×
Ad

ನೆರೆ, ಧಾರಾಕಾರ ಮಳೆಗೆ ರಾಜ್ಯದಲ್ಲಿ 32 ಸಾವಿರ ಕೋಟಿ ರೂ.ನಷ್ಟ: ಸಿಎಂ ಯಡಿಯೂರಪ್ಪ

Update: 2019-08-27 22:37 IST

ಬೆಂಗಳೂರು, ಆ.27: ರಾಜ್ಯದಲ್ಲಿ ನೆರೆ ಹಾವಳಿ ಹಾಗೂ ಧಾರಾಕಾರ ಮಳೆಯಿಂದಾಗಿ ಅಂದಾಜು 32 ಸಾವಿರ ಕೋಟಿ ರೂ.ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕೇಂದ್ರ ಅಧ್ಯಯನ ತಂಡದೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಪ್ರವಾಹದಿಂದ ಹಾನಿಯಾಗಿದೆ ಎಂದರು. ನೆರೆ ಪರಿಹಾರಕ್ಕೆ ರಾಜ್ಯ ಸರಕಾರದ ಕಡೆಯಿಂದ ಏನೇನು ಮಾಡಬೇಕೋ ಅದನ್ನೆಲ್ಲಾ ತ್ವರಿತವಾಗಿ ಮಾಡಿದ್ದೇವೆ. ಈಗಾಗಲೇ ಪ್ರಧಾನಿ ಹಾಗೂ ಹಣಕಾಸು ಸಚಿವರನ್ನು ಎರಡು ಬಾರಿ ಭೇಟಿ ಮಾಡಿ ಪ್ರವಾಹದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಅವರು ಹೇಳಿದರು. ಕೇಂದ್ರದ ತಂಡ ನಾಳೆ ಕೇಂದ್ರ ಸರಕಾರಕ್ಕೆ ವರದಿ ನೀಡುವ ಸಾಧ್ಯತೆಯಿದೆ. ನಮ್ಮ ನೀರೀಕ್ಷೆಗೂ ಮೀರಿದ ಪರಿಹಾರ ಸಿಗುವ ಸಾಧ್ಯತೆಯಿದೆ. ಪ್ರವಾಹ ನಷ್ಟದ ಬಗ್ಗೆ ನಾವು ಮನವರಿಕೆ ಕೊಡುವುದಕ್ಕಿಂತಲೂ ಹೆಚ್ಚಾಗಿ ಅವರಿಗೆ ಪ್ರವಾಹದ ಬಗ್ಗೆ ಮನವರಿಕೆ ಆಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಹಿಂದೆಂದೂ ಕಂಡರಿಯದಂತಹ ಪ್ರವಾಹ ಸಂಭವಿಸಿದೆ ಎಂದು ಕೇಂದ್ರ ಅಧ್ಯಯನ ತಂಡ ಸಿದ್ಧಪಡಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಎಷ್ಟು ಪ್ರಮಾಣದಲ್ಲಿ ಏನೇನು ಹಾನಿಯಾಗಿದೆ ಎಂಬುದರ ಕುರಿತು ಕೇಂದ್ರ ಅಧ್ಯಯನ ತಂಡ ಯಾವುದೇ ಅಂಕಿ ಅಂಶವನ್ನು ಈ ಹಂತದಲ್ಲಿ ಹೇಳುವುದಿಲ್ಲ ಎಂದು ಅವರು ಹೇಳಿದರು. ಕೇಂದ್ರ ಸರಕಾರಕ್ಕೆ ಅಧ್ಯಯನ ತಂಡ ನಾಳೆ ವರದಿ ಸಲ್ಲಿಸುವ ಸಾಧ್ಯತೆಯಿದೆ. ಆನಂತರ ನಮ್ಮ ಸಚಿವ ಸಂಪುಟದ ತಂಡ ಹೊಸದಿಲ್ಲಿಗೆ ಹೋಗಿ ಕೇಂದ್ರ ಸರಕಾರದ ಸಂಬಂಧಪಟ್ಟ ಸಚಿವರ ಜೊತೆ ಚರ್ಚೆ ನಡೆಸಿ, ಹೆಚ್ಚಿನ ಪರಿಹಾರ ಪಡೆಯಲು ಪ್ರಯತ್ನಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ನಾಳೆ ವಿಧಾನಸೌಧದಲ್ಲಿ ನನ್ನ ಇಲಾಖೆ ವ್ಯಾಪ್ತಿಗೆ ಬರುವ 7 ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಕರೆದಿದ್ದೇನೆ. ಆನಂತರ ಕೇಂದ್ರ ಸರಕಾರಕ್ಕೆ ವರದಿ ಕಳುಹಿಸುತ್ತೇವೆ. ಸಂಪುಟ ಉಪ ಸಮಿತಿಯ ಸಭೆ ಸೇರಿ, ಮುಂದಿನ ಪರಿಹಾರ ಕಾರ್ಯಗಳ ಕುರಿತು ಚರ್ಚೆ ನಡೆಸುತ್ತೇವೆ. ಆ ಸಭೆಯಲ್ಲಿ ಸಂಪುಟದ ಏಳು ಸಚಿವರು ಇರಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಸಭೆಯಲ್ಲಿ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಬಿ.ವೈ.ರಾಘವೇಂದ್ರ, ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News