ಬೆಂಗಳೂರು ಗ್ರಾಮಾಂತರ ಕೆರೆಗಳಿಗೆ ಸಂಸ್ಕರಿಸಿದ ನೀರು: ಮಾಜಿ ಸಚಿವ ಕೃಷ್ಣಬೈರೇಗೌಡ

Update: 2019-08-27 16:59 GMT

ಬೆಂಗಳೂರು, ಆ.27: ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ದೊಡ್ಡಜಾಲ ಕೆರೆ ಸೇರಿದಂತೆ ಇಲ್ಲಿನ ಸುತ್ತಮತ್ತಲ ಕೆರೆಗಳಿಗೆ ನಗರದ ಕೊಳಚೆ ನೀರನ್ನು ಸಂಸ್ಕರಿಸಿ ತುಂಬಿಸುವ ಕಾರ್ಯಕ್ಕೆ ಈಗಾಗಲೆ ಚಾಲನೆ ನೀಡಲಾಗಿದೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ನಗರದ ಜಾಲ ಹೋಬಳಿಯ ದೊಡ್ಡಜಾಲ ಕೆರೆಯನ್ನು ಪರಿಶೀಲಿಸಿ ಮಾತನಾಡಿದ ಅವರು, ಪ್ರಥಮ ಹಂತವಾಗಿ ಬಾಗಲೂರು ಕೆರೆಗೆ ಈಗಾಗಲೇ ಸಂಸ್ಕರಿಸಿದ ನೀರನ್ನು ತುಂಬಿಸಲಾಗಿದೆ. ಇನ್ನುಳಿದ ಕೆರೆಗಳಿಗೂ ನೀರು ತುಂಬಿಸುವ ಹಿನ್ನೆಲೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿರುವ ಈ ದಿನಗಳಲ್ಲಿ ಗ್ರಾಮೀಣ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಮಟ್ಟವನ್ನು ವೃದ್ಧಿಸಲು ಜಾಲ ಹೋಬಳಿಯ ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಿದ್ದೇವೆ. ಇದರಲ್ಲಿ ಈಗಾಗಲೇ ಬಾಗಲೂರು ಕೆರೆಯನ್ನು ತುಂಬಿಸಲಾಗಿದ್ದು, ಉಳಿದ ಕೆರೆಗಳಿಗೂ ನೀರು ತುಂಬಿಸಬೇಕಿದೆ, ಅದಕ್ಕೆ ಪೂರ್ವಭಾವಿಯಾಗಿ ಕೆರೆಗಳ ಸ್ಥಿತಿ ಪರಿಶೀಲಿಸಿ, ಕೆರೆಗಳ ಹೂಳು ಎತ್ತಿಸಿ, ಏರಿಗಳನ್ನು ಸುಭದ್ರಪಡಿಸುವ ಹಿನ್ನೆಲೆಯಲ್ಲಿ ಕೆರೆ ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.

ಗ್ರಾಮದ ಮುಖಂಡರ ಸಲಹೆ ಸಹ ಪಡೆದು, ಕೆರೆಗೆ ನೀರು ತುಂಬಿಸುವುದಕ್ಕೆ ಮುನ್ನ ಕೆರೆಯ ಹೂಳೆತ್ತಿಸಿ, ಕೆರೆಯಲ್ಲಿನ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ ಸಮತಟ್ಟು ಮಾಡಿ, ಕೆರೆಯ ಏರಿ ಸರಿಯಿಲ್ಲದಿದ್ದರೆ ಅದನ್ನು ಭದ್ರಗೊಳಿಸಿದರೆ ಕೆರೆಗೆ ಹೆಚ್ಚು ನೀರು ತುಂಬಿಸಬಹುದು. ಹಾಗೆಯೇ ಕೆರೆಯ ಸ್ವಚ್ಛತೆ ಸಹ ಕಾಪಾಡಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ದೊಡ್ಡಜಾಲ ಗ್ರಾ.ಪಂ.ಅಧ್ಯಕ್ಷ ಎನ್.ಕೆ.ಮಹೇಶ್‌ಕುಮಾರ್, ಬೆಂ.ನಗರ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಅಶೋಕನ್, ಹಿರಿಯ ಮುಖಂಡ ದೊಡ್ಡಜಾಲ ಶ್ರೀನಿವಾಸಯ್ಯ, ತಾ.ಪಂ.ಸದಸ್ಯ ಎಸ್.ಉದಯಶಂಕರ್, ಚಿಕ್ಕಜಾಲ ಗ್ರಾ.ಪಂ.ಅಧ್ಯಕ್ಷ ಲಕ್ಷ್ಮಿಪತಿ, ಯುವ ಕಾಂಗ್ರೆಸ್ ಮುಖಂಡರಾದ ಜಯಕುಮಾರ್, ನವರತ್ನ ಅಗ್ರಹಾರ ಅವಿನಾಶ್ ಸೇರಿದಂತೆ ಇನ್ನಿತರ ಮುಖಂಡರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News