ಹಝ್ರತ್ ಮೌಲಾನ ಅಹ್ಮದ್ ಮಾಝ್ ನಿಧನ

Update: 2019-08-27 17:02 GMT

ಬೆಂಗಳೂರು, ಆ.27: ನಾಗವಾರ ಸಮೀಪದ ಗೋವಿಂದಪುರದಲ್ಲಿರುವ ದಾರುಲ್ ಉಲೂಮ್ ಸಬೀಲುರ್ರಶಾದ್(ಅರೇಬಿಕ್ ಕಾಲೇಜು)ನ ಮುಖ್ಯಸ್ಥ ಶೈಖುಲ್ ಹದೀಸ್ ಹಝ್ರತ್ ಮೌಲಾನ ಅಹ್ಮದ್ ಮಾಝ್(49) ಮಂಗಳವಾರ ಸಂಜೆ ನಿಧನ ಹೊಂದಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರ ಪುತ್ರಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಜೊತೆ ಅಹ್ಮದ್ ಮಾಝ್ ಇದ್ದರು. ಸಂಜೆ ಏಕಾಏಕಿ ಎದೆನೋವು ಕಾಣಿಸಿಕೊಂಡ ಪರಿಣಾಮ ಸ್ಥಳದಲ್ಲಿಯೇ ಅವರು ಕೊನೆಯುಸಿರೆಳೆದರು ಎಂದು ಸಬೀಲುರ್ರಶಾದ್ ಮೂಲಗಳು ಸ್ಪಷ್ಟಪಡಿಸಿವೆ.

ಸಬೀಲುರ್ರಶಾದ್ ಆವರಣದಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆಯಿಂದ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಸಂಜೆ ಅಸರ್ ನಮಾಝ್ ಬಳಿಕ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ದವರು ತಿಳಿಸಿದ್ದಾರೆ.

ದಾರುಲ್ ಉಲೂಮ್ ಸಬೀಲುರ್ರಶಾದ್‌ನ ಮುಖ್ಯಸ್ಥ ಹಾಗೂ ಅಮೀರೆ ಶರೀಅತ್ ಆಗಿದ್ದ ಮೌಲಾನ ಮುಫ್ತಿ ಅಶ್ರಫ್ ಅಲಿ ಅವರ ಪುತ್ರರಾಗಿದ್ದ ಅಹ್ಮದ್ ಮಾಝ್, ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಧಾರ್ಮಿಕ ವಿದ್ವಾಂಸರಾಗಿದ್ದ ಅವರು, ಹಲವಾರು ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.

ಅಹ್ಮದ್ ಮಾಝ್ ಅವರ ನಿಧನಕ್ಕೆ ರಾಜ್ಯದ ಪ್ರಮುಖ ಧಾರ್ಮಿಕ ಮುಖಂಡರು, ರಾಜಕಾರಣಿಗಳು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಕಂಬನಿ ಮಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News