಕ್ಕೇರಿರುವ ಬಿಜೆಪಿಯಲ್ಲಿ ಈಗ ಸಚಿವ, ಉಪಮುಖ್ಯಮಂತ್ರಿಗಳ ಮಟ್ಟದಲ್ಲಿ ಅತೃಪ್ತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ರಾಜ್ಯದ ಯಾವುದೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಸ್ವತಂತ್ರವಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗದ ಮಟ್ಟಕ್ಕೆ ಬಿಜೆಪಿ ವರಿಷ್ಠರು ರಾಜ್ಯದ ಮೇಲೆ ಹಿಡಿತ ಸಾಧಿಸಿದ್ದಾರೆ. ಹೀಗಾಗಿಯೇ ಸಚಿವ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನಗಳಿಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿಯೇ ಅತೃಪ್ತತೆ ಕಾಡುತ್ತದೆ. ಹೀಗಾಗಿ ಮಧ್ಯಂತರ ಚುನಾವಣೆ ಬಂದರೆ ಒಳಿತೆಂದು ಅವರು ಅಭಿಪ್ರಾಯಿಸಿದರು.

ಆ.29ರಂದು ಬಿಜೆಪಿ ವಿರುದ್ಧ ಧರಣಿ ಸತ್ಯಾಗ್ರಹ

ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಹಾಗೂ ಪರಿಹಾರ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ರೂಪಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ಸಂಪೂರ್ಣವಾಗಿ ವಿಫಲವಾಗಿರುವುದನ್ನು ಖಂಡಿಸಿ ಆ.29ರಂದು ನಗರದ ಆನಂದರಾವ್ ವೃತ್ತದಲ್ಲಿರುವ ಗಾಂಧೀ ಪ್ರತಿಮೆ ಮುಂಭಾಗ ಧರಣಿ ಸತ್ಯಾಗ್ರಹವನ್ನು ನಡೆಸಲು ನಿರ್ಧರಿಸಲಾಗಿದೆ.

ಕಾಂಗ್ರೆಸ್ ಮಾಜಿ ಸಚಿವರು ಹಾಗೂ ಶಾಸಕರು ಈಗಾಗಲೇ ಪ್ರವಾಹ ಪೀಡಿತ ಜಿಲ್ಲೆಗಳಿಗೆ ತೆರಳಿ ಜನತೆಯ ಅಹವಾಲುಗಳನ್ನು ಕ್ರೋಡೀಕರಿಸಲಾಗಿದೆ. ಇದನ್ನು ರಾಜ್ಯ ಪಾಲರಿಗೆ ನೀಡಲಾಗುವುದು ಹಾಗೂ ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನಿ ಭೇಟಿ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಮನವಿ ಮಾಡಿಕೊಳ್ಳಲಿದ್ದೇವೆ. ಇದಕ್ಕೆ ಒಪ್ಪದಿದ್ದರೆ, ಕಾಂಗ್ರೆಸ್ ನಾಯಕರೇ ದೆಹಲಿಯ ಜಂತರ್‌ಮಂತರ್‌ನಲ್ಲಿ ಧರಣಿಗೆ ಮುಂದಾಗುತ್ತೇವೆ.

-ದಿನೇಶ್‌ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News